ಕೊಲೆ ಮಾಡಿ ಜೈಲು ಸೇರಿದ್ದ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಪೆರೋಲ್ ಮೇಲೆ ಹೊರಗೆ ಬಂದ ಜೋಡಿ ಇದೀಗ ಮದುವೆಗೆ ಸಜ್ಜಾಗಿದ್ದಾರೆ.
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಕೊಂದು ಜೈಲು ಪಾಲಾಗಿರುವ ಮಹಿಳೆ ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು 5 ಜನರನ್ನು ಕೊಂದ ಹಂತಕ ಹನುಮಾನ್ ಪ್ರಸಾದ್ ಮದುವೆ ಮಾಡಿಕೊಳ್ಳುತ್ತಿರುವ ಜೈಲುಹಕ್ಕಿಗಳು!
ಅಲ್ವಾರ್‌ನ ಬರೋಡ ಮೇವ್‌ನಲ್ಲಿ ತಮ್ಮ ವಿವಾಹಕ್ಕಾಗಿ ರಾಜಸ್ಥಾನ ಹೈಕೋರ್ಟ್‌ನಿಂದ 15 ದಿನಗಳ ತುರ್ತು ಪೆರೋಲ್‌ಗಳನ್ನು ಪಡೆದಿರುವ ಜೈಲು ಹಕ್ಕಿಗಳು ರಾಜಸ್ಥಾನದ ಅಲ್ವಾರ್‌ನಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಪ್ರಿಯಾ ಸೇಠ್ ಎಂಬಾಕೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವಕ ದುಶ್ಯಂತ್ ಶರ್ಮಾ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾಳೆ. ಸಂಗನೇರ್ ಓಪನ್ ಜೈಲಿನಲ್ಲಿ ಆಕೆ ಜೈಲುವಾಸ ಅನುಭವಿಸುತ್ತಿದ್ದಾಳೆ. ಆರು ತಿಂಗಳ ಹಿಂದೆ ಇದೇ ಜೈಲಿನಲ್ಲಿ ಪ್ರಸಾದ್ ಎಂಬಾತನ ಪರಿಚಯವಾಗಿ ಪರಸ್ಪರರು ಪ್ರೀತಿಸುತ್ತಿದ್ದಾರೆ.
ಕೊಲೆಗಾರ್ತಿ ಪ್ರಿಯಾ ಸೇಠ್
ಆಕೆಗೆ ಶಿಕ್ಷೆ ವಿಧಿಸಿದ ಕೊಲೆ ಪ್ರಕರಣವು 2018 ರ ಹಿಂದಿನದು. ಮೇ 2 ರಂದು ಸೇಠ್ ತನ್ನ ಪ್ರೇಮಿ ಮತ್ತು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಸಿಂಗ್‌ನನ್ನು ಹತ್ಯೆ ಮಾಡಿದ್ದಳು. ತನ್ನ ಲವ್ವರ್ ದೀಕ್ಷಾಂತ್ ಕಮ್ರಾ ಸಾಲ ತೀರಿಸಲು ಪ್ರಿಯಾ ಯೋಜಿಸಿದ್ದಳು. ಅದಕ್ಕಾಗಿ ಸಿಂಗ್ ಜೊತೆ ಸ್ನೇಹ ಬೆಳೆಸಿದಳು. ಸಿಂಗ್‌ನನ್ನು ಬಜಾಜ್ ನಗರದ ಫ್ಲಾಟ್‌ಗೆ ಕರೆಸಿಕೊಂಡು, ಆತನ ತಂದೆಗೆ ಕರೆ ಮಾಡಿ 10 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಳು. ಸಿಂಗ್ ತಂದೆ 3 ಲಕ್ಷ ರೂ. ವ್ಯವಸ್ಥೆ ಮಾಡಿ ಕೊಟ್ಟರು. ಸಿಂಗ್‌ನನ್ನು ಬಿಟ್ಟರೆ ಪೊಲೀಸರಿಗೆ ನಮ್ಮನ್ನು ಹಿಡಿದುಕೊಡ್ತಾನೆ ಅಂತ ಹೆದರಿ ಪ್ರಿಯಾ ಸೇಠ್ ಮತ್ತು ಆಕೆಯ ಪ್ರಿಯಕರ ಇಬ್ಬರೂ ಸೇರಿ ಕೊಲೆ ಮಾಡಿದ್ದರು.
5 ಕೊಲೆ ಮಾಡಿದ ಹನುಮಾನ್ ಪ್ರಸಾದ್
ತನಗಿಂತ 10 ವರ್ಷ ದೊಡ್ಡವಳಾದ ತನ್ನ ಗೆಳತಿಯ ಪತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಸಾದ್ ಶಿಕ್ಷೆ ಅನುಭವಿಸುತ್ತಿದ್ದಾನೆ. ಪ್ರಸಾದ್‌ನ ಗೆಳತಿ ಸಂತೋಷ್ ಅಲ್ವಾರ್‌ನಲ್ಲಿ ಟೇಕ್ವಾಂಡೋ ಆಟಗಾರ್ತಿಯಾಗಿದ್ದಳು. 2017ರ ಅಕ್ಟೋಬರ್ 2 ರಂದು ರಾತ್ರಿ ತನ್ನ ಪತಿ ಮತ್ತು ಮಕ್ಕಳನ್ನು ಕೊಲ್ಲಲು ತನ್ನ ಮನೆಗೆ ಕರೆದಿದ್ದಳು. ಸಹಚರನೊಂದಿಗೆ ಅಲ್ಲಿಗೆ ಆಗಮಿಸಿದ ಪ್ರಸಾದ್, ಪ್ರೇಯಸಿಯ ಪತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.
ಸಂತೋಷ್‌ನ ಮೂವರು ಮಕ್ಕಳು ಮತ್ತು ಅವರೊಂದಿಗೆ ವಾಸಿಸುತ್ತಿದ್ದ ಸೋದರಳಿಯ ಕೊಲೆ ಪ್ರಕರಣದ ಸಾಕ್ಷಿಗಳಾಗಿದ್ದರು. ಸಿಕ್ಕಿಬೀಳುವ ಭಯದಿಂದ ಅವರನ್ನೂ ಕೊಲೆ ಮಾಡುವಂತೆ ಪ್ರಸಾದ್‌ನ ಗೆಳತಿ ತಿಳಿಸಿದರು. ಅದರಂತೆ ಅವರನ್ನೂ ಹತ್ಯೆ ಮಾಡಿದ್ದ. ಅಲ್ವಾರ್‌ನಲ್ಲಿ ನಡೆದ ಅತ್ಯಂತ ಕುಖ್ಯಾತ ಕೊಲೆ ಪ್ರಕರಣಗಳಲ್ಲಿ ಆ ರಾತ್ರಿ ನಾಲ್ಕು ಮಕ್ಕಳು ಮತ್ತು ಒಬ್ಬ ವ್ಯಕ್ತಿಯ ಹತ್ಯೆಯಾಗಿತ್ತು.


