ಬೆಳಗಾವಿ: ಪ್ರೀತಿ ಹಾಗೂ ಅಂತರ್ಜಾತಿ ವಿವಾಹದ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೀಡಗಲಿ ಗ್ರಾಮದಲ್ಲಿ ಎರಡು ಕುಟುಂಬಗಳಿಗೆ ಕಳೆದ ಎರಡು ವರ್ಷಗಳಿಂದ ಅಮಾನವೀಯವಾಗಿ ‘ಸಾಮಾಜಿಕ ಬಹಿಷ್ಕಾರ’ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಕೀರ್ತಿ ಹಾಗೂ ಭೂತನಾಥ ಎಂಬುವವರು 2022ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮದ ಪ್ರಮುಖರು, ಅವರ ಕುಟುಂಬಗಳ ಮೇಲೆ ಕಟ್ಟುನಿಟ್ಟಿನ ಬಹಿಷ್ಕಾರ ಹೇರಿದ್ದಾರೆ. ಈ ಕುಟುಂಬಗಳೊಂದಿಗೆ ಮಾತನಾಡಿದರೆ 11,000 ರೂ. ದಂಡ ವಿಧಿಸುವ ಫರ್ಮಾನು ಹೊರಡಿಸಲಾಗಿದೆ. ಕುಡಿಯುವ ನೀರು, ದೇವಸ್ಥಾನ ಪ್ರವೇಶ ಹಾಗೂ ಅಂಗನವಾಡಿ ಸೌಲಭ್ಯವನ್ನೂ ಇವರಿಗೆ ನಿರಾಕರಿಸಲಾಗಿದೆ.
ಭೂತನಾಥ ಅವರ ತಂದೆ ನಿಧನರಾದಾಗ ಅಂತಿಮ ಸಂಸ್ಕಾರಕ್ಕೂ ಅಡ್ಡಿಪಡಿಸಿ, ಸ್ಮಶಾನ ಬಳಸಲು 3,100 ರೂ. ದಂಡ ವಸೂಲಿ ಮಾಡಲಾಗಿದೆ ಎಂಬ ಆಘಾತಕಾರಿ ದೂರು ಕೇಳಿಬಂದಿದೆ.
ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಡಿಎಸ್ ಎಸ್ ಎಚ್ಚರಿಕೆ
ಈ ಅನಿಷ್ಟ ಪದ್ಧತಿಯ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಂತ್ರಸ್ತರಿಗೆ ನ್ಯಾಯ ಒದಗಿಸದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ತಹಶೀಲ್ದಾರರಿಗೆ ಎಚ್ಚರಿಕೆ ನೀಡಿದೆ.


