ಶಿವಮೊಗ್ಗದ ಗಾಂಧಿ ಬಜಾರ್ ನ ಬಂಗಾರದ ಅಂಗಡಿಗೆ ಬಂದು ಬಂಗಾರ ಖರೀದಿಸುವ ನೆಪದಲ್ಲಿ 96 ಗ್ರಾಂ ಚಿನ್ಬಾಭರಣ ಕದ್ದು ಪರಾರಿಯಾಗಿದ್ದ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಆರೋಪಿಗೆ ಶಿವಮೊಗ್ಗ ನ್ಯಾಯಾಲಯ 5 ಸಾವಿರ ರೂ. ದಂಡ, ಮೂರು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
11 ವರ್ಷದ ಹಿಂದೆ ನಡೆದ ಘಟನೆ ಇದಾಗಿದೆ. ಆರೋಪಿ ದಾವಣಗೆರೆಯ ಹರಿಹರದ ಅಬ್ಬಾಸ್ ಖಾನ್ ಶಿವಮೊಗ್ಗ ನಗರ ಗಾಂಧಿ ಬಜಾರು ಮುಖ್ಯ ರಸ್ತೆ ಜಾಮಿಯಾ ಮಸೀದಿ ಕಾಂಪ್ಲೆಕ್ಸ್ ನಲ್ಲಿರುವ ಬಂಗಾರ ಜ್ಯುವೆಲರ್ ಶಾಪ್ ಗೆ ಬಂದು ಎರಡು ಬೆಳ್ಳಿ ಕಣ್ಣುಗಳನ್ನ ಖರೀದಿಸುವ ನೆಪದಲ್ಲಿ 96 ಗ್ರಾಂ ಚಿನ್ನಾಭರಣವನ್ನ ಕದ್ದುಕೊಂಡು ಹೋಗಿದ್ದ.
ಪ್ರಕರಣದ ತನಿಖೆ ನಡೆಸಿದ್ದ ದೊಡ್ಡಪೇಟೆ ಪೊಲೀಸರು ಆರೋಪಿಯಿಂದ . ಬಂಗಾರದ ಚೈನ್ ,ನವರತ್ನದ ಉಂಗುರ , ಬಿಳಿ ಹರಳಿನ ಉಂಗುರ , ಹಸಿರು ಹರಳಿನ ಉಂಗುರ ವಶಪಡಿಸಿಕೊಂಡಿದ್ದರು. ಕಳವು ಆರೋಪ ತನಿಖೆಯಲ್ಲಿ ದೃಢಪಟ್ಟಿದ್ದರಿಂದ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಎರಡನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಸಾಕ್ಷಿಯ ವಿಚಾರಣೆ ನಡೆದು ನ್ಯಾಯಾಧೀಶರಾದ ಸಿದ್ದರಾಜು ಎನ್ ಕೆ ಆರೋಪಿಗೆ 380 ಐಪಿಸಿ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 5000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ಕಿರಣ್ ಕುಮಾರ್ ಜಿ ಕೆ ವಾದ ಮಂಡಿಸಿದ್ದರು.


