Menu

ರಾಜ್ಯಪಾಲರ ಮುಂದಿಟ್ಟು ಆಟ: ಒಕ್ಕೂಟ ವ್ಯವಸ್ಥೆಯ ಕೆಟ್ಟ ಪರಂಪರೆ

ಕೇಂದ್ರ ಮತ್ತು ರಾಜ್ಯ ನಡುವೆ ಕಾನೂನಿನ ಕೊಂಡಿ ಮತ್ತು ರಾಜ್ಯಾಡಳಿತಕ್ಕೆ ಹೊಣೆಗಾರರಾದ ರಾಜ್ಯಪಾಲರು ಮತ್ತು ಲೋಕಭವನಕ್ಕೆ ರಾಜಕೀಯ ಲೇಪ ಹಚ್ಚಿ ಇವರನ್ನು ತೊಗಲುಗೊಂಬೆಯಾಗಿ ಪರಿಗಣಿಸಿ ಆಟವಾಡುವುದು ಕೇಂದ್ರದ ಕೆಟ್ಟ ರಾಜಕೀಯ ಪರಂಪರೆ ಎನ್ನದೆ ವಿಧಿಯಿಲ್ಲ.

ರಾಜ್ಯಪಾಲರಾದವರ ಕರ್ತವ್ಯಗಳು ಮತ್ತು ವಿಧಿ ನಿರ್ವಹಣೆಗಳ ಬಗ್ಗೆ ಇಂದು ಲೋಕಸಭೆಯಲ್ಲಿ ಚರ್ಚೆಯಾಗುವ ತುರ್ತು ಅಗತ್ಯವಿದೆ. ದೇಶದ ಸಂವಿಧಾನದ ಪರಮಾಶಯಗಳಿಗೆ ಭಂಗವಾಗುವ ರೀತಿಯಲ್ಲಿ ರಾಜ್ಯಪಾಲರ ವರ್ತನೆ ಇರುವುದೆಂದಾಗ ಇದಕ್ಕೆ ಪರಿಹಾರಮಾರ್ಗಗಳನ್ನಿಂದು ಪ್ರಜಾತಂತ್ರದ ಸರ್ವೋನ್ನತ ಸದನವಾದ ಸಂಸತ್ತಿನಲ್ಲಿ ಈ ಸಮಸ್ಯೆ ಪರಿಹಾರ  ಕಾಣಬೇಕಿದೆ.

ಜಂಟಿ ಅಧಿವೇಶನ ಮತ್ತು ರಾಜ್ಯಪಾಲರ ಭಾಷಣ ಇವೆಲ್ಲವೂ, ದೇಶದ ಸಂವಿಧಾನದಲ್ಲಿ ಉಲ್ಲೇಖವಾಗಿರುವ ವಿಧಿಗಳು. ಇವೆಲ್ಲವೂ ಯಾಕೆ ಬೇಕೆಂಬುದಕ್ಕೆ ಸಂವಿಧಾನಕರ್ತರು, ಎಪ್ಪತ್ತು ವರ್ಷಗಳ ಹಿಂದೆಯೇ ಆಲೋಚಿಸಿ ಸಿದ್ಧಪಡಿಸಿದ ಸಂವಿಧಾನ. ಒಂದು ಕಡೆ ಈ ದೇಶದಲ್ಲಿ ಸಂವಿಧಾನವೇ ಪರಮೋಚ್ಚ .ಇದನ್ನು ಉಲ್ಲಂಘಿಸುವುದು ಸಲ್ಲದು ಎಂಬ ಜಪ ಮುಂದುವರಿದಿದೆ. ಮತ್ತೊಂದು ದಿಕ್ಕಿನಲ್ಲಿ ಇದರ ವಿರುದ್ಧವೇ ನಡೆದುಕೊಳ್ಳುವ ಪರಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ರಾಜ್ಯಪಾಲರಾದವರು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟರೂ, ಅವರು ರಾಜ್ಯದ ಪ್ರಥಮರಾಗಿ ಸಂವಿಧಾನದ ಮೂಲ ಆಶಯಗಳಿಗೆ ಬದ್ಧರಾಗಿರಬೇಕಿದೆ. ಆದರೆ ಇದು ಇಂದಿನ ಕೆಲ ರಾಜ್ಯಗಳಲ್ಲಿ ಅನಗತ್ಯ ಸಂಘರ್ಷ ತಲೆದೋರುವುದನ್ನು ಕಂಡಾಗ ರಾಜ್ಯಪಾಲರ ಸಂವಿ ಧಾನಾತ್ಮಕ ಕರ್ತವ್ಯ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರತ್ಯಕ್ಷ ಮತ್ತು ಪರೋಕ್ಷ ಕೈವಾಡ ಅಥವಾ ಪಾತ್ರವಿರುವುದನ್ನು ನಾವಿಂದು ಸ್ಪಷ್ಟವಾಗಿ ಕಾಣಬಹುದು.

ಬಹುಜನ ಮತ್ತು ವಿಭಿನ್ನ ಜನಾದೇಶವನ್ನು ಹೊಂದಿರುವ ಭಾರತದ ವಿವಿಧ ರಾಜ್ಯಗಳಿಂದ ಕೇಂದ್ರ ಸರ್ಕಾರ ಏಕಪಕ್ಷೀಯ ವಿಧೇಯತೆ ಮತ್ತು ನಮ್ರತೆ ತೋರಬೇಕೆಂದು ಅಪೇಕ್ಷಿಸುವುದೇ ಸರಿಯಲ್ಲ. ಇದು ಭಾರತದಂತಹ ಒಕ್ಕೂಟ ವ್ಯವಸ್ಥೆಯ ಆಡಳಿತವನ್ನು ಹೊಂದಿದ ದೇಶದಲ್ಲಿ ಸುಗಮವಾಗಿ ಕಾರ್ಯ ನಿರ್ವಹಿಸುವುದು ಅಸಾಧ್ಯ. ಎಲ್ಲಕ್ಕಿಂತ ಮಿಗಿಲಾಗಿ ಒಕ್ಕೂಟ ವ್ಯವಸ್ಥೆಯ ಪ್ರಜಾತಂತ್ರದಲ್ಲಿ ರಾಜ್ಯಪಾಲರಾದವರ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳದಿದ್ದಲ್ಲಿ ಸರ್ಕಾರ ಮತ್ತು ರಾಜ್ಯಪಾಲರು ಜನತೆಯ ದೃಷ್ಟಿಯಲ್ಲಿ ಖಳನಾಯಕಾಗಿ ಬಿಂಬಿತವಾಗುವುದು ಖಂಡಿತ. ಆದರೆ ಒಕ್ಕೂಟ ವ್ಯವಸ್ಥೆ ಎಂಬ ಮೆಕಾನಿಸಂ ಸುಗಮವಾಗಿ ನಡೆಯಬೇಕಾದರೆ, ರಾಜ್ಯಪಾಲರಾದವರ ಮೇಲೆ ಪ್ರತಿಯೊಂದು ವಿಷಯದಲ್ಲಿಯೂ ಕೇಂದ್ರ ಸರ್ಕಾರವು ಅನಗತ್ಯವಾಗಿ ಹೊರೆ ಹೇರುವುದನ್ನು ನಿಲ್ಲಿಸಬೇಕು ಮತ್ತು ರಾಜ್ಯಗಳು ತಮಗಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ಚಲಾಯಿಸಲು ಕೇಂದ್ರವು ಅವಕಾಶ ನೀಡಬೇಕು. ಇಲ್ಲವಾದಲ್ಲಿ ವಿಧಾನಸಭೆ, ರಾಜ್ಯಪಾಲ, ರಾಜ್ಯ ಸರ್ಕಾರ, ಡೈರೆಕ್ಟೀವ್ಸ್ ಆಫ್ ಸ್ಟೇಟ್ ಪ್ರಿನ್ಸಿಪಲ್ಸ್ ಎಂಬುದಕ್ಕೆ ಅರ್ಥವೇ ಇರುವುದಿಲ್ಲ!

ಎಪ್ಪತ್ತು ವರ್ಷಗಳ ದೇಶವು ಒಕ್ಕೂಟ ವ್ಯವಸ್ಥೆಯುಳ್ಳ ಪ್ರಜಾತಂತ್ರ ಮತ್ತು ಸಂವಿಧಾನವನ್ನು ಒಪ್ಪಿಕೊಂಡಿರುವಾಗ ರಾಜ್ಯಪಾಲರಿಗೆ ವಿಟೋ ಪವರ್ ಬೇಕಾ? ಕೇಂದ್ರ ಸರ್ಕಾರದ ಎಲ್ಲ ಅನಧಿಕೃತ ಸೂಚನೆಗಳನ್ನು ಪರೋಕ್ಷವಾಗಿ ಜಾರಿ ಮಾಡುವ ಉzಶಕ್ಕೆ ಇಂತಹ ಹುದ್ದೆಯೊಂದು ದುರ್ಬಳಕೆಯಾಗಬೇಕೇ? ರಾಜ್ಯಪಾಲರಾದವರು ರಾಜ್ಯಾಡಳಿತಕ್ಕೆ ಸಂಬಂಧಿಸಿದ ಶಾಸನ ಮತ್ತು ಆಡಳಿತದ ವಿಚಾರದಲ್ಲಿ ಕಾನೂನು ಪ್ರಕಾರ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ನಿರ್ವಹಿಸಿದಾಗಲೇ ಸಂವಿ ಧಾನಾತ್ಮಕ ರಾಜ್ಯಪಾಲರ ಹುದ್ದೆಗೆ ನಿಜವಾದ ಮತ್ತು ಸಾರ್ಥಕ ಅರ್ಥ. ರಾಜ್ಯಪಾಲರ ನೇಮಕ ವಿಚಾರದಲ್ಲಿ ಬಹಳ ವರ್ಷಗಳ ಹಿಂದೆಯೇ ನ್ಯಾ. ಸಾಚಾರ್ ಆಯೋಗವು ಕೇಂದ್ರಕ್ಕೆ ಮಾಡಿರುವ ಪ್ರಮುಖ ಶಿಫಾರಸುಗಳು, ಇಂದಿಗೂ ಕೇಂದ್ರ ಸರ್ಕಾರದ ಕಪಾಟಿನಲ್ಲಿ ಧೂಳು ತಿನ್ನುತಿರುವುದು ಒಂದು ದುರಂತ. ಕೇಂದ್ರ ಮತ್ತು ರಾಜ್ಯ ನಡುವೆ ಕಾನೂನಿನ ಕೊಂಡಿ ಮತ್ತು ರಾಜ್ಯಾಡಳಿತಕ್ಕೆ ಹೊಣೆಗಾರರಾದ ರಾಜ್ಯಪಾಲರು ಮತ್ತು ಲೋಕಭವನಕ್ಕೆ ರಾಜಕೀಯ ಲೇಪ ಹಚ್ಚಿ ಇವರನ್ನು ತೊಗಲುಗೊಂಬೆ ಯಾಗಿ ಪರಿಗಣಿಸಿ ಆಟವಾಡುವುದು ಕೇಂದ್ರದ ಕೆಟ್ಟ ರಾಜಕೀಯ ಪರಂಪರೆ ಎನ್ನದೆ ವಿಧಿಯಿಲ್ಲ .

Related Posts

Leave a Reply

Your email address will not be published. Required fields are marked *