ಪತಿ ತಡವಾಗಿ ಮನೆಗೆ ಬಂದಿದ್ದಕ್ಕೆ ಜಗಳವಾಡಿದ ತಾಯಿ 18 ತಿಂಗಳ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದಿದೆ. ಪತಿ ನೀಡಿದ ದೂರಿನ ಅನ್ವಯ ಪೊಲೀಸರು ಮಗುವನ್ನು ಕೊಂದ ಆರೋಪಿ ತಾಯಿ ಅಶ್ವಿನಿಯನ್ನು ಬಂಧಿಸಿದ್ದಾರೆ.
ಪತಿ ಮನೆಗೆ ತಡವಾಗಿ ಬಂದ ವಿಚಾರಕ್ಕೆ ಆರಂಭ ಗಲಾಟೆ ಮಗುವಿನ ಕೊಲೆಯಲ್ಲಿ ಅಂತ್ಯ ಕಂಡಿದೆ. ಸಿಟ್ಟಿನಲ್ಲಿದ್ದ ತಾಯಿ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ದಿನಗೂಲಿ ಕೆಲಸ ಮಾಡುತ್ತಿದ್ದ ಪತಿ ವಿಕ್ರಮ್ ಜಗನ್ನಾಥ ಚೌಗುಲೆ ತಡವಾಗಿ ಮನೆಗೆ ಬಂದಿದ್ದ. ಇದೇ ವಿಚಾರಕ್ಕೆ ಗಲಾಟೆ ಆರಂಭವಾಗಿ ಮಗುವಿನ ಕೊಲೆಯಾಗಿದೆ. ಪತಿಗೆ ಕೆಲಸ ಬಿಟ್ಟ ನಂತರ ಬೇಗ ಮನೆಗೆ ಬರುವಂತೆ ಆಕೆ ಹೇಳಿದ್ದಳು. ಆದರೆ ವಿಕ್ರಮ್ ಚೌಗುಲೆ ತಡವಾಗಿ ಮನೆಗೆ ಬಂದಿದ್ದ. ಇದೇ ವಿಚಾರಕ್ಕೆ ಜಗಳವಾಗಿದೆ ಎಂದು ಲಾತೂರ್ ಪೊಲೀಸ್ ವರಿಷ್ಠಾಧಿಕಾರಿ ಅಮೋಲ್ ತಾಂಬೆ ಹೇಳಿದ್ದಾರೆ.
ಚೌಗುಲೆ ಕುಟುಂಬವು ಧರಶಿವ ಜಿಲ್ಲೆಯ ಕಲಂಬ್ ತಾಲೂಕಿನ ಹಸೇಗಾಂವ್ ಗ್ರಾಮದವರಾಗಿದ್ದು, ಲಾತೂರ್ ನಗರದ ಮಂಜರಾ ಗೇಟ್ ಬಳಿಯ ಶ್ಯಾಮ್ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ. ಸೋಮವಾರ ಬೆಳಗ್ಗೆ ಅವರ ಮನೆಯಿಂದ ಕಿರುಚಾಟ ಕೇಳಿ ಪಕ್ಕದ ಮನೆಯವವರು ಸ್ಥಳಕ್ಕೆ ಬಂದಿದ್ದಾರೆ. ಹೊರಗಿನಿಂದ ಜನ ಬಾಗಿಲು ಬಡಿದರು ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಅವರು ಅಶ್ವಿನಿಯ ಪತಿ ವಿಕ್ರಮ್ ಜಗನ್ನಾಥ ಚೌಗುಲೆಗೆ ಮನೆಯಲ್ಲಿ ಗಲಾಟೆಯ ಸದ್ದು ಕೇಳಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಆತ ಮನೆಗೆ ಬಂದು ಪತ್ನಿಯನ್ನು ಕರೆದಾಗ ಬಾಗಿಲು ತೆರೆದ ಆಕೆ ಮಗುವನ್ನು ಹಲವು ಬಾರಿ ಇರಿದು ಕೊಂದಿದ್ದಾಗಿ ಹೇಳಿದ್ದಾಳೆ.
ಎಂಐಡಿಸಿ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೊಲೆ ಮಾಡಿದ ತಾಯಿ ಅಶ್ವಿನಿಯನ್ನು ಬಂಧಿಸಿದೆ. ಆಕೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


