ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಪರಶುರಾಮ್ ಹಾಗೂ ಅಶೋಕ್ ಕುಮಾರ್ ಎಂಬುವರಿಗೆ ಶಿಕಾರಿಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ 08 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಸಿಕ್ಕಿದ್ದು, ಅದನ್ನು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮಾಂಗಲ್ಯ ಸರದ ವಾರಸುದಾರರನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಿರುತ್ತಾರೆ.
ತಮಗೆ ದೊರೆತ ಮಾಂಗಲ್ಯ ಸರವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ತೋರಿದ ಇಬ್ಬರಿಗೂ ಸಹ ಪೊಲೀಸ್ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯ್ತು.
ಮನೆ ಮುಂದೆ ಇಟ್ಟಿದ್ದ ಅಡಿಕೆ ಕದ್ದ ಕಳ್ಳರು
ಶಿವಮೊಗ್ಗ : ಮನೆ ಮುಂದೆ ಇಟ್ಟಿದ್ದ ಒಣ ಅಡಿಕೆಯನ್ನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗ ತಾಲೂಕಿನ
ಹನುಮಂತಪುರ ಗ್ರಾಮದಲ್ಲಿ ನಡೆದಿದೆ. ಮನೆಯಂಗಳದಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಚೀಲಗಳನ್ನು ಕಳ್ಳರು ಎಗರಿಸಿದ್ದಾರೆ.
ಹನುಮಂತಪುರ ಗ್ರಾಮದ ನಿವಾಸಿಯೊಬ್ಬರು ತಮ್ಮ ತೋಟದ ಅಡಿಕೆಯನ್ನು ಕಟಾವು ಮಾಡಿ, ಸಂಸ್ಕರಣೆ ಮುಗಿಸಿ ಗೋಣಿ ಚೀಲಗಳಲ್ಲಿ ಕಟ್ಟಿ ಮನೆಯ ಮುಂಭಾಗದಲ್ಲಿ ಇಟ್ಟಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ, ಅಂಗಳದಲ್ಲಿದ್ದ ಒಣ ಅಡಿಕೆಯ ನಾಲ್ಕು ಗೋಣಿ ಚೀಲಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳತನವಾದ ಈ ನಾಲ್ಕು ಚೀಲಗಳಲ್ಲಿ ಸುಮಾರು 2,00,000 ಮೌಲ್ಯದ 3 ಕ್ವಿಂಟಾಲ್ ಒಣ ಅಡಿಕೆಯಿತ್ತು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


