ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಭೂಮಿ ಕುಸಿದಿದ್ದು ವಾಹನ ಸವಾರರು ಹೈರಾಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಡೈರಿ ಬಳಿ ನಡೆದಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕುಂಟುತ್ತಾ ಸಾಗುತ್ತಿದ್ದು ಮಾಚೇನಹಳ್ಳಿ ಶಿಮುಲ್ ಡೇರಿ ಬಳಿ ನಡೆಯುತ್ತಿರುವ ಅಂಡರ್‌ಪಾಸ್ ಕಾಮಗಾರಿಯಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದೆ. ವಾಹನಗಳು ಮುಂದೆ ಹೋಗಲು ಆಗದೆ, ಹಿಂದೆ ಹೋಗಲು ಆಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ಭಾಗದಲ್ಲಿ ಮಾತ್ರ ಸರ್ವೀಸ್ ರಸ್ತೆ ಇದ್ದು, ಈ ಭಾಗದಲ್ಲಿ ಮತ್ತೊಮ್ಮೆ ಭೂಕುಸಿತ ಆಗಿದೆ. ಮತ್ತೊಂದು ಭಾಗದ ಸರ್ವೀಸ್ ರಸ್ತೆಗೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಓಡಾಟಕ್ಕೆ ಮುಕ್ತವಾಗಿಲ್ಲ. ಅಲ್ಲದೇ ಈ ಭಾಗದಲ್ಲೂ ಭೂಕುಸಿತ ಸಂಭವಿಸಿದೆ. ಹಾಗಾಗಿ ಒಂದು ಕಡೆ ರಸ್ತೆ ಪೂರ್ಣಗೊಳಿಸದೇ ಮತ್ತೊಂದು ಕೆಲಸ ನಡೆಸುತ್ತಿರುವುದು ದುರಂತಕ್ಕೆ ಕಾರಣವಾಗಿದೆ.
ಶಿವಮೊಗ್ಗದಿಂದ ಬೆಂಗಳೂರು ಹೋಗುವ ಮುಕ್ಕಾಲು ಭಾಗ ವಾಹನಗಳು ಇದೇ ಮಾರ್ಗದಲ್ಲಿ ಹೋಗುವುದರಿಂದ ವಾಹನಗಳ ಸಂಖ್ಯೆ ಹೆಚ್ಚಿರುತ್ತದೆ. ಇಲ್ಲಿ ಅಂಡರ್‌ಪಾಸ್ ಮಾಡಲು ನಾಲ್ಕು ವರ್ಷದ ಹಿಂದೆ ಕೆಲಸ ಆರಂಭಿಸಿದ್ದು ಈವರೆಗೆ ಮುಗಿದಿಲ್ಲ. ಮುಂದಿನ ಮಳೆಗಾಲದೊಳಗೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಶಿಮುಲ್ ಎದುರು ಈಗಾಗಲೇ ಒಮ್ಮೆ ಭೂಕುಸಿತ ಸಂಭವಿಸಿದ್ದು ಕಲ್ಲು ಮಣ್ಣು ತುಂಬಿ ಬಿಗಿ ಮಾಡಲಾಗಿದೆ. ಈಗ ಭೂಕುಸಿತವಾಗಿರುವ ಬಳಿ ದೊಡ್ಡ ಲಾರಿ ಬಂದರೆ ಎದುರಿನ ವಾಹನ ಮುಂದೇ ಹೋಗುವುದಿಲ್ಲ. ನಾಲ್ಕು ವರ್ಷದಿಂದ ಕುಂಟುತ್ತಿರುವ ಕಾಮಗಾರಿಗೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.


