ಡಿಸಿಎಂ ಡಿಕೆ ಶಿವಕುಮಾರ್ ಮೈಸೂರಿನ ಅಹಿಂದ ಸಮಾವೇಶಕ್ಕೆ ಬಸ್ ನೀಡದಂತೆ ತಡೆದಿದ್ದಾರೆಂಬ ಆರೋಪ ಯಾರು ಸಹ ಮಾಡಬಾರದು. ಅಂತಹ ಯಾವುದೇ ಪ್ರಯತ್ನ ಅವರು ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಹೇಳಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಕೆಲವೊಂದು ಡಿಜಿಟಲ್ ಮಾದ್ಯಮಗಳಲ್ಲಿ ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಕೆಲವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೈಸೂರಿನಲ್ಲಿ ನಡೆಯುವ ಅಹಿಂದ ಸಮಾವೇಶ ತಡೆಯಲು ಬಸ್ ಗಳನ್ನು ಕಳುಹಿಸದಂತೆ ಹೇಳಿದ್ದಾರೆ ಎಂಬುದು ಸುಳ್ಳು. ಅಹಿಂದ ಸಮಾವೇಶಕ್ಕೆ ಡಿಕೆಶಿಯವರು ಆಲ್ ದಿ ಬೆಸ್ಟ್ ಹೇಳಿದ್ದು, ಅವರು ಸರ್ಕಾರದ ಭಾಗವಾಗಿ ಸಮಾವೇಶಕ್ಕೆ ಬೆಂಬಲ ನೀಡಿದ್ದಾರೆ. ಅವರು ಮೈಸೂರಿನ ಸಮಾವೇಶಕ್ಕೆ ವಿರೋಧ ಮಾಡಿದ್ದಾರೆಂಬುದು ಸರಿಯಲ್ಲ ಎಂದರು.
ಜ.25ಕ್ಕೆ ಆಯೋಜಿಸಿರುವ ಅಹಿಂದ ಸಮಾವೇಶವನ್ನು ಅಧಿವೇಶನ ನಡೆಯುತ್ತಿರುವುದರಿಂದ ಹಾಗೂ ಈ ಭಾಗದಲ್ಲಿ ಜಾತ್ರೆಗಳು ಹೆಚ್ಚಾಗಿ ನಡೆಯುತ್ತಿರುವ ಕಾರಣಕ್ಕೆ ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜ.27ರಂದು ಮೈಸೂರಿನಲ್ಲಿ ನಡೆಯುವ ಅಹಿಂದ ಸಮಾವೇಶಕ್ಕೆ ವಾಹನಗಳನ್ನು ಬಿಡಬಾರದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾಗಿ ಅಹಿಂದ ನಾಯಕರು ಗಂಭೀರ ಆರೋಪ ಮಾಡಿದ್ದು, ಈ ಮೂಲಕ ಸಿದ್ಧರಾಮಯ್ಯ ಅವರನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದರು.
ಮೈಸೂರು ಸಮಾವೇಶದ ಮೂಲಕ ಯಾವುದೇ ಕಾರಣಕ್ಕೂ ಕೂಡಾ ಸಿಎಂ ಸಿದ್ದರಾಮಯ್ಯರನ್ನು ಬದಲಾವಣೆ ಮಾಡಬಾರದು. ಮಾಡಿದೆ ಅಹಿಂದ ವರ್ಗ ಸುಮ್ಮನೇ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಐದು ಕಡೆ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದು, ಮೊದಲ ಸಮಾವೇಶ ಹುಬ್ಬಳ್ಳಿಯಲ್ಲಿ ನಡೆದಿದೆ. ಸಮಾವೇಶದಲ್ಲಿ ಯಾವೊಬ್ಬ ಸಚಿವರು ಭಾಗಿಯಾಗಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್ ಯಾರೂ ಭಾಗವಹಿಸದಂತೆ ನೋಡಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ 24ಕ್ಕೆ ನಡೆಯುವ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಜನರು ಬರದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅಹಿಂದ ನಾಯಕರು ದೂರಿದ್ದಾರೆ.


