Wednesday, January 21, 2026
Menu

ಎಲ್‌ಐಸಿ ಕಚೇರಿಯಲ್ಲಿ ಬೆಂಕಿಗೆ ಮಹಿಳೆ ಬಲಿ: ಸಹೋದ್ಯೋಗಿಯಿಂದ ಕೊಲೆಯೆಂದು ಬಯಲಿಗೆಳೆದ ಪೊಲೀಸ್‌

ಕಳೆದ ತಿಂಗಳು ಮಧುರೈ ಎಲ್‌ಐಸಿ ಕಚೇರಿಯಲ್ಲಿ ಬೆಂಕಿ ಅನಾಹುತದಲ್ಲಿ ಮಹಿಳಾ ಅಧಿಕಾರಿ ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಡೆತ್ ಕ್ಲೇಮ್ ಫೈಲ್‌ಗಳನ್ನು ನಾಶಮಾಡಲು ಸಹೋದ್ಯೋಗಿ ನಡೆಸಿದ ಪೂರ್ವನಿಯೋಜಿತ ಕೊಲೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಇದು ಬೆಂಕಿ ಆಕಸ್ಮಿಕ ಅಲ್ಲ, ಮೊದಲೇ ಪ್ಲಾನ್ ಮಾಡಿ ಮಾಡಿದ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಕೊಲೆಯಾದ ಮಹಿಳಾ ಅಧಿಕಾರಿ ಕಲ್ಯಾಣಿ ನಂಬಿಯ ಸಹೋದ್ಯೋಗಿ ಎಲ್‌ಐಸಿ ಸಹಾಯಕ ಆಡಳಿತ ಅಧಿಕಾರಿ ಕೊಲೆಗಾರ ರಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಡಿಸೆಂಬರ್ 17ರಂದು ಪಶ್ಚಿಮ ವೆಲ್ಲಿ ಸ್ಟ್ರೀಟ್‌ ಎಲ್‌ಐಸಿ ಕಟ್ಟಡದ 2ನೇ ಮಹಡಿಯಲ್ಲಿ ಘಟನೆ ನಡೆದಿದ್ದು, ಕಲ್ಯಾಣಿ ನಂಬಿ ಸುಟ್ಟು ಕರಕಲಾಗಿದ್ದರು. ರಾಮ್‌ಗೆ ಸುಟ್ಟ ಗಾಯಗಳಾಗಿದ್ದುಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಪೊಲೀಸರು ವಿಚಾರಣೆ ನಡೆಸಿ ದ್ದಾಗ ಆರೋಪಿ ರಾಮ್, ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಬನಂದು ಕಲ್ಯಾಣಿಯ ಆಭರಣವನ್ನು ದರೋಡೆ ಮಾಡಲು ಯತ್ನಿ ಕಚೇರಿಗೆ ಬೆಂಕಿ ಹಚ್ಚಿದ್ದ ಎಂದು ಹೇಳಿಕೆ ನೀಡಿದ್ದ. ನಂತರದ ವಿಚಾರಣೆಯಲ್ಲಿ ಆತ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿರುವುದು ಅನು ಮಾನಕ್ಕೆ ಕಾರಣವಾಗಿತ್ತು.

ತನಿಖೆ ತೀವ್ರಗೊಳಿಸಿದ ಪೊಲೀಸರು, ರಾಮ್ ಕ್ಯಾಬಿನ್‌ನಿಂದ ಪೆಟ್ರೋಲ್ ತುಂಬಿದ್ದ ನೀರಿನ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಬೈಕ್‌ನಿಂದ ಪೆಟ್ರೋಲ್ ತೆಗೆಯಲು ಬಳಸಿದ ಟ್ಯೂಬ್ ಪತ್ತೆಯಾಗಿದೆ. ಕಲ್ಯಾಣಿ ಅವರು ಆ ರಾತ್ರಿ ಕರೆ ಮಾಡಿ ಪೊಲೀಸರಿಗೆ ಕರೆ ಮಾಡುವಂತೆ ಹೇಳಿದ್ದಾಗಿ ಆಕೆಯ ಮಗ ಪೊಲೀಸರಿಗೆ ತಿಳಿಸಿದ್ದಾನೆ. ಈ ಅಂಶಗಳು ಕೊಲೆ ಸಂಚು ಬಯಲು ಮಾಡುವಲ್ಲಿ ನೆರವಾಗಿವೆ.

ಹಲವು ಇನ್ಸ್ಶೂರೆನ್ಸ್ ಏಜೆಂಟ್‌ಗಳು ಕಲ್ಯಾಣಿ ಅವರಿಗೆ ಕರೆ ಮಾಡಿ ರಾಮ್‌ ಎಲ್‌ಐಸಿ ಗ್ರಾಹಕರ 40 ಕ್ಕೂ ಹೆಚ್ಚು ಡೆತ್ ಕ್ಲೇಮ್‌ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದರು. ಕಲ್ಯಾಣಿ ಈ ಬಗ್ಗೆ ಆರೋಪಿ ರಾಮ್‌ ಬಳಿ ಪ್ರಶ್ನಿಸಿದ್ದರು. ಮತ್ತಷ್ಟು ವಿಳಂಬ ಮಾಡಿದರೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದ್ದರು. ಹೀಗಾಗಿ ರಾಮ್ ಕಲ್ಯಾಣಿಯವರನ್ನು ಕೊಂದು ಡೆತ್ ಕ್ಲೇಮ್ ಫೈಲ್‌ಗಳನ್ನು ನಾಶಪಡಿಸಲು ಪ್ಲಾನ್ ಮಾಡಿದ್ದ.

ಪೊಲೀಸರ ಪ್ರಕಾರ, ಡಿಸೆಂಬರ್ 17 ರಂದು ರಾತ್ರಿ 8.30ಕ್ಕೆ ಕಲ್ಯಾಣಿ ಕ್ಯಾಬಿನ್‌ನಲ್ಲಿದ್ದಾಗ ರಾಮ್ ಕಟ್ಟಡಕ್ಕೆ ಮುಖ್ಯ ವಿದ್ಯುತ್ ಸರಬರಾಜು ಬಂದ್ ಮಾಡಿ ತಮಿಳುನಾಡು ಇಲೆಕ್ಟ್ರಿಸಿಟಿ ಬೋರ್ಡ್‌ಗೆ ಮೇಲ್ ಮಾಡಿದ್ದು, ಕಟ್ಟಡದ ವಿದ್ಯುತ್ ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂದು ತಿಳಿಸಿ ದುರಸ್ತಿಗೆ ವಿನಂತಿಸಿದ್ದಾನೆ. ಮುಖ್ಯ ಗಾಜಿನ ಬಾಗಿಲನ್ನು ಸಂಕೋಲೆಯಿಂದ ಲಾಕ್ ಮಾಡಿದ್ದಾನೆ. ರಾಮ್ ವಿದ್ಯುತ್ ಸರಬರಾಜು ಬಂದ್ ಮಾಡಿದ್ದರಿಂದ ದೀಪಗಳು ಆರಿದಾಗ ಯಾರೋ ಮುಖ್ಯ ಬಾಗಿಲನ್ನು ಲಾಕ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಲ್ಯಾಣಿ ಗಮನಿಸಿದ್ದಾರೆ. ಏನೋ ತಪ್ಪಾಗಿದೆ ಎಂದು ಗ್ರಹಿಸಿ ಆಕೆ ಸಹಾಯಕ್ಕಾಗಿ ಕೂಗಿದ್ದಾಳೆ. ಈ ವೇಳೆ ರಾಮ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇಡೀ ಕ್ಯಾಬಿನ್‌ ಸುಟ್ಟು ಹೋಗಿದೆ. ಆಕಸ್ಮಿಕ ವೆಂದು ಬಿಂಬಿಸುವುದಕ್ಕೆ ರಾಮ್ ತನ್ನ ಕ್ಯಾಬಿನ್‌ಗೂ ಬೆಂಕಿ ಹಚ್ಚಲು ಪ್ರಯತ್ನಿಸಿ ಅವನಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *