Wednesday, January 21, 2026
Menu

ದೇವರ ಅಪಹಾಸ್ಯ: ‘ಕಾಮಿಡಿ ಕಿಲಾಡಿಗಳು’ ಶೋಗೆ ಹೈಕೋರ್ಟ್‌ ಎಚ್ಚರಿಕೆ

ಖಾಸಗಿ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಚಾನೆಲ್ ಮತ್ತು ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.  ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಎಲ್ಲವನ್ನೂ ಅಪಹಾಸ್ಯ ಮಾಡುವ ಪರವಾನಗಿ ಅಲ್ಲ ಎಂದು ಕೋರ್ಟ್‌ ಎಚ್ಚರಿಕೆ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಮನರಂಜನೆ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನು ಅಪಹಾಸ್ಯ ಮಾಡುವುದನ್ನು ಕೋರ್ಟ್‌ ಕಟುವಾಗಿ ಟೀಕಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇವತೆಗಳನ್ನು ಅಪಹಾಸ್ಯ ಮಾಡುವುದನ್ನು ಒಪ್ಪಲಾಗದು. ಇಂತಹ ತುಚ್ಛ ಕಾರ್ಯಕ್ರಮ ನೀಡುವವರು ನ್ಯಾಯಾಲಯದಿಂದ ಯಾವುದೇ ರಕ್ಷಣೆ ನಿರೀಕ್ಷಿಸುವಂತಿಲ್ಲ ಎಂದು ನ್ಯಾಯಮೂರ್ತಿ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಸ್ಕಿಟ್‌ನಲ್ಲಿ ಹಿಂದೂ ಪೌರಾಣಿಕ ಪಾತ್ರಗಳನ್ನು ಹಾಸ್ಯ ಮಾಡಿ ಧಾರ್ಮಿಕ ಘನತೆಗೆ ಕುಂದು ತರಲಾಗಿದೆ ಎಂದು ಆರೋಪಿಸಿ ಪ್ರಶಾಂತ್ ಶಶಿಧರ್ ನರಗುಂದ ದೂರು ನೀಡಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299ರ ಅಡಿ ಎಫ್‌ಐಆರ್ ದಾಖಲಾಗಿತ್ತು. ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ನಂತರ ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ವಾಹಿನಿಯ ಪರ ವಕೀಲರು, ಇದು ನೇರವಾಗಿ ದೇವರನ್ನು ಉದ್ದೇಶಿಸಿದ ಸ್ಕಿಟ್ ಅಲ್ಲ, ಹಳ್ಳಿಯ ನಾಟಕದ ರಿಹರ್ಸಲ್ ಹೇಗಿರುತ್ತದೆ ಎಂಬ ಹಾಸ್ಯದ ಭಾಗವಾಗಿತ್ತು ಎಂದು ವಾದಿಸಿ ತನಿಖೆಯನ್ನು ರದ್ದುಗೊಳಿಸಲು ಕೋರಿದರು. ತನಿಖೆ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ತನಿಖೆ ಮುಂದುವರಿಸಲು ಸೂಚಿಸಿದೆ.

ವಾಹಿನಿಯ ಪ್ರತಿನಿಧಿಗಳು ಮತ್ತು ನಿರ್ದೇಶಕರು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂಬ ಷರತ್ತಿನ ಮೇಲೆ ಅವರನ್ನು ಬಂಧಿಸದಂತೆ ನ್ಯಾಯಾಲಯವು ಮಧ್ಯಂತರ ಆದೇಶ ನೀಡಿದೆ. ಮನರಂಜನೆ ಮತ್ತು ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಸಮಾಜದ ಶಾಂತಿಯನ್ನು ಕದಡಬಾರದು ಎಂದು ಎಚ್ಚರಿಕೆ ನೀಡಿದೆ.

ಸೃಜನಶೀಲತೆಯ ಹೆಸರಿನಲ್ಲಿ ಧರ್ಮ ಮತ್ತು ದೇವತೆಗಳನ್ನು ಅಪಹಾಸ್ಯ ಮಾಡುವುದು ಕಾನೂನು ಕ್ರಮಕ್ಕೆ ದಾರಿ ಮಾಡಿಕೊಡುತ್ತದೆ. ಮುಂದಿನ ದಿನದಲ್ಲಿ ಈ ರೀತಿ ತಪ್ಪುಗಳಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.

Related Posts

Leave a Reply

Your email address will not be published. Required fields are marked *