Menu

ನೈಜ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವುದೇ ನಮ್ಮ ಗುರಿ: ಸಚಿವ ಕೃಷ್ಣ ಬೈರೇಗೌಡ

krishna byregowda

ಬೆಂಗಳೂರು: ನವೀಕರಿಸಬಹುದಾದ ಇಂಧನಗಳ ಮೂಲ ಅಭಿವೃದ್ಧಿ ವಿಚಾರದಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ, ನೀತಿ-ನಿಯಮಗಳನ್ನು ಸರಳಗೊಳಿಸುವ ಮೂಲಕ ನೈಜ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವುದೇ ನಮ್ಮ ಗುರಿ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನಗಳ ಘಟಕ ಸ್ಥಾಪನೆಗೆ ಸಂಬಂಧಿಸಿದ ಭೂಮಿ ಸ್ವಯಂ ಚಾಲಿತವಾಗಿಯೇ ಭೂ ಪರಿವರ್ತನೆಗೊಳ್ಳುವ ನೂತನ ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದರು.

“ಪ್ರಸ್ತುತ ಜಗತ್ತಿನಲ್ಲಿ ಅತಿಹೆಚ್ಚು ಚರ್ಚೆಯಾಗುತ್ತಿರುವ ವಿಚಾರ ಇಂಧನ ಭದ್ರತೆ. ಇಂಧನ ಭದ್ರತೆ ಇಲ್ಲದ ಯಾವ ದೇಶವೂ ಅಭಿವೃದ್ಧಿಯ ಪಥದಲ್ಲಿ ನಡೆಯುವುದು, ಆರ್ಥಿಕವಾಗಿ ಸಬಲರಾಗುವುದು ಅಸಾಧ್ಯ. ತಾಂತ್ರಿಕತೆ, ಬೌದ್ಧಿಕ ಶಕ್ತಿ ಆಧಾರಿತ ಆರ್ಥಿಕತೆ ಸಹ ವಿದ್ಯುತ್ ಸೇರಿದಂತೆ ನಾನಾ ಇಂಧನ ಮೂಲಗಳ ಮೇಲೆಯೇ ಅವಲಂಭಿತವಾಗಿವೆ. ನಮ್ಮ ದೇಶದಲ್ಲಿ ಕಡುಬಡವರೂ ಸಹ ಬಡತನದಿಂದ ವಿಮುಕ್ತಿ ಹೊಂದಲು, ನೀರಿನ ಭದ್ರತೆಯಂತೆಯೇ ಇಂಧನ ಭದ್ರತೆಯೂ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಭಾರತಕ್ಕೆ ಇಂಧನ ಭದ್ರತೆಯನ್ನು ಖಾತರಿಪಡಿಸುವ ಜವಾಬ್ದಾರಿ ನವೀಕರಿಸಬಹುದಾದ ಇಂಧನಗಳ ಘಟಕಗಳ ಮೇಲಿದೆ” ಎಂದು ಅಭಿಪ್ರಾಯಪಟ್ಟರು.

“ಕರ್ನಾಟಕ ಆರಂಭದಿಂದಲೂ ನವೀಕರಿಸಬಹುದಾದ ಇಂಧನಗಳ ಘಟಕ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಆದರೂ, ಈ ಘಟಕಗಳ ಸ್ಥಾಪನೆಗೆ ಈ ಹಿಂದೆ ಭೂ ಪರಿವರ್ತನೆ ಕಡ್ಡಾಯವಾಗಿತ್ತು. ಭೂ ಪರಿವರ್ತನೆಗೆ ಕನಿಷ್ಠ 6 ತಿಂಗಳು ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದರು. ಭ್ರಷ್ಟಾಚಾರ ಎಲ್ಲೆ ಮೀರಿತ್ತು. ಇದರಿಂದ ಅಧಿಕಾರಿಗಳು ಲಾಭ ಪಡೆದರೋ ಅಥವಾ ಮಧ್ಯವರ್ತಿಗಳು ಲಾಭ ಪಡೆದರೋ ಗೊತ್ತಿಲ್ಲ. ಆದರೆ, ಸರ್ಕಾರಕ್ಕೆ ಮಾತ್ರ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗಾಗಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ, ನೈಜ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದಲೇ ಭೂ ಪರಿವರ್ತನೆಯನ್ನು ಸ್ವಯಂ ಚಾಲಿತಗೊಳಿಸುವ ನೂತನ ತಂತ್ರಾಂಶಕ್ಕೆ ಇಂದು ಚಾಲನೆ ನೀಡಲಾಗಿದೆ. ಇದರಿಂದ ಈ ಉದ್ಯಮಕ್ಕೆ ಮತ್ತಷ್ಟು ಹೆಚ್ಚಿನ ಬಂಡವಾಳ ಹರಿದುಬರುವ ಭರವಸೆ ಇದೆ. ಈ ತಂತ್ರಾಂಶ ಇಡೀ ದೇಶದಲ್ಲೇ ಮಾದರಿ ವ್ಯವಸ್ಥೆ ಉದಾಹರಣೆಯಾಗಲಿದೆ” ಎಂದು ಮೆಚ್ಚುಗೆ ಸೂಚಿಸಿದರು.

“ನಮ್ಮ ದೇಶದಲ್ಲಿ ಜಿಡಿಪಿಗೆ ಕೃಷಿಯ ಕೊಡುಗೆ ಶೇ.13 ರಷ್ಟು ಮಾತ್ರ. ಆದರೆ, ಶೇ.45 ರಷ್ಟು ಜನ ತಮ್ಮ ಉದ್ಯೋಗಕ್ಕಾಗಿ ಕೃಷಿಯನ್ನೇ ಅವಲಂಭಿಸಿದ್ದಾರೆ. ಕೃಷಿ ನಡೆಯಲು ವಿದ್ಯುತ್ ಅಗತ್ಯ. ಬೋರ್ವೆಲ್ ಮಾತ್ರವಲ್ಲ, ನೀರಾವರಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಿಗೂ ವಿದ್ಯುತ್ ಬೇಕು. ಆದರೆ, ಜನ ಸಾಮಾನ್ಯರು ಈ ವಿದ್ಯುತ್ ಅನ್ನು ಮತ್ತಷ್ಟು ಸುಲಭವಾಗಿ ಮತ್ತು ಅಗ್ಗವಾಗಿ ಪಡೆಯಲು ನವೀಕರಿಸಬಹುದಾದ ಇಂಧನ ಮೂಲಗಳಿಂದ ಮಾತ್ರ ಸಾಧ್ಯ. ಭಾರತವೂ ಸಹ ಹಲವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಲ್ಲಿದ್ದಲು ಸೇರಿದಂತೆ ಜೈವಿಕ ಇಂಧನಗಳ ಮೇಲಿನ ಅವಲಂಭನೆಯನ್ನು ಕಡಿಮೆ ಮಾಡುವ ಬಗ್ಗೆ ಭರವಸೆ ನೀಡಿದೆ. ಆದರೆ, ಈ ಭರವಸೆ ಈಡೇರಲು ಹೆಚ್ಚಿನ ಸಂಖ್ಯೆಯಲ್ಲಿ ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆ ಅಗತ್ಯ” ಎಂದು ಪುನರುಚ್ಚರಿಸಿದರು.

ದೇಶಾದ್ಯಂತ ನವೀಕರಿಸಬಹುದಾದ ಇಂಧನ ಘಟಕಗಳಿಂದ 500 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದ್ದು, 300 ಗಿಗಾ ವ್ಯಾಟ್ ಗಿಂತ ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಈ ಪೈಕಿ ಕರ್ನಾಟಕವೇ ಶೇ. 12 ರಿಂದ ಶೇ.13 ರಷ್ಟು ವಿದ್ಯುತ್ ಪೂರೈಸುತ್ತಿದೆ. ಉಳಿದ 200 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ದೇಶಾದ್ಯಂತ ಕನಿಷ್ಟ 8 ಲಕ್ಷ ಎಕರೆ ಭೂಮಿ ಬೇಕು. ಈ ಪೈಕಿ 40 ರಿಂದ 50 ಗಿಗಾ ವ್ಯಾಟ್ ವಿದ್ಯುತ್ ಅನ್ನು ರಾಜ್ಯದಲ್ಲೇ ಉತ್ಪಾದಿಸುವ ಗುರಿ ಹೊಂದಿದ್ದು, ನೂತನ ಘಟಕಗಳ ಸ್ಥಾಪನೆಗೆ ಕನಿಷ್ಟ 1 ಲಕ್ಷ ಎಕರೆ ಭೂಮಿ ಬೇಕಾಗಬಹುದು. ಈ ಎಲ್ಲಾ ವಿಚಾರಗಳನ್ನೂ ಆಲೋಚಿಸಿಯೇ ಕಂದಾಯ ಹಾಗೂ ಇಂಧನ ಇಲಾಖೆ ಒಟ್ಟಾಗಿ ಭೂ ಪರಿವರ್ತನೆಯನ್ನು ಸರಳಗೊಳಿಸುವ ಕೆಲಸಕ್ಕೆ ಕೈಹಾಕಿದೆ. ಇದರಿಂದ ವಿದ್ಯುತ್ ಉತ್ಪಾದನೆಯನ್ನು ಕರ್ನಾಟಕ ಇಡೀ ದೇಶದಲ್ಲೇ ಅತ್ಯಂತ ಸ್ವಾವಲಂಭಿ ರಾಜ್ಯವಾಗಲಿದೆ, ಹೂಡಿಕೆದಾರರಿಗೂ ಇದರಿಂದ ಅನುಕೂಲವಾಗಲಿದೆ” ಎಂದು ಆಶಯ ವ್ಯಕ್ತಪಡಿಸಿದರು.

Related Posts

Leave a Reply

Your email address will not be published. Required fields are marked *