Thursday, January 22, 2026
Menu

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ರಾಜೀವ್​ ಗೌಡ ಬೆದರಿಕೆ: ಎಫ್​​ಐಆರ್​ ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

rajeev gowda

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದ ಎಫ್​​ಐಆರ್​ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್​​ ಮುಖಂಡ ರಾಜೀವ್​ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​​ ವಜಾಗೊಳಿಸಿದೆ. ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಬಗ್ಗೆ ಆದೇಶ ನೀಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ರಾಜೀವ್‌ ಗೌಡ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.

ಹಿರಿಯ ವಕೀಲ ವಿವೇಕ್ ರೆಡ್ಡಿ ಕಾಂಗ್ರೆಸ್‌ ಮುಖಂಡನ ವಾದ ಮಂಡಿಸಿದ್ದರು.  ಪ್ರಕರಣ ಸಂಬಂಧ ಮಾಧ್ಯಮದಲ್ಲೇ ರಾಜೀವ್​​ ಗೌಡ ಕ್ಷಮೆ ಕೇಳಿದ್ದಾರೆ. ಬಿಎನ್‌ಎಸ್‌ ಸೆಕ್ಷನ್ 132 ಈ ಕೇಸಿನಲ್ಲಿ ಅನ್ವಯಿಸುವುದಿಲ್ಲ. ಸಾರ್ವಜನಿಕವಾಗಿ ಕ್ಷಮೆ ಕೇಳಲು ರಾಜೀವ್ ಗೌಡ ಸಿದ್ಧರಿದ್ದಾರೆ. ತನಿಖೆಗೆ ಸಹಕರಿಸಲು ಸಿದ್ಧರಿರುವ ಕಾರಣ ರಕ್ಷಣೆಗೆ ಮನವಿ ಮಾಡಲಾಗಿದೆ ಎಂದು ವಕೀಲರು ವಾದಿಸಿದ್ದರು.

ಆದರೆ ನ್ಯಾಯಾಲಯ ಈ ವಾದ ಪುರಸ್ಕರಿಸದೆ ಅರ್ಜಿದಾರನಿಗೆ ಮಹಿಳೆಯರೆಂದರೆ ಗೌರವ ಇಲ್ಲವೇ ಎಂದು ಪ್ರಶ್ನೆ ಮಾಡಿದೆ. ಒಮ್ಮೆ ಮಾತನಾಡಿದರೆ ವಾಪಸ್ ಪಡೆಯಲು ಆಗುವುದಿಲ್ಲ. ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡ ಬಲ್ಲದು ಎಂದು ಹೇಳಿ ಅರ್ಜಿ ವಿಚಾರಣೆ ಸಂಬಂಧ ಆದೇಶವನ್ನು ಕಾಯ್ದಿರಿಸಿತ್ತು.

ಚಿಕ್ಕಬಳ್ಳಾಪುರ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿಗೆ ಸರ್ಕಾರಿ ಅಭಿಯೋಜಕರು ತಕರಾರು ಸಲ್ಲಿಸಿದ್ದಾರೆ. ರಾಜೀವ್ ಗೌಡ ಪರ ವಕೀಲ ಶಿವಶಂಕರ ರೆಡ್ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್‌ ವಿಚಾರಣೆಯನ್ನು ಗುರುವಾರ (ಇಂದು)ಕ್ಕೆ ಮುಂದೂಡಿತ್ತು. ತಕರಾರು ಸಲ್ಲಿಕೆ ಹಿನ್ನೆಲೆ ರಾಜೀವ್ ಗೌಡ ನಿರೀಕ್ಷಣಾ ಜಾಮೀನು ಅರ್ಜಿ ಭವಿಷ್ಯ ಸಂಜೆ ನಿರ್ಧಾರ ಆಗಲಿದೆ.

ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಯನ್ನು ನಿಂದಿಸಿ ಬೆದರಿಕೆ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡಗೆ ಕೆಪಿಸಿಸಿ ನೋಟಿಸ್‌ ಜಾರಿ ಮಾಡಿದೆ.

Related Posts

Leave a Reply

Your email address will not be published. Required fields are marked *