ಬೆಂಗಳೂರು: ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಈ ಮೂಲಕ ನಾಳೆಯಿಂದ ಜನವರಿ 31ರವರೆಗೆ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನಕ್ಕೆ ಆರಂಭದಲ್ಲೇ ವಿಘ್ನ ಉಂಟಾಗಿದೆ.
ಮನರೇಗಾ ಯೋಜನೆ ರದ್ದುಗೊಳಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಿ ರಾಮ್ ಜಿ ಯೋಜನೆ ವಿರೋಧಿಸಿ ವಿಶೇಷ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆಸಿ ಖಂಡನಾ ನಿರ್ಣಯ ಕೈಗೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ.
ಕೇಂದ್ರ ಸರ್ಕಾರದ ವಿರುದ್ಧ ವಿಶೇಷ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೊನೆಯ ಗಳಿಗೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದ್ದು, ತಜ್ಞರ ಜೊತೆ ಮಾತುಕತೆಗೆ ಮುಂದಾಗಿದೆ.
ಸಚಿವರ ನೇತೃತ್ವದ ರಾಜ್ಯ ಸರ್ಕಾರದ ನಿಯೋಗ ಸಂಜೆ 5.45ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿ ಅವರನ್ನು ಓಲೈಸುವ ಪ್ರಯತ್ನ ನಡೆಸಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ರಾಜ್ಯಪಾಲರು ಒಪ್ಪದೇ ಇದ್ದರೆ ಸಾಂವಿಧಾನಿಕ ಬಿಕ್ಕಟ್ಟು ಏರ್ಪಡುವ ಸಾಧ್ಯತೆ ಇದೆ.
ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಜಂಟಿ ಉದ್ದೇಶಿಸಿ ಮಾತನಾಡುವುದು ಸಾಂಪ್ರದಾಯವಾಗಿದೆ. ರಾಜ್ಯಪಾಲರ ಈ ನಡೆಯಿಂದ ಸಾಂವಿಧಾನಿಕ ಬಿಕ್ಕಟ್ಟು ತಲೆದೋರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಇದೀಗ ಅಧಿವೇಶನ ದಿನಾಂಕ ಮುಂದೂಡುವುದೇ ಎಂಬುದು ಕಾದು ನೋಡಬೇಕಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಾಷ್ಟ್ರಗೀತೆಗೆ ಅಪಮಾನ ಮಾಡಿದರು ಎಂದು ತಮಿಳುನಾಡು ವಿಧಾನಸಭೆಯಿಂದ ರಾಜ್ಯಪಾಲರು ಹೊರನಡೆದಿದ್ದರು. ಆದರೆ ಇದೀಗ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದಾರೆ.


