ರಾಷ್ಟ್ರೀಯ ಪಕ್ಷಗಳ ನಾಯಕತ್ವವು ಸದಾ ಹಿರಿಯ ತಲೆಗೆ ವಹಿಸಬೇಕೆಂಬ ರಾಜಕೀಯ ಸಂಪ್ರದಾಯವೀಗ ಬದಲಾಗುವ ದಿಕ್ಕಿನಲ್ಲಿದೆ. ರಾಜಕಾರಣದಲ್ಲಿ ಹಿರಿಯರು, ಕಿರಿಯರಿಗೆ ದಾರಿ ಮಾಡಿಕೊಡಬೇಕೆಂದು ನಿತಿನ್ ಗಡ್ಕರಿ ನೀಡಿರುವ ಸಲಹೆ ಗಮನಿಸುವಂತಹದು. ಒಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೊಸ ಆಯಾಮ ಸೃಷ್ಟಿಯಾಗಿದೆ. ನೂತನ ಅಧ್ಯಕ್ಷರ ಶಕ್ತಿ ಮತ್ತು ಸಾಮರ್ಥ್ಯ ಇನ್ನು ಮುಂದೆಯಷ್ಟೆ ಸಾಬೀತಾಗಬೇಕಿದೆ.
ರಾಷ್ಟ್ರೀಯ ಪಕ್ಷಗಳ ನಾಯಕತ್ವವು ಸದಾ ಹಿರಿಯ ತಲೆಗೆ ವಹಿಸಬೇಕೆಂಬ ರಾಜಕೀಯ ಸಂಪ್ರದಾಯವೀಗ ಬದಲಾಗುವ ದಿಕ್ಕಿನಲ್ಲಿದೆ. ದೇಶದ ವಿವಿಧ ರಾಜಕೀಯ ಪಕ್ಷಗಳ ಇತಿಹಾಸವನ್ನು ಕೆದಕಿದಾಗ ಪಕ್ಷದ ಹಿರಿಯ ತಲೆಗಳಿಗೆ ನಾಯಕತ್ವದ ಪಟ್ಟ ಒಲಿದಿರುವುದು ಗಮನಾರ್ಹ. ಹಿರಿಯ ನಾಯಕನ ಮಾಗಿದ ಅನುಭವಗಳು ಪಕ್ಷದ ಎಲ್ಲ ಬಗೆಯ ಬೆಳವಣಿಗೆಗೆ ಪೂರಕ ಎಂಬುದು ಒಟ್ಟಾರೆ ಉzಶ. ಇದು ತಪ್ಪೇನೂ ಅಲ್ಲ. ಆದರೆ ದೊಡ್ಡವರೆಲ್ಲ ಜಾಣರಲ್ಲ! ಚಿಕ್ಕವರೆಲ್ಲ ಕೋಣರೂ ಅಲ್ಲ!
ದೇಶದ ರಾಜಕಾರಣದಲ್ಲಿ ಈ ದಿಶೆಯಲ್ಲಿ ನೂತನ ಚಿಂತನೆ ಮತ್ತು ಅದರ ಅನುಷ್ಠಾನವೂ ಮುಖ್ಯ. ದೇಶವನ್ನು ಮುನ್ನಡೆಸಬೇಕಿರುವ ರಾಜಕೀಯ ಪಕ್ಷವೊಂದಕ್ಕೆ ಶಿಸ್ತು ಮತ್ತು ದೂರದೃಷ್ಟಿ ಇರಬೇಕು. ಬರೀ ಇಷ್ಟೇ ಅಲ್ಲ. ದೇಶದ ಆಗುಹೋಗುಗಳು ಮತ್ತು ಅವುಗಳ ಸಾಕಾರಕ್ಕೆ ಶ್ರಮಿಸುವ ಮನೋಧೋರಣೆ ಮತ್ತು ಅರ್ಪಣಾ ಭಾವನೆಯೂ ಅತ್ಯಗತ್ಯ. ರಾಜಕೀಯ ಪಕ್ಷವೊಂದರ ಅಸಲೀ ಆಸ್ತಿ ಎಂದರೆ ಪಕ್ಷದ ಪ್ರಣಾಳಿಕೆ ಮತ್ತು ಧ್ಯೇಯಗಳನ್ನು ಈಡೇರಿಸಲು ದುಡಿಯುವಂತಹ ಮನಸು ಮತ್ತು ಶಕ್ತಿ ಇರುವ ವ್ಯಕ್ತಿ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯುವಚೇತನ ವ್ಯಕ್ತಿ ಆಯ್ಕೆಯಾಗಿದೆ. ನಿತಿನ್ ನಬಿನ್ ಮೊನ್ನೆಯವರೆಗೂ ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತ. ಇದೇ ವ್ಯಕ್ತಿ ಇಂದು ದೇಶದಲ್ಲಿ ಬಿಜೆಪಿ ಪಾರ್ಟಿಯನ್ನು ಮುನ್ನಡೆಸುವ ರೂವಾರಿ ಮತ್ತು ಅಗ್ರ ನಾಯಕ. ಯಾವುದೇ ಸದ್ದುಗದ್ದಲವಿಲ್ಲದೆ ನಬಿನ್ ರಾಷ್ಟ್ರೀಯ ಪಕ್ಷದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವುದು ಗಮನಾರ್ಹ. ಇಂತಹ ಹುದ್ದೆಗಳಿಗೆ ಆಯ್ಕೆ ನಡೆಯುವುದಕ್ಕೂ ಮುನ್ನ ನಮ್ಮ ದೇಶದಲ್ಲಿ ಹಲವು ಹತ್ತು ಚರ್ಚೆಗಳು ನಡೆಯುವುದು ಸರ್ವೇಸಾಮಾನ್ಯ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಇಂತಹ ಯಾವ ಬಹಿರಂಗ ಅಥವಾ ಪಾರ್ಟಿಯೊಳಗೆ ಚರ್ಚೆ ನಡೆಯಲಿಲ್ಲ. ಆದರೆ ಪಕ್ಷದ ಎಲ್ಲ ಹಿರಿಯ ಮತ್ತು ಕಿರಿಯರ ನಂಬಿಕೆ ಮತ್ತು ವಿಶ್ವಾಸವೂ ಇಂದು ಯುವ ನಾಯಕನ ಮೇಲೆ ಅವಶ್ಯಕ.
ಒಂದುನೂರ ಇಪ್ಪತ್ತು ಕೋಟಿ ಜನಸಂಖ್ಯೆ ಇರುವಂತಹ ಪ್ರಪಂಚದ ಅತಿದೊಡ್ಡ ಪ್ರಜಾತಂತ್ರದಲ್ಲಿ ರಾಜಕೀಯ ವಿಜ್ಞಾನದ ಮೂಲ ವ್ಯಾಖ್ಯಾನಗಳಿಗೆ ಅನುಗುಣವಾಗಿ ಅನುಷ್ಠಾನವಿರಬೇಕು. ಪಾರ್ಟಿಗಾಗಿ ಹಾದಿ ಬೀದಿಯಲ್ಲಿ ಅಲೆದಾಡಿ ಮತ್ತು ಬ್ಯಾನರ್ ಕಟ್ಟಿದ ಓರ್ವ ಸಾಮಾನ್ಯನೂ ಪಾರ್ಟಿಯ ನಾಯಕನಾಗುವುದು ನಿಜವಾದ ಪ್ರಜಾತಂತ್ರ . ಈ ರೀತಿಯಾಗಿ ಬಿಜೆಪಿಯಲ್ಲಿ ಪ್ರಾಥಮಿಕ ಹಂತದಿಂದಲೂ ದುಡಿದ ನಿತಿನ್ ಗಡ್ಕರಿ ಕೂಡಾ ಎರಡು ದಶಕಗಳ ಹಿಂದೆ ಪಾರ್ಟಿಯ ಸಾರಥ್ಯವನ್ನು ವಹಿಸಿಕೊಂಡ ವರೇ. ರಾಜಕಾರಣದಲ್ಲಿ ಹಿರಿಯರು, ಕಿರಿಯರಿಗೆ ದಾರಿ ಮಾಡಿಕೊಡಬೇಕೆಂದು ನಿತಿನ್ ಗಡ್ಕರಿ ನೀಡಿರುವ ಸಲಹೆ ಗಮನಿಸುವಂತಹದು. ಪಾರ್ಟಿ ಅಧ್ಯಕ್ಷನ ಮಾತು ಅಥವಾ ಅದೇಶವನ್ನು ದೇಶದ ಪ್ರಧಾನ ಮಂತ್ರಿಯೂ ಮೀರುವ ಹಾಗಿಲ್ಲ. ಒಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೊಸ ಆಯಾಮ ಸೃಷ್ಟಿಯಾಗಿದೆ. ನೂತನ ಅಧ್ಯಕ್ಷರ ಶಕ್ತಿ ಸಾಮರ್ಥ್ಯ ಇನ್ನು ಮುಂದೆಯಷ್ಟೆ ಸಾಬೀತಾಗಬೇಕಿದೆ.


