ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಮಧ್ಯಪ್ರದೇಶ ಸಚಿವ ಕುನ್ವರ್ ವಿಜಯ್ ಶಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡದೆ ರಕ್ಷಣೆಗೆ ಮುಂದಾಗಿದ್ದ ಅಲ್ಲಿನ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ವಿಜಯ್ ಶಾ ವಿರುದ್ಧದ ವಿಚಾರಣೆಗೆ ಅನುಮತಿ ನೀಡುವ ವಿಚಾರಕ್ಕೆ ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ. ಕೋರ್ಟ್ ಛೀಮಾರಿ ಹಾಕಿದ ಬಳಿಕ ಭೋಪಾಲ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ ವಿಜಯ್ ಶಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಕಳೆದ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ದಾಳಿ ಬಳಿಕ ನಡೆದ ಆಪರೇಷನ್ ಸಿಂಧೂರ ಕುರಿತು ಮಾತನಾಡಿದ್ದ ವಿಜಯ್ ಶಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ಹಿಸಿದ್ದ ಸೋಫಿಯಾ ಅವರನ್ನು ಉಲ್ಲೇಖಿಸಿ, ನಮ್ಮ ಮಗಳನ್ನು ವಿಧವೆಯರನ್ನಾಗಿ ಮಾಡಿದವರಿಗೆ ನಾವು ಅವರದ್ದೇ ಸಹೋದರಿಯನ್ನು ಕಳುಹಿಸಿ ಪಾಠ ಕಲಿಸಿದ್ದೇವೆ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದರು. ವಿಜಯ್ ಶಾ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ವಿಜಯ್ ಶಾ ಹೇಳಿಕೆ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿಯು ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ರಾಜ್ಯ ಸರ್ಕಾರವು ವಿಜಯ್ ಶಾ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಿಲ್ಲ. ಈ ಕಾರಣಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಸರ್ಕಾರವು 2025ರ ಆಗಸ್ಟ್ 19ರಿಂದ ಎಸ್‌ಐಟಿ ವರದಿಯನ್ನು ಪರಿಶೀಲಿಸುತ್ತಿದ್ದು, ಇರುವ ಕಾನೂನು ಬಾಧ್ಯತೆ ಕುರಿತು ಇನ್ನೆರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದೆ.


