ಅಹಮದಾಬಾದ್‌ನ ವಸ್ತ್ರಾಪುರ ಪ್ರದೇಶದಲ್ಲಿ ನಡೆದಿದೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಶಕ್ತಿಸಿಂಹ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಸಿಂಗ್ ಗೋಹಿಲ್ ಅವರು ಪತ್ನಿ ರಾಜೇಶ್ವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದು, ನಂತರ ಪೊಲೀಸರ ಎದುರೇ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿ ಯಶ್‌ರಾಜ್ 108 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದ್ದರು. ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ನೆರವು ಬೇಕು ಎಂದು ತಿಳಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ವೈದ್ಯರು ರಾಜೇಶ್ವರಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಯಶ್‌ರಾಜ್ ಬಳಿ ಪರವಾನಗಿ ಹೊಂದಿದ ಪಿಸ್ತೂಲು ಇದ್ದು, ಆಕಸ್ಮಿಕವಾಗಿ ಗುಂಡು ಹಾರಿದ್ದು ಪತ್ನಿಯ ಕುತ್ತಿಗೆಗೆ ತಗುಲಿದ ಪರಿಣಾಮ ಆಕೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಮೃತದೇಹವನ್ನು ಪರೀಕ್ಷೆಗಾಗಿ ಆಂಬ್ಯುಲೆನ್ಸ್‌ಗೆ ಸಾಗಿಸಲು ಸಿದ್ಧತೆ ನಡೆಸುತ್ತಿದಾಗ ಯಶ್‌ರಾಜ್ ಮನೆಯ ಇನ್ನೊಂದು ಕೋಣೆಗೆ ತೆರಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ನಡೆದಾಗ ಯಶ್‌ರಾಜ್ ತಾಯಿ ಮನೆಯ ಮತ್ತೊಂದು ಕೋಣೆಯಲ್ಲಿದ್ದರು. ಆಂಬ್ಯುಲೆನ್ಸ್ ಸಿಬ್ಬಂದಿ ಬಂದ ನಂತರ ಈ ಘಟನೆ ನಡೆದಿರುವುದು ಅವರಿಗೆ ತಿಳಿದಿದೆ. ಈ ಕೊಲೆಗೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.
ಯಶ್‌ರಾಜ್ ಮತ್ತು ರಾಜೇಶ್ವರಿ ಬುಧವಾರ ಸಂಜೆ ಸಂಬಂಧಿಕರ ಮನೆಗೆ ಭೋಜನಕ್ಕೆ ತೆರಳಿದ್ದರು. ಅಲ್ಲಿಂದ ವಾಪಸಾದ ರಾತ್ರಿಯೇ ಈ ದುರಂತ ನಡೆದಿದೆ. ಮದುವೆಯಾದ ನಂತರ ಅವರು ಸಂತೋಷದಿಂದ ಜೀವನ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಮುಂದಿನ ತಿಂಗಳು ವಿದೇಶ ಪ್ರವಾಸಕ್ಕೆ ಹೋಗುವ ಯೋಜನೆ ಮಾಡಿದ್ದು, ವೀಸಾ ಪ್ರಕ್ರಿಯೆ ನಡೆಯುತ್ತಿತ್ತು. ರಾಜೇಶ್ವರಿ ಪ್ರವಾಸಕ್ಕೆ ಅಗತ್ಯ ಸಿದ್ಧತೆಗಳಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ. ಯಶ್‌ರಾಜ್ ಸಿಂಗ್ ಗೋಹಿಲ್ ಗುಜರಾತ್ ಮೆರಿಟೈಮ್ ಬೋರ್ಡ್‌ನಲ್ಲಿ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರಿಗೆ ಬಡ್ತಿಯೂ ಸಿಕ್ಕಿತ್ತು.


