Wednesday, January 21, 2026
Menu

ಎಳನೀರಿಗಾಗಿ ಸ್ನೇಹಿತನ ಮರಹತ್ತಿಸಿ ಬಿದ್ದು ಮೂಳೆ ಮುರಿದಾಗ ಕೆರೆಯಲ್ಲಿ ಮುಳುಗಿಸಿ ಕೊಂದರು

ಮದ್ಯಕ್ಕೆ ಬೆರೆಸಲು ಎಳನೀರಿಗಾಗಿ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಗಂಭೀರ ಏಟಾದ ಬಳಿಕ ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚು ಆಗುವುದೆಂದು  ಕೆರೆಯಲ್ಲಿ ಮುಳುಗಿಸಿ  ಕೊಲೆಗೈದು ಎಸೆದಿರುವ ಭಯಾನಕ ಘಟನೆಯೊಂದು ಮಾಗಡಿಯಲ್ಲಿ ನಡೆದಿದೆ.

ರಾಮನಗರದ ಮಾಗಡಿ ತಾಲೂಕಿನ ವಾಜರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಗೆಳೆಯರ ಗುಂಪು ಜೊತೆಯಲ್ಲಿದ್ದ ಸ್ನೇಹಿತನನ್ನು ನಿರ್ದಯವಾಗಿ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದೆ.

ಕೊಲೆಯಾದ ಯುವಕ ವಿನೋದ್ ಕುಮಾರ್ (26) ಹಾಗೂ ಆರೋಪಿಗಳಾದ ಸುದೀಪ್ ಮತ್ತು ಪ್ರಜ್ವಲ್ ಮಾಗಡಿ ಕಲ್ಯಾಣಪುರ ಗ್ರಾಮದವವರು. ಹೊಸವರ್ಷ ಆಚರಣೆಗಾಗಿ ಐವರು ಸ್ನೇಹಿತರು ಒಟ್ಟಾಗಿ ಪಾರ್ಟಿಗೆ ತೆರಳಿದ್ದರು. ಮದ್ಯಕ್ಕೆ ಎಳನೀರು ಬೆರೆಸಲು ತೀರ್ಮಾನಿಸಿ ವಿನೋದ್ ಕುಮಾರ್​​ನನ್ನು ತೆಂಗಿನ ಮರ ಹತ್ತುವಂತೆ ಮಾಡಿದ್ದರು. ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದು, ಆತನ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹಣ ಖರ್ಚಾಗಬಹುದು ಎಂಬ ಆತಂಕದಿಂದ ಆರೋಪಿಗಳು ಭೀತಿಗೊಂಡಿದ್ದಾರೆ. ವಿನೋದ್​ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ ಮಾರ್ಗಮಧ್ಯೆ ವಾಜರಹಳ್ಳಿ ಸಮೀಪ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ಆರೋಪಿಗಳು ವಿನೋದ್​ನನ್ನು ಕೆರೆಯಲ್ಲಿ ಮುಳುಗಿಸಿದ ನಂತರ ಸಂಜೆ ಮತ್ತೆ ಸ್ಥಳಕ್ಕೆ ಬಂದು ಮೃತದೇಹವನ್ನು ಹೊರತೆಗೆದು ತಂತಿಯಿಂದ ಸೈಜುಕಲ್ಲು ಕಟ್ಟಿ ಬಾವಿಗೆ ಎಸೆದಿದ್ದರು.  ವಿನೋದ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಡೆಸಿದ ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ಸ್ನೇಹಿತರಿಂದಲೇ ಕೊಲೆಯಾಗಿರುವ ರಹಸ್ಯ ಬಯಲಾಗಿದೆ. ಆರೋಪಿಗಳಾದ ಸುದೀಪ್ ಮತ್ತು ಪ್ರಜ್ವಲ್​ನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *