ಬೆಳಗಾವಿಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮದುವೆ ಆಗಿ ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲವೆಂದು ಕಾಟ ಕೊಡುತ್ತಿದ್ದ ಹೆಂಡತಿಯನ್ನು ಗಂಡನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪತ್ನಿ ರಾಜೇಶ್ವರಿ (21) ಕೊಲೆಯಾಗಿದ್ದು, ಪತಿ ಫಕೀರಪ್ಪ ಗಿಲಕ್ಕನವರ ಕೊಲೆ ಆರೋಪಿ.
ಪತ್ನಿಯನ್ನು ಕೊಂದ ಆತ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಕಥೆ ಕಟ್ಟಿದ್ದ. ಅಂತ್ಯಕ್ರಿಯೆಗೆ ಬಂದ ಪೋಷಕರು ಮೃತ ರಾಜೇಶ್ವರಿ ಕೊರಳಲ್ಲಿ ಕಾಣಿಸಿದ್ದ ಗುರುತೊಂದನ್ನು ನೋಡಿ ಅನುಮಾನಗೊಂಡು ಬೈಲಹೊಂಗಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಕೊಲೆ ಎಂಬುದು ಗೊತ್ತಾಗಿದೆ. ಕೂಡಲೇ ಪೊಲೀಸರು ಆರೋಪಿ ಫಕೀರಪ್ಪ ಗಿಲಕ್ಕನವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿ ರುವ ಪೊಲೀಸರು ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ.
ಸ್ನೇಹಿತೆ ಜತೆಗಿದ್ದ ಯುವಕನ ಬೆದರಿಸಿ ದರೋಡೆ: ಇಬ್ಬರು ಅರೆಸ್ಟ್
ದಾವಣಗೆರೆಯ ನ್ಯಾಮತಿಯಲ್ಲಿ ಸ್ನೇಹಿತೆಯ ಜತೆಗಿದ್ದ ಯುವಕನನ್ನು ಬೆದರಿಸಿ ದರೋಡೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಚಿಕೋನಹಳ್ಳಿಯ ಅಣ್ಣಪ್ಪನಾಯ್ಕ (27) ಹಾಗೂ ಚೇತನ್ (26) ಬಂಧಿತರು.
ಕಲ್ಪಗಿರಿ ರಂಗನಾಥ ಸ್ವಾಮಿ ದೇವಸ್ಥಾನದ ಬೆಟ್ಟದ ವಿಂಡ್ ಫ್ಯಾನ್ ಬಳಿ ಬಂದಿದ್ದ ಶಿವಮೊಗ್ಗದ ಯುವಕ – ಯುವತಿಯ ವೀಡಿಯೊ ಮಾಡಿ ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಹಣ ಕಳೆದುಕೊಂಡ ಯುವಕ ನ್ಯಾಮತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧಿಸಿ 30,000 ರೂ. ನಗದು ಹಾಗೂ ಮೊಬೈಲ್, ಬೈಕ್ ವಶಕ್ಕೆ ಪಡೆದಿದ್ದಾರೆ.


