ಬಳ್ಳಾರಿ: ರೀಲ್ಸ್ ಮಾಡೋದು, ಫೋಟೋ ಶೂಟ್ ಮಾಡೋರು ಮನೆ ಬಾಗಿಲು ಮುರಿದು ಪೆಟ್ರೋಲ್, ಡೀಸೆಲ್ ಹಾಕಿ ಬೆಂಕಿ ಹಚ್ಚಿ ರೀಲ್ಸ್ ಮಾಡುತ್ತಾರೆಯೇ ಎಂದು ಗಂಗಾವತಿ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.
ಕಂಟೋನ್ಮೆಂಟ್ ಪ್ರದೇಶದ ಜಿ ಸ್ಕ್ವಯರ್ ಲೇಔಟ್ ನಲ್ಲಿನ ಮಾದರಿ ಗ್ಲಾಸ್ ಹೌಸ್ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 5 ತಿಂಗಳ ಹಿಂದೆ ಈ ಪ್ರದೇಶದಲ್ಲಿನ ಮುಖ್ಯ ದ್ವಾರದ ಗೇಟ್ ಮುರಿದು ಒಳ ಹೊಕ್ಕು ಕಳುವು ಮಾಡಿದ್ದರು. ಅಗ ಪೊಲೀಸರಿಗೆ ದೂರು ನೀಡಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು ಎಂದರು.
ಆದರೆ ಬಂಧಿತ ಆರೋಪಿಗಳನ್ನು ಬಿಡುಗಡೆ ಮಾಡಿ, ಅವರ ಮೇಲೆ ಎಫ್ಐಆರ್ ದಾಖಲಿಸಬೇಡಿ ಎಂದು ಶಾಸಕ ನಾರಾ ಭರತ್ ರೆಡ್ಡಿ ಅವರೇ ಪೊಲೀಸರಿಗೆ ಒತ್ತಡ ಹಾಕಿದ್ದರು ಎಂದು ತಿಳಿಸಿದ ಜನಾರ್ದನ ರೆಡ್ಡಿ, ಕಳೆದ ನಾಲ್ಕೈದು ತಿಂಗಳು ಹಿಂದಿನಿಂದಲೂ ನಮ್ಮ ಆಸ್ತಿ ಮೇಲೆ ನಾರಾ ಭರತ್ ರೆಡ್ಡಿ ಕಣ್ಣು ಬಿದ್ದಿದೆ.ನಮ್ಮ ಆಸ್ತಿ ಹಾನಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆಂದು ಆರೋಪಿಸಿದರು.
ಇತ್ತೀಚಿಗೆ ನಡೆದ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿ ಕೊಲೆ ನಡೆಯಿತು. ನಮ್ಮ ಮೆನೆ ಮೇಲೆ ಗುಂಡು ಹಾರಿಸಿದರು. ಇದಕ್ಕೆ ಮುಖ್ಯ ಕಾರಣರಾದ ಸತೀಶ್ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ಅವರನ್ನು ಪೊಲೀಸರು ಈವರೆಗೂ ಬಂದಿಸಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ. ಸೋಮಶೇಖರ ರೆ್ಡಿ, ಸುರೇಶ್ ಬಾಬು ಇದ್ದರು.


