ತುಮಕೂರು: ಎರಡು ಸಾವಿರಕ್ಕೆ ಮರುಳಾಗಬೇಡಿ. ಐದು ವರ್ಷ ಒಂದು ಅವಕಾಶ ಕೊಡಿ, ಈ ಗ್ಯಾರಂಟಿಗಳು ನಿಮ್ಮ ಬದುಕಿಗೆ ಶಾಶ್ವತ ಪರಿಹಾರ ಅಲ್ಲಾ. ಕಾಂಗ್ರೆಸ್ ಸರಕಾರದ ಮೋಸಕ್ಕೆ ಬಲಿಯಾಗಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಹಿಳೆಯರಲ್ಲಿ ಮನವಿ ಮಾಡಿದರು.
ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ರಾಗಿಮುದ್ದೆನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಆದಿಶಕ್ತಿ ಶ್ರೀಮಾರಮ್ಮ ಅಮ್ಮನವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಿಮಗೆ ತಾತ್ಕಾಲಿಕ ಉಪಶಮನ ಅಷ್ಟೇ ಈ ಐದು ಗ್ಯಾರಂಟಿಗಳು. ಇವುಗಳಿಂದ ಏನು ಉಪಯೋಗ ಇಲ್ಲ. ಇದಕ್ಕಾಗಿ ವರ್ಷಕ್ಕೆ ₹50,000 ಕೋಟಿ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ನೀವು ಕಟ್ಟುವ ತೆರಿಗೆ ಹಣವನ್ನೇ ನಿಮಗೆ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕ ₹1ರಿಂದ ₹1.25 ಲಕ್ಷ ಕೋಟಿ ಸಾಲ ಮಾಡುತ್ತಿದೆ. ಈ ಸಾಲವನ್ನು ಗ್ಯಾರೆಂಟಿ ಕೊಟ್ಟವರು ತೀರಿಸಲ್ಲ. ನೀವೇ ತೀರಿಸಬೇಕು ಎಂದು ಕೇಂದ್ರ ಸಚಿವರು ಹೇಳಿದರು.
ಇಡೀ ರಾಜ್ಯದಲ್ಲಿ ಈ ಸರಕಾರ ಸರ್ಕಾರ ಮದ್ಯದ ಹೊಳೆ ಹರಿಸುತ್ತಿದೆ. ಹಳ್ಳಿ ಹಳ್ಳಿಯಲ್ಲಿ ಕಿರಾಣಿ ಅಂಗಡಿಗಳಲ್ಲಿ ಕೂಡ ಮದ್ಯ ದೊರೆಯುತ್ತಿದೆ. ಸಿ.ಎಲ್. 7 ಮದ್ಯ ಪರವಾನಗಿಯನ್ನು ದೊಡ್ಡ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಇಂಥ ಒಂದು ಲೈಸನ್ಸ್ ಕೊಡುವುದಕ್ಕೆ ಇತ್ತೀಚೆಗೆ ಅಬಕಾರಿ ಅಧಿಕಾರಿಗಳು ₹2.50 ಕೋಟಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ನಿಮ್ಮ ಗಂಡಂದಿರಿಗೆ ಚೆನ್ನಾಗಿ ಕುಡಿಸಿ ಅವರನ್ನು ಹಾಳು ಮಾಡಿ ನಿಮಗೆ ₹2000 ಗೃಹಲಕ್ಷ್ಮೀ ಹಣ ಕೊಟ್ಟರೆ ಉಪಯೋಗ ಏನು? ನಿಮ್ಮ ಹಣ ಕಿತ್ತುಕೊಂಡು ನಿಮಗೆ ಅದರಲ್ಲಿ ಅಲ್ಪ ಮೊತ್ತ ನೀಡುತ್ತಿದ್ದಾರೆ. ದಯವಿಟ್ಟು ಎರಡು ಸಾವಿರಕ್ಕೆ ಮರುಳಾಗಬೇಡಿ. ಐದು ವರ್ಷ ಒಂದು ಅವಕಾಶ ಕೊಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ನಾನು ಐದು ಬಾರಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದೇನೆ. ದೇವರ ಆಶೀರ್ವಾದದಿಂದಲೇ ನಾನು ಇನ್ನೂ ಬದುಕಿದ್ದೇನೆ ಎಂದು ಭಾವಿಸಿದ್ದೇನೆ. ನಮಗೆ ಒಂದು ಅವಕಾಶ ಕೊಡಿ. ಐದು ವರ್ಷಗಳ ಉತ್ತಮ ಸರ್ಕಾರ ನೋಡುತ್ತೇವೆ. ಇದು ಜೆಡಿಎಸ್ ಬಿಜೆಪಿ ಸರ್ಕಾರ ಅಲ್ಲ, ಆರೂವರೆ ಕೋಟಿ ಕನ್ನಡಿಗರ ಸರ್ಕಾರ ತರುತ್ತೇವೆ. ಅದಕ್ಕೆ ಅವಕಾಶ ಕೊಡಿ ಎಂದು ಅವರು ವಿನಂತಿಸಿದರು.
ಎರಡು ಬಾರಿ ನಾನು ಮುಖ್ಯಮಂತ್ರಿ ಆಗಿದ್ದೆ. ನಾನು ಜನತೆಗೆ ದ್ರೋಹ ಬಗೆಯದೇ ಕೆಲಸ ಮಾಡಿದ್ದೇನೆ. ನನ್ನ ಆತ್ಮಕ್ಕೆ ತೃಪ್ತಿಯಾಗುವ ರೀತಿಯಲ್ಲಿ ನಾನು ಜನರ ಸೇವೆ ಮಾಡಿದ್ದೇನೆ. ಬೇರೆಯವರ ಕುತಂತ್ರದಿಂದ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲು ಆಗಲಿಲ್ಲ. ನನ್ನ ತಪ್ಪಿನಿಂದ ಆಗಿದ್ದಲ್ಲ. ಅವಕಾಶ ಸಿಕ್ಕಿದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಸಾಲ ಮನ್ನಾ ಎರಡು ಅವಧಿಗಳಲ್ಲಿಯೂ ಮಾಡಿದ್ದೇನೆ. ಕೇಂದ್ರ ಸಹಕಾರ ಕೊಡುವುದಿಲ್ಲ ಎನ್ನುವುದು ತಪ್ಪು, ನಮ್ಮ ನಡವಳಿಕೆ ಮೇಲೆ ಎಲ್ಲವೂ ನಿಂತಿರುತ್ತದೆ. ನಾನು ಎರಡು ಬಾರಿ ಸಾಲ ಮನ್ನಾ ಮಾಡಿದಾಗ ನಾನು ಕೇಂದ್ರದ ಕಡೆ ನೋಡಲಿಲ್ಲ. ರಾಜ್ಯದ ಖಜಾನೆಯಿಂದ ಹಣ ನೀಡಿ ಸಾಲ ಮನ್ನಾ ಮಾಡಿದೆ. ಇವರು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ. ಇದು ಸರಿಯಲ್ಲ ಎಂದರು ಕೇಂದ್ರ ಸಚಿವರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕರಾದ ನಿಂಗಪ್ಪ, ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ನಾಯಕರಾದ ನಾಗರಾಜು, ಉಗ್ರೇಶ, ರವಿಕುಮಾರ್, ಜಗದೀಶ್, ಡಾ.ರವಿ ಮುಂತಾದವರು ಭಾಗವಹಿಸಿದ್ದರು.


