ಬೆಂಗಳೂರು: ಮನ್‍ರೇಗಾ ಕುರಿತು ಸುಳ್ಳು ಮತ್ತು ಅಸತ್ಯವನ್ನು ಮಾನ್ಯ ರಾಜ್ಯಪಾಲರ ಮೂಲಕ ಹೇಳಿಸಲು ಕರ್ನಾಟಕ ಸರಕಾರ ಬಯಸಿತ್ತು. ಕಾಂಗ್ರೆಸ್ ಪಕ್ಷವು ಸುಳ್ಳಿನ ಯಂತ್ರ ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳಿನ ಯಂತ್ರ, ಭ್ರಮೆಯ ಅಂಗಡಿ ಆಗಿದೆ ಎಂದು ಆಕ್ಷೇಪಿಸಿದರು. ಕರ್ನಾಟಕದ ವಿಧಾನಸಭೆಯಲ್ಲಿ ಇಂದು ಪ್ರಜಾಸತ್ತಾತ್ಮಕ ಮೌಲ್ಯಗಳ ಕೊಲೆ ಆಗಿದೆ. ಸಂವಿಧಾನಕ್ಕೂ ಧಕ್ಕೆ ಮಾಡಿದ್ದಾರೆ ಎಂದು ಟೀಕಿಸಿದರು. ಮಾನ್ಯ ಗವರ್ನರ್ ಅವರ ಭಾಷಣದಲ್ಲಿ ಸುಳ್ಳುಗಳಿದ್ದವು. ಅದನ್ನು ಓದಲು ಸಾಧ್ಯ ಇರಲಿಲ್ಲ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಎಂದರೆ ಕಮಿಷನ್, ಭ್ರಷ್ಟಾಚಾರ ಮತ್ತು ಕೆಟ್ಟ ಶಾಸನದ ಗ್ಯಾರಂಟಿ ಕೊಡುವ ಪಕ್ಷ ಎಂದು ದೂರಿದರು. ತನ್ನ ವೈಫಲ್ಯ, ಅಸಫಲತೆಯನ್ನು ಮುಚ್ಚಿಡಲು ಅದು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮನ್‍ರೇಗಾದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಭ್ರಷ್ಟಾಚಾರದ ವಿವರ ನೀಡಿದ ಅವರು, ಯಾದಗಿರಿ ಜಿಲ್ಲೆಯಲ್ಲಿ ನಡೆದ ಭ್ರಷ್ಟಾಚಾರವು ದೇಶ- ಅಂತರರಾಷ್ಟ್ರೀಯ ಸುದ್ದಿಯಾಗಿ ಪ್ರಕಟವಾಗಿತ್ತು ಎಂದು ಪತ್ರಿಕಾ ತುಣುಕನ್ನು ಪ್ರದರ್ಶಿಸಿದರು. ಪುರುಷರು ಸೀರೆ ಧರಿಸಿ, ಮಹಿಳೆಯಾಗಿ ಮನ್‍ರೇಗಾದ ಹಣ ಲೂಟಿ ಮಾಡಿದ್ದರು ಎಂದು ವಿವರಿಸಿದರು.
ಇಂಥ ನೂರಾರು ಭ್ರಷ್ಟಾಚಾರ ಪ್ರಕರಣಗಳು ಸೋಷಿಯಲ್ ಆಡಿಟ್ ಮೂಲಕ ಬಹಿರಂಗವಾಗಿವೆ. ಇದನ್ನು ರಾಜ್ಯ ಸರಕಾರಕ್ಕೆ ತಿಳಿಸಿದಾಗ, 107.78 ಕೋಟಿಯ ವಸೂಲಿ ಮಾಡಲು ಅವಕಾಶವಿದ್ದರೂ 3,551 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಡಿಸಿದರು. ಇಲ್ಲಿ ಪಾರದರ್ಶಕತೆ ಉಳಿದಿಲ್ಲ ಎಂದು ದೂರಿದರು.
ಸಿಎಜಿ ವರದಿಯಲ್ಲಿ ಲೋಕಪಾಲರು 24.12 ಕೋಟಿಯ ಹಣ ವಸೂಲಿಗೆ ಸೂಚಿಸಿದ್ದರು. ಆದರೆ, 2.47 ಕೋಟಿ ರೂ. ಮೊತ್ತವನ್ನಷ್ಟೇ ವಸೂಲಿ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರದ ಈ ಕ್ರಮಕ್ಕೆ ನಾನೇನು ಹೇಳಲಿ ಎಂದು ಪ್ರಶ್ನಿಸಿದರು. ಕಲಬುರ್ಗಿ ಜಿಲ್ಲೆಯಲ್ಲಿ ನಡೆದ ಅವ್ಯವಹಾರದ ದೂರು ಬಂದಿತ್ತು. ನನ್ನ ಸಚಿವಾಲಯವು ತಂಡವನ್ನು ಕಳಿಸಿತ್ತು. 2024-25ರಲ್ಲಿ ಕಲಬುರ್ಗಿ ಜಿಲ್ಲೆಯ ಆಳಂದದ 5 ಗ್ರಾಮ ಪಂಚಾಯಿತಿಗಳಲ್ಲಿ 21 ಕೆಲಸಗಳನ್ನು ನಿರ್ವಹಿಸಬೇಕಿತ್ತು. ಅವುಗಳ ಪರಿಶೀಲನೆ ಮಾಡಿದ್ದರು. ಮನುಷ್ಯರ ಬದಲಾಗಿ ಯಂತ್ರದಿಂದ ಕೆಲಸ ನಡೆದಿತ್ತು. ನಕಲಿ ದಾಖಲೆಗಳು ಪತ್ತೆಯಾದವು. ಕಳೂರು ಗ್ರಾಮ ಪಂಚಾಯಿತಿಯಲ್ಲಿ ವಿದ್ಯಾಲಯದ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದನ್ನು ಶೌಚಾಲಯದ ನಿರ್ಮಾಣ ಎಂದು ತೋರಿಸಲಾಗಿತ್ತು ಎಂದು ವಿವರಿಸಿದರು.
ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದ ಅನೇಕ ಉದಾಹರಣೆಗಳಿವೆ ಎಂದು ತಿಳಿಸಿದರು. ಒಂದೇ ಕಾಮಗಾರಿಯನ್ನು ವಿಭಜಿಸಿ, ಪ್ರತ್ಯೇಕ ಕಾಮಗಾರಿ ಎಂದು ತೋರಿಸಿ ಹಣ ಪಡೆದಿದ್ದಾರೆ. ದಾಖಲೆಯಲ್ಲಿ ಮಾತ್ರ ಕಾಮಗಾರಿ ಇದ್ದು, ಕಾಮಗಾರಿ ಅನುಷ್ಠಾನ ಮಾಡದೇ ಹಣ ಲೂಟಿ ಮಾಡಿದ ಅನೇಕ ಉದಾಹರಣೆಗಳಿವೆ. ಅವುಗಳ ದಾಖಲೆಯನ್ನು ಮಾಧ್ಯಮಗಳಿಗೆ ನೀಡುವುದಾಗಿ ತಿಳಿಸಿದರು.
ಕೆಲವು ಗ್ರಾಮಗಳಲ್ಲಿ ಒಂದೇ ಕುಟುಂಬದ ಹೆಸರುಗಳನ್ನು ಅನೇಕ ಬಾರಿ ತೋರಿಸಲಾಗಿದೆ. ಕೆರೆಯ ಹೂಳೆತ್ತುವ ಕಾಮಗಾರಿ ನಡೆಸಿ, ಹೂಳಿನ ಮಣ್ಣನ್ನು ಅಲ್ಲೇ ಬಿಡಲಾಗುತ್ತಿತ್ತು. ಅದೇ ಮಣ್ಣು ಮಳೆಯ ಸಂದರ್ಭದಲ್ಲಿ ಮತ್ತೆ ಕೆರೆ ಸೇರುತ್ತಿತ್ತು. ಅದೇ ಕೆರೆಯ ಹೂಳೆತ್ತಿದ್ದಾಗಿ ಮತ್ತೆ ಹಣ ಪಡೆಯಲಾಗಿದೆ ಎಂದು ದೂರಿದರು. ಇಂಥ ಲಕ್ಷಾಂತರ ಅವ್ಯವಹಾರಗಳು ಮನ್ ರೇಗಾದಲ್ಲಿ ಇದ್ದವು. ಯುಪಿಎ ಸರಕಾರವು 2006-07ರಿಂದ 2013-14ರವರೆಗೆ 8,739.32 ಕೋಟಿ ಬಿಡುಗಡೆ ಮಾಡಿತ್ತು. ಮೋದಿಜೀ ಅವರ ನೇತೃತ್ವದಲ್ಲಿ ಎನ್.ಡಿ.ಎ ಸರಕಾರವು 48,549.82 ಕೋಟಿ ಹಣ ನೀಡಿದೆ. ಇದು ಕರ್ನಾಟಕದ ಮೊತ್ತ ಎಂದು ವಿವರಿಸಿದರು.
ಭಾರತಕ್ಕೆ ಯುಪಿಎ ಆಡಳಿತದಲ್ಲಿ 2.13 ಲಕ್ಷ ಕೋಟಿ ಬಿಡುಗಡೆ ಮಾಡಿತ್ತು. ಮೋದಿಜೀ ಅವರ ನೇತೃತ್ವದಲ್ಲಿ 8 ಲಕ್ಷ 48 ಸಾವಿರ ಕೋಟಿ ರೂ. ಬಿಡುಗಡೆ ಆಗಿತ್ತು. ಈ ಅನುದಾನವು ಹಲವು ಪಟ್ಟುಗಳಷ್ಟು ಹೆಚ್ಚು ಎಂದು ತಿಳಿಸಿದರು. ಆಗ ಭ್ರಷ್ಟಾಚಾರ ವ್ಯಾಪಕವಾಗಿತ್ತು. ಬಹಳ ವಿಚಾರ ವಿಮರ್ಶೆಯ ಬಳಿಕ ಇದನ್ನು ಮಾಡಿದ್ದೇವೆ. ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರು 2012ರಲ್ಲೇ ಮನ್ ರೇಗಾದಲ್ಲಿ ಕೇವಲ ಮಣ್ಣು ತೆಗೆಯುವುದು, ಹಾಕುವುದನ್ನಷ್ಟೇ ಮಾಡಲಾಗುವುದೇ ಎಂದು ಪ್ರಶ್ನಿಸಿದ್ದರು ಎಂದು ಗಮನಕ್ಕೆ ತಂದರು.
2011ರ ಫೆಬ್ರವರಿಯಲ್ಲಿ ಮನಮೋಹನ್ ಸಿಂಗ್ ಅವರು, ಮನ್ ರೇಗಾದಲ್ಲಿ ಭ್ರಷ್ಟಾಚಾರ ಆಗುತ್ತಿದೆ ಎಂದು ತಿಳಿಸಿದ್ದರು. ನಕಲಿ ಜಾಬ್ ಕಾರ್ಡ್ ಮಾಡಿಸುತ್ತಿದ್ದಾರೆಂದು ಶ್ರೀಮತಿ ಸೋನಿಯಾ ಗಾಂಧಿಯವರೇ ಹೇಳಿದ್ದರು ಎಂದು ವಿವರಿಸಿದರು. ಇವೆಲ್ಲವನ್ನೂ ಗಮನಿಸಿ ಎನ್‍ಡಿಎ ಸರಕಾರವು ಬದಲಿ ಯೋಜನೆಯ ಅವಶ್ಯಕತೆಯನ್ನು ಮನಗಂಡಿತು. ಕುಂದುಕೊರತೆ, ಭ್ರಷ್ಟಾಚಾರವನ್ನು ದೂರ ಮಾಡಲು ಅದು ಬಯಸಿತು. ಇದಕ್ಕಾಗಿ ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯನ್ನು ಎನ್‍ಡಿಎ ಸರಕಾರವು ಮೋದಿಜೀ ಅವರ ನೇತೃತ್ವದಲ್ಲಿ ಜಾರಿಗೊಳಿಸಿದೆ. ಆದರೆ, ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆಕ್ಷೇಪಿಸಿದರು.
ಮನ್ ರೇಗಾದಲ್ಲಿ 100 ದಿನಗಳ ಉದ್ಯೋಗ ಗ್ಯಾರಂಟಿ ಇದ್ದರೆ, ವಿಬಿ ಜಿ ರಾಮ್ ಜಿ ಅಡಿಯಲ್ಲಿ 125 ದಿನಗಳ ಉದ್ಯೋಗ ಗ್ಯಾರಂಟಿ ಕೊಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಹಣವನ್ನೂ ಪಾವತಿಸದ ಉದಾಹರಣೆ ಇದೆ. ಕೂಲಿಯನ್ನು ವಿಳಂಬಿಸಿ ಪಾವತಿ ನಡೆಯುತ್ತಿತ್ತು. ನಾವು ಸಕಾಲದಲ್ಲಿ ಕೂಲಿ ಪಾವತಿಗೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ವಿಕಸಿತ ಭಾರತಕ್ಕಾಗಿ ವಿಕಸಿತ ಗ್ರಾಮಗಳ ಅಗತ್ಯವಿದೆ. ಮನ್‍ರೇಗಾದಂತೆ ಒಂದು ಕಡೆಯ ಮಣ್ಣನ್ನು ಇನ್ನೊಂದು ಕಡೆ ಹಾಕಿ ಹಣ ಪಡೆಯುವುದನ್ನು ನಾವು ಬಯಸುವುದಿಲ್ಲ. ಪಿ.ಎಂ ಗತಿಶಕ್ತಿ ಮತ್ತು ತಂತ್ರಜ್ಞಾನದ ಬಳಕೆ ಮಾಡಿ, ಗ್ರಾಮ ಪಂಚಾಯಿತಿಗಳು ಯೋಜನೆ ಮಾಡಲಿವೆ. ಗ್ರಾಮ ಪಂಚಾಯಿತಿಯ ಅಧಿಕಾರವನ್ನು ಹೆಚ್ಚಿಸಿದ್ದೇವೆ. ವಿಕಸಿತ ಗ್ರಾಮ ಪಂಚಾಯಿತಿಯ ಯೋಜನೆಯನ್ನು ಗ್ರಾಮ ಸಭೆಯಲ್ಲಿ ರೂಪಿಸಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ತನ್ನ ಯೋಚನೆ, ಚಿಂತನೆ, ಆದರ್ಶವನ್ನು ಮರೆತಿದೆ ಎಂದು ಆರೋಪಿಸಿದರು. ದೇಶದ ವಿಕಾಸಕ್ಕೂ ಕಾಂಗ್ರೆಸ್ಸಿಗೂ ಏನೂ ಸಂಬಂಧ ಇಲ್ಲವಾಗಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಆಕ್ಷೇಪಿಸಿದರು. ಜನಕಲ್ಯಾಣದ ಚಿಂತನೆಯ ಕಡೆಗೂ ಕಾಂಗ್ರೆಸ್ ಗಮನ ಕೊಡುತ್ತಿಲ್ಲ; ಮಹಾತ್ಮ ಗಾಂಧೀಜಿ ತಮಗೆ ಆದರ್ಶ ಎನ್ನುವ ಕಾಂಗ್ರೆಸ್ ಪಕ್ಷವು ಬಾಪು ಅವರ ಸಿದ್ಧಾಂತವನ್ನು ಹತ್ಯೆ ಮಾಡುವ ಪಾಪವನ್ನು ಮಾಡಿದೆ ಎಂದು ಟೀಕಿಸಿದರು. ಮಹಾತ್ಮ ಗಾಂಧಿಯವರು ಸತ್ಯ, ಅಹಿಂಸೆ ಮಾತನಾಡಿದರೆ, ಕಾಂಗ್ರೆಸ್ ಸುಳ್ಳನ್ನು ತನ್ನ ಜೊತೆ ಇಟ್ಟುಕೊಂಡಿದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.


