ಎರಡೂವರೆ ತಿಂಗಳ ನಾಯಿ ಮರಿಯ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ವೀಡಿಯೊ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಂಬೈನ ಮಲಾಡ್ ಬಳಿ ಸಾರ್ವಜನಿಕ ಶೌಚಾಲಯದಲ್ಲಿ ಈ ಹೇಯ ಕೃತ್ಯ ನಡೆದಿದೆ.
ಆರೋಪಿ ನಾಯಿ ಮರಿಯನ್ನು ಬಲವಂತವಾಗಿ ಶೌಚಾಲಯದೊಳಗೆ ಕರೆದೊಯ್ದು ಅದರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಥಳಿಸಿದ್ದಾನೆ. ಪ್ರಾಣಿ ಕಲ್ಯಾಣ ಸಂಸ್ಥೆ ಪಿಎಎಲ್ ಫೌಂಡೇಶನ್ನ ಕಾರ್ಯಕರ್ತರಿಗೆ ಮಾಹಿತಿ ತಿಳಿದ ತಕ್ಷಣ ಅವರು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವೈರಲ್ ವೀಡಿಯೊದಲ್ಲಿ ಮುಂಬೈ ಪೊಲೀಸರು ಮತ್ತು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಶೌಚಾಲಯದ ಬಾಗಿಲು ಬಡಿಯುತ್ತಿರುವುದು ಕಂಡುಬಂದಿದೆ. ಆರೋಪಿ ಮೊದಲು ಬಾಗಿಲು ತೆರೆಯಲು ನಿರಾಕರಿಸಿದ್ದಾನೆ. ಪೊಲೀಸರು ಬಲವಂತವಾಗಿ ಒಳಪ್ರವೇಶಿಸಿದಾಗ ವಿಕೃತಿ ಬಯಲಾಗಿದೆ. ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದೃಶ್ಯಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಲೈಂಗಿಕ ದೌರ್ಜನ್ಯ ಮತ್ತು ದೈಹಿಕ ಹಲ್ಲೆಯಿಂದಾಗಿ ಎರಡೂವರೆ ತಿಂಗಳ ನಾಯಿ ಮರಿ ಗಂಭೀರವಾಗಿ ಗಾಯಗೊಂಡಿದೆ. ಪಿಎಎಲ್ ಫೌಂಡೇಶನ್ನ ಸದಸ್ಯರು ಪಶು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಯಿ ಮರಿ ವೈದ್ಯಕೀಯ ನಿಗಾದಲ್ಲಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದು, ಆರೋಪಿಗೆ ಸೂಕ್ತ ಶಿಕ್ಷೆ ಕೊಡಿಸಲು ಬದ್ಧ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


