ಚಿತ್ರದುರ್ಗನಗರ ಹೊರವಲಯದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುವ ಆದಿಶಕ್ತಿ ಶ್ರೀ ಮಾತಂಗೇಶ್ವರಿ ದೇಗುಲದ ಭೂಮಿ ಪೂಜೆಯನ್ನು ಸಂಸದರಾದ ಮೈಸೂರಿನ ಯದುವೀರ ಕೃಷ್ಣದತ್ತ ಒಡೆಯರ್ ನೆರವೇರಿಸಿದರು.
ಬಳಿಕ ಮಾತನಾಡಿದ ಯದುವೀರ್, ಮಠದ ಆಶ್ರಯದಲ್ಲಿ ದೇವಾಲಯ ನಿರ್ಮಾಣ ಮಾಡುತ್ತಿರುವುದು ಉತ್ತಮವಾದ ಕಾರ್ಯವಾಗಿದೆ. ಚಿತ್ರದುರ್ಗ ಜಿಲ್ಲೆಗೂ ಆರಮನೆಗೂ ಅವಿನಭಾವ ಸಂಬಂಧ ಇದೆ ಈ ಜಿಲ್ಲೆಯಲ್ಲಿ ನಮ್ಮ ಹಿರಿಯರು ಜನತೆಯ ಕಲ್ಯಾಣಕ್ಕಾಗಿ ಎರಡು ಕಡೆಗಳಲ್ಲಿ ಜಲಾಶಯಗಳನ್ನು ನಿರ್ಮಾಣ ಮಾಡಿದ್ದಾರೆ. ನಾನು ಅಲ್ಲಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.
ಹಿಂದುಳಿದ ಜನಾಂಗಕ್ಕೆ ಅನ್ಯಾಯವಾದಾಗ ಅಲ್ಲಿ ಮಹಾರಾಜರು ನ್ಯಾಯವನ್ನು ಒದಗಿಸುವ ಕಾರ್ಯ ಮಾಡಿದ್ದಾರೆ. ಶೋಷಿತರಿಗೆ ಮೀಸಲಾತಿಯನ್ನು ನೀಡುವುದರ ಮೂಲಕ ಅವರು ಮುಖ್ಯವಾಹಿನಿಗೆ ಬರಲು ನೆರವಾದರು. ಮಹಾರಾಜರು ಸಂವಿಧಾನ ರೂಪು ರೇಷೆಗಳನ್ನು ತಪ್ಪದೆ ಜಾರಿ ಮಾಡಿದ್ದರು. ಕಾಲಕ್ಕೆ ತಕ್ಕಂತೆ ಎಲ್ಲಾ ಬದಲಾವಣೆ ಆಗುವಂತೆ ಸಂವಿಧಾನದಲ್ಲಿಯೂ ಸಹಾ ತಿದ್ದುಪಡಿಗಳನ್ನು ಮಾಡುವುದರ ಮೂಲಕ ಈಗಿನ ಕಾಲಕ್ಕೆ ತಕ್ಕಂತೆ ಕಾನೂನುಗಳನ್ನು ಜಾರಿ ಮಾಡಬೇಕಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಚುನಾವಣೆ ಸಮಯದಲ್ಲಿ ನೀವುಗಳು ಯಾವ ಪಕ್ಷದಲ್ಲಿಯಾದರೂ ಇರಿ , ಆದರೆ ಸಮಾಜಕ್ಕೆ ಧಕ್ಕೆ ಬಂದಾಗ ಮಾತ್ರ ಒಗ್ಗಟ್ಟಾಗಿ ಇರಬೇಕಿದೆ, ನಮ್ಮ ಸಮಾಜಕ್ಕೆ ಮಠದ ಮಾರ್ಗದರ್ಶನ ಅಗತ್ಯ. ಎಲ್ಲರು ಸೇರಿ ದೇವಾಲಯ ನಿರ್ಮಾಣ ಮಾಡಬೇಕಿದೆ. ಇದರ ನಿರ್ಮಾಣಕ್ಕೆ ಶ್ರೀಗಳು ಯಾರಿಂದಲೂ ಹಣನ್ನು ಕೇಳಬಾರದು. ಪೂರ್ಣ ಪ್ರಮಾಣದ ವೆಚ್ಚವನ್ನು ಭಕ್ತರೇ ನಿರ್ವಹಣೆ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಭಕ್ತರು ಸ್ವಯಂಪ್ರೇರಿತರಾಗಿ ದೇವಾಲಯ ನಿರ್ಮಾಣಕ್ಕೆ ತನು,ಮನ, ಧನ ನೀಡುವುದರ ಮೂಲಕ 11 ತಿಂಗಳೊಳಗಾಗಿ ದೇವಾಲಯವನ್ನು ನಿರ್ಮಾಣ ಮಾಡಿ ಮಾಘ ಮಾಸದಲ್ಲಿ ಉದ್ಘಾಟನೆ ಮಾಡಬೇಕಿದೆ ಎಂದರು.
ಬೆಂಗಳೂರಿನಲ್ಲಿ ಮಾದರ ಮಹಾ ಸಭಾ ಕಚೇರಿಯನ್ನು ತಯಾರು ಮಾಡಲಾಗಿದ್ದು ಇದಕ್ಕಾಗಿ ಕಚೇರಿಯನ್ನು ನೋಡಲಾಗಿದೆ. ಮುಂದಿನ ದಿನದಲ್ಲಿ ಶ್ರೀಗಳಿಂದ ಉದ್ಘಾಟನೆ ಮಾಡಿಸಲಾಗುವುದು. ನಮ್ಮ ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಬೇಕಿದೆ. ಚುನಾವಣೆ ಸಮಯದಲ್ಲಿ ಮಾತ್ರ ನಾವು ಬೇರೆ, ಬೇರೆ. ಆದರೆ ಚುನಾವಣೆ ಮುಗಿದ ಮೇಲೆ ನಾವೆಲ್ಲ ಒಂದೇ, ಸಮಾಜಕ್ಕೆ ತೊಂದರೆ ಬಂದಾಗ ನಮ್ಮ ಬಲ ಪ್ರದರ್ಶನ ಮಾಡಬೇಕಿದೆ ಎಂದು ಹೇಳಿದರು.
ಕನಕ ಪೀಠದ ಪೀಠಾಧ್ಯಕ್ಷರಾದ ನಿರಂಜನಾಂದಪುರಿ ಸ್ವಾಮೀಜಿ ಮಾತನಾಡಿ, ದಲಿತರ ಕಾಲೋನಿಯಲ್ಲಿ ಗಲ್ಲೇ ದೇವರ ಗುಡಿಗಳಿಂದ ನೀರನ್ನು ತೆಗೆದುಕೊಂಡು ಬಂದು ಸಾಂಪ್ರದಾಯಿಕ ಧಾರ್ಮಿಕ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿತ್ತು, ಇಂದಿಗೂ ನಾವು ಕಾಣುತ್ತಿದ್ದೇವೆ. ಮಾದರ ಚೆನ್ನಯ್ಯ ಶ್ರೀಗಳು ನಿರಂತರವಾಗಿ ಎಲ್ಲಾ ಸಮುದಾಯದ ಸ್ವಾಮೀಜಿಗಳ ಜೊತೆಗೆ ಪ್ರೀತಿ ಸಹ ಬಾಳ್ವೆಯಿಂದ ಇದ್ದಾರೆ. ಜನರಲ್ಲಿ ಜಾತಿಯ ತಾರತಮ್ಯ ಇರಬಹುದು, ಸ್ವಾಮೀಜಿಗಳಾದವರಲ್ಲಿ ಭೇದಭಾವ ವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಸಹಬಾಳ್ವೆಯಿಂದ ಇದ್ದೇವೆ ಎಂದು ತಿಳಿಸಿದರು.
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ಮಾತನಾಡಿ, ಶೋಷಿತರಿಗೆ ಮಹಿಳೆಯರಿಗೆ ಸಮಾನತೆಯನ್ನು ನೀಡಿದವರು ಮೈಸೂರು ಮಹಾರಾಜರು, ನಮ್ಮ ಸಮುದಾಯಕ್ಕೆ ಎಲ್ಲಾ ಸಮುದಾಯದ ಗುರು ಗಳು ಉತ್ತಮ ಸಹಕಾರ ನೀಡಿದ್ದಾರೆ. ರಾಜಕೀಯವಾಗಿ ನಮ್ಮ ಸಮುದಾಯ ಬೆಳೆಯಬೇಕಿದೆ, ಈ ಹಿಂದೆ ನಮ್ಮ ಮಠಕ್ಕೆ ಕರೆದಾಗ ತಿರಸ್ಕಾರ ದಿಂದ ಇದ್ದವರು ಈಗ ಅಭಿಮಾನದಿಂದ ಬರುತ್ತಿದ್ದಾರೆ, ಈ ಮಟ್ಟಕ್ಕೆ ನಮ್ಮ ಮಠ ಬೆಳೆಯುತ್ತಿದೆ. ಈಗ ನಿರ್ಮಾಣಕ್ಕೆ ಮುಂದಾಗಿರುವ ಮಾತಂಗಿ ದೇವಾಲಯವನ್ನು ಶೀಘ್ರದಲ್ಲಿಯೇ ಮುನಿಯಪ್ಪರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗುವುದು. ಅಯೋಧ್ಯೆ ಶ್ರೀರಾಮ ವಿಗ್ರಹ ಕೆತ್ತನೆ ಮಾಡಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಮಾತಂಗೇಶ್ವರಿ ದೇವಿಯ ವಿಗ್ರಹ ಕೆತ್ತನೆ ಮಾಡಲಿದ್ದಾರೆ ಎಂದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಮಾತಂಗಿ ಮಾದಿಗರ ಕುಲದೇವತೆಯಾದರೂ ಎಲ್ಲಿಯೂ ದೇವಾಲಯ ಇಲ್ಲವಾಗಿದೆ. ಹಲವಾರು ಜನ ತೋರಿಕೆಗೆ ಸಂವಿಧಾನ ಪುಸ್ತಕವನ್ನು ಪ್ರದರ್ಶನ ಮಾಡುತ್ತಿದ್ದಾರೆ, ಆದರೆ ಅದರಲ್ಲಿ ಏನು ಇದೆ ಎಂದು ಅವರಿಗೆ ಗೊತ್ತಿಲ್ಲ. ಸಂವಿಧಾನದ ಬಗ್ಗೆ ದೊಡ್ಡದಾದ ಮಾತುಗಳನ್ನು ಆಡುತ್ತಾ ನಮ್ಮಂತಹ ಶೋಷಿತರನ್ನು ಮೋಸ ಮಾಡುತ್ತಿದ್ದಾರೆ. ದೇವಾಲಯದ ನಿರ್ಮಾಣ ಜೊತೆಗೆ ನಮ್ಮವರು ಜ್ಞಾನರ್ಜನೆಯನ್ನು ಮಾಡಬೇಕಿದೆ, ಆಗ ಮಾತ್ರ ನಮ್ಮ ಸಮಾಜ ಪ್ರಗತಿ ಹೊಂದಲು ಸಾಧ್ಯವಿದೆ ಎಂದರು.
ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ರಾಜ್ಯದಲ್ಲಿ ಸಂಚಾರವನ್ನು ಮಾಡುವುದರ ಮೂಲಕ ಸಮಾಜವನ್ನು ಸಂಘಟಿಸಿದ್ದಾರೆ. ಶಿಕ್ಷಣ ಪಡೆಯುವುದರ ಮೂಲಕ ರಾಜಕೀಯ, ಸರ್ಕಾರಿ ಸೌಲಭ್ಯ ಹಾಗೂ ಉದ್ಯೋಗವನ್ನು ಪಡೆಯಲು ಮುಂದಾಗಿದ್ದಾರೆ. ಸಾಧರು, ಮಾದರು ಅಣ್ಣ-ತಮ್ಮಂದಿರು ಇದ್ದಂತೆ. ಮಾದರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಕೊಟ್ಟ ಮಾತನ್ನು ಉಳಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಹಂಪಿ ಹೇಮಕೂಟದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ, ಹಿರಿಯೂರು ಆದಿಜಾಂಬವ ಮಠದ ಶ್ರೀ ಷಡಾಕ್ಷರಮುನಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಶ್ರೀಗಳು, ಸಾನ್ನಿಧ್ಯ ವಹಿಸಿದ್ದರು ಇದೇ ವೇಳೆ ಮಾದಾರ ಚನ್ನಯ್ಯ ಗುರುಪೀಠದಿಂದ ಹೊರಬರಲಿರುವ ಹೊಸ ಮಾಸ ಪತ್ರಿಕೆ ಶರಣರ ಚೆನ್ನುಡಿಯನ್ನು ಲೋಕಾರ್ಪಣೆ ಮಾಡಲಾಯಿತು.
ಶಾಸಕ ದುರ್ಯೋಧನ ಐಹೊಳೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾಜಿ ಶಾಸಕರಾದ ಎಂ.ಶಿವಣ್ಣ, ತಿಮ್ಮರಾಯಪ್ಪ, ಆದಿ ಜಾಂಭವ ಅಭೀವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಧ ರಘು ಕೆಳಗೋಟೆ, ಶಿವಶರಣ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ್ ಹೂಡಿ ಲೋಕಸೇವಾ ಆಯೋಗದ ಸದಸ್ಯರಾದ ಡಾ,ಶಾಂತ ಹೊಸಮನಿ, ಮಾಜಿ ಶಾಸಕರಾಧ ಎಸ್.ಕೆ. ಬಸವರಾಜನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆಜೆ.ಹಟ್ಟಿ ತಿಪ್ಪೇಸ್ವಾಮಿ, ಲಿಡ್ಕರ್ ಮಾಜಿ ಅಧ್ಯಕ್ಷ ಈ ಶಂಕರ್ರ, ನಗರಸಭೆಯ ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್, ಮೋಹನ್, ಅನಿತ್ ಕುಮಾರ್, ನರಸಿಂಹರಾಜು, ಉಮೇಶ್ ಕಾರಜೋಳ, ಕೆ.ಟಿ.ಕುಮಾರಸ್ವಾಮಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್ ಇತರರು ಭಾಗವಹಿಸಿದ್ದರು.
ಶ್ರೀ ಬಸವಮೂರ್ತಿ ಮಾದಾಚನ್ನಯ್ಯ ಶ್ರೀಗಳ ಪೂರ್ವಾಶ್ರಮದ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರಾದ ಟಿ.ಬಸವರಾಜಪ್ಪ, ಮಸ್ರತ್‍ನಾಜ್ ಬೇಗಂ, ಡಿ.ಟಿ.ವೆಂಕಟೇಶ್‍ರೆಡ್ಡಿ, ಎಚ್.ಎಸ್.ಲಲಿತಮ್ಮ, ಬಸವರಾಜಪ್ಪ, ಎ.ಆರ್.ಶಿವಮೂರ್ತಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.


