Thursday, January 22, 2026
Menu

ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ತುಳು: ರಾಜ್ಯ ಸರ್ಕಾರದ ತಂಡ ಆಂಧ್ರಪ್ರದೇಶಕ್ಕೆ ಭೇಟಿ

ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕಾನೂನು ಪ್ರಕ್ರಿಯೆ ಹಾಗೂ ಅನುಷ್ಠಾನದ ಬಗ್ಗೆ ಅಧ್ಯಯನ ಮಾಡಲು ರಾಜ್ಯ ಸರ್ಕಾರವು ನೇಮಿಸಿದ್ದ ಅಧ್ಯಯನ ಸಮಿತಿಯು ಆಂಧ್ರ ಪ್ರದೇಶದಲ್ಲಿ ಅಲ್ಲಿನ ಸರ್ಕಾರದ ವಿವಿಧ ಇಲಾಖೆಗಳ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಮ್ ಗಾಯತ್ರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರನ್ನು ಒಳಗೊಂಡಂತೆ ಏಳು ಮಂದಿಯ ಅಧ್ಯಯನ ಸಮಿತಿಯು ಜನವರಿ 19 ಮತ್ತು 20ರಂದು ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಹಾಗೂ ಎನ್ .ಟಿ. ಆರ್ ಜಿಲ್ಲೆಯ ಕಚೇರಿಗಳಲ್ಲಿ ಮಾಹಿತಿ ಸಂಗ್ರಹಿಸಿದೆ.

ತಂಡವು ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಾನಂದ ಅವರನ್ನು ಭೇಟಿ ನೀಡಿ ಸಮಾಲೋಚನೆ ನಡೆಸಿತು. ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಘೋಷಣೆ ಮಾಡಿರುವುದರಿಂದ ಉರ್ದು ಭಾಷಾ ಬೆಳವಣಿಗೆ ಸಹಕಾರಿಯಾಗಿದೆ ಎಂದರು. ಅದೇ ರೀತಿ ಕರ್ನಾಟಕದಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಮಂಡಲದ ಸ್ಪೀಕರ್ ಕಚೇರಿ ಸೇರಿದಂತೆ ನಾನಾ ಕೇರಿಗಳಿಗೆ ಅಧ್ಯಯನ ತಂಡ ಭೇಟಿ ನೀಡಿ ಮಾಹಿತಿ ಪಡೆದಿದೆ. ಆಂಧ್ರ ಪ್ರದೇಶ ಅಲ್ಪಸಂಖ್ಯಾಂತ ಇಲಾಖೆಯ ಕಾರ್ಯದರ್ಶಿ, ಉರ್ದು ಅಕಾಡೆಮಿಯ ಅಧ್ಯಕ್ಷರು, ಆಂಧ್ರ ಉರ್ದು ಭಾಷಾ ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನು ಕೂಡ ಭೇಟಿ ಮಾಡಿ, ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದ ಬಳಿಕದ ಅನುಷ್ಠಾನ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿದೆ.

ಅಮರಾವತಿ ಮಹಾನಗರ ಪಾಲಿಕೆಯ ವಲಯ ಕಮಿಷನರ್‌, ಸ್ಥಳೀಯ ಪೋಲಿಸ್ ಠಾಣೆ, ಸ್ಥಳೀಯ ಉರ್ದು ಮಾಧ್ಯಮ ಶಾಲೆ, ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆ, ಆಂಧ್ರ ಪ್ರದೇಶ ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಎನ್ .ಟಿ .ಆರ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಜಿ. ಲಕ್ಷ್ಮೀಶ ಅವರನ್ನು ಭೇಟಿ ಮಾಡಿದೆ.

ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವುದರಿಂದ ತೆಲುಗು ಭಾಷಾ ಅಭಿವೃದ್ಧಿಗೆ ಯಾವುದೇ ತೊಡಕುಗಳು ಆಗಿರುವುದಿಲ್ಲ ಎಂಬುದನ್ನು ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತ್ರಿವಿಕ್ರಮ್ ರಾವ್ ಅಧ್ಯಯನ ತಂಡಕ್ಕೆ ತಿಳಿಸಿದರು. ತುಳು ಭಾಷೆಯ ಚಾರಿತ್ರಿಕ ಹಿನ್ನೆಲೆ, ಸಾಹಿತ್ಯಿಕ ಹಿನ್ನೆಲೆ, ಪರಂಪರೆ ಬಗ್ಗೆ ತುಳು ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಮಿತಿಯ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ತಂಡವು ಕೆಲವೇ ದಿನಗಳಲ್ಲಿ ಸಲ್ಲಿಸಲಿದೆ.

ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್ , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಉಪಕಾರ್ಯದರ್ಶಿ ಶುಭಶ್ರಿ ಕೆ.ಎಮ್ , ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ .ಎನ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸುಧಾಕರ ಶೆಟ್ಟಿ, ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಕಲಾ ನಿಲಯದ ಡೀನ್ ಪ್ರೊ.ಲಿಂಗಪ್ಪ ಗೋನಾಳ್ ತಂಡದಲ್ಲಿದ್ದರು.

Related Posts

Leave a Reply

Your email address will not be published. Required fields are marked *