Wednesday, January 21, 2026
Menu

ಕೊಪ್ಪಳದಲ್ಲಿ 27 ವರ್ಷಗಳಿಂದ ಅತಿ ಕಡಿಮೆ ದರದಲ್ಲಿ ಶ್ರಮಿಕರ ಹೊಟ್ಟೆ ತುಂಬಿಸುವ ರವಿ ಹೋಟೆಲ್‌

-ಬಸವರಾಜ ಕರುಗಲ್‌

ಇಪ್ಪತ್ತು ರೂಪಾಯಿ ಕೊಟ್ಟರೂ ಒಂದು ಕಪ್‌ ಚಹಾ ದೊರಕದ ಕಾಲವಿದು. ಸಾಮಾನ್ಯ ಹೊಟೇಲ್‌ಗೆ ಹೊಕ್ಕರೆ ಒಬ್ಬರಿಗೆ ಕನಿಷ್ಠವೆಂದರೂ ನೂರು ರೂಪಾಯಿ ಬಿಲ್‌ ಆಗುವ ಈ ದಿನಗಳಲ್ಲಿ ಹತ್ತು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಉಪಹಾರ    ಕೊಪ್ಪಳದಲ್ಲಿರುವ ಈ ರವಿ ಹೊಟೇಲ್‌ನಲ್ಲಿ ಸಿಗುತ್ತೆ.!

ಇಷ್ಟು ಕಡಿಮೆ ದರ ಇದೆ ಎಂದರೆ ಈ ಹೊಟೇಲ್‌ ಹಳ್ಳಿಯೊಂದರಲ್ಲಿ ಜೋಪಡಿಯಲ್ಲಿರುವ ಚಿಕ್ಕ ಚಹಾದಂಗಡಿ ಎಂದು ಊಹಿಸಿದರೆ ಅದು ತಪ್ಪು. ಈ ಹೊಟೇಲ್‌ ಇರುವುದು ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಒಂದಾಗಿರುವ ಕೊಪ್ಪಳದಲ್ಲಿ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಫೇವರೇಟ್‌ ಹೊಟೇಲ್‌ ಇದು.

ಕೊಪ್ಪಳದ ಗಡಿಯಾರ ಕಂಬದ ಬಳಿ ಚಿಕ್ಕ ಜಾಗದಲ್ಲಿ ಇರುವ ಈ ಹೊಟೇಲ್‌ ರಜತ ಸಂಭ್ರಮ ಕಂಡಿದೆ. ಹೊಟೇಲ್‌ ಆರಂಭಿಸಿ 25 ವರ್ಷಗಳು ಪೂರೈಸಿವೆ. ಎರಡು ವರ್ಷಗಳ ಹಿಂದೆ ಹೊಟೇಲ್‌ನ ಬೆಳ್ಳಿಮಹೋತ್ಸವದ ಸಂಭ್ರಮಕ್ಕೆ ಹೊಟೇಲ್‌ ಮಾಲಕ ರವಿ ಕನಕಗಿರಿ ಆ ದಿನ ಎಲ್ಲರಿಗೂ ಉಚಿತ ಸಿಹಿ ಹಂಚಿದ್ದಾರೆ.

ವಾರದ ಆರು ಅಂದರೆ ರವಿವಾರ ಹೊರತುಪಡಿಸಿ ಉಳಿದೆಲ್ಲ ದಿನ ತೆರೆದಿರುವ ಹೊಟೇಲ್‌ ಶುರುವಾಗುವುದು ಬೆಳಗ್ಗೆ 8 ಕ್ಕೆ. ಮೊದಲು ಫುಟ್‌ಪಾತ್‌ನಲ್ಲಿದ್ದ ಅಂಗಡಿ ವ್ಯಾಪಾರ ಅಧಿಕಾರಿಗಳ ಕಿರಿಕಿರಿಯಿಂದಾಗಿ ಅದೇ ಸ್ಥಳದ ಹಿಂಬದಿಯ ಪುಟ್ಟ ಸ್ಥಳವನ್ನು ತಿಂಗಳಿಗೆ ಮೂರು ಸಾವಿರ ರೂಪಾಯಿ ಬಾಡಿಗೆ ಕೊಡುತ್ತಾ ಪುಟ್ಟ ಹೊಟೇಲ್‌ ನಡೆಸುತ್ತಿದ್ದಾರೆ ರವಿ.

ಬೆಳಗ್ಗೆ 8 ರಿಂದ 10ರ ವರೆಗೆ ಉಪ್ಪಿಟ್ಟು, ಬೆಳಗ್ಗೆ 10 ರಿಂದ 11-30ರ ವರೆಗೆ ಚುರುಮುರಿ ವಗ್ಗರಣೆ ಮತ್ತು ಮಿರ್ಚಿ, ಮಧ್ಯಾಹ್ನ 12ರಿಂದ 3-30ರ ವರೆಗೆ ಅವಲಕ್ಕಿ ವಗ್ಗರಣೆ ಮತ್ತು ಮಿರ್ಚಿ. ಅಂಗಡಿ ಶುರುವಾಗಿ ಮುಚ್ಚುವವರೆಗೆ ಚಹಾ ಇದ್ದೇ ಇರುತ್ತದೆ. ಒಂದು ಪ್ಲೇಟ್‌ ಉಪ್ಪಿಟ್ಟಿಗೆ 10 ರೂಪಾಯಿ, ಒಂದು ಪ್ಲೇಟ್‌ ಚುರುಮುರಿ ವಗ್ಗರಣೆಗೆ 10 ರೂಪಾಯಿ, ಒಂದು ಪ್ಲೇಟ್‌ ಅವಲಕ್ಕಿ ವಗ್ಗರಣೆಗೆ 10 ರೂಪಾಯಿ. ಎರಡು ಮಿರ್ಚಿಗೆ 5 ರೂಪಾಯಿ. ಒಂದು ಚಹಾಗೆ 5 ರೂಪಾಯಿ. ಒಟ್ಟಿನಲ್ಲಿ ಬಹಳ ಎಂದರೆ ಇಪ್ಪತ್ತು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಉಪಹಾರ ಖಾದ್ಯಗಳು ರವಿ ಹೊಟೇಲ್‌ನಲ್ಲಿ ಸಿಗುತ್ತವೆ.

ವಿಶೇಷವೆಂದರೆ ಹೊಟೇಲ್‌ಗೆ ನಾಮಫಲಕವಿಲ್ಲ. ರಜತ ಮಹೋತ್ಸವದ ಸಂಭ್ರಮದ ವೇಳೆ ಬ್ಯಾನರ್‌ ಹಾಕಿಸಿದ್ದಾಗ ರವಿ ಹೊಟೇಲ್‌ ಅಂತ ಇದ್ದದ್ದು ಬಿಟ್ಟರೆ ಈಗಲೂ ಫಲಕ ಹಾಕಿಸಿಲ್ಲ. ಬೋರ್ಡ್‌ ಬೇಕಿಲ್ಲ ಸರ್‌, ಸುತ್ತಮುತ್ತಲಿನ ಹಳ್ಳಿ ಜನರಿಗೆ ಇದು ರವಿ ಹೊಟೇಲ್‌ ಅಂತಾನೇ ಫೇಮಸ್‌ ಅಂತಾರೆ ಮಾಲಕ ರವಿ ಕನಕಗಿರಿ.

ತಂದೆಯಿಂದಲೂ ಬಂದಿರುವ ಈ ಹೊಟೇಲ್‌ ನಡೆಸುತ್ತಾ ಬಂದಿರುವ ರವಿ, ತಮ್ಮಿಬ್ಬರು ಮಕ್ಕಳನ್ನು ಇಂಜನಿಯರ್‌ ಓದಿಸಿದ್ದಾರೆ. ಮಕ್ಕಳ ಮದುವೆಯ ಕನಸು ಕಾಣುತ್ತಿದ್ದಾರೆ. ಗಡಿಯಾರ ಕಂಬದ ಬಳಿ ಬೆಳಗ್ಗೆ ಕಾರ್ಮಿಕರೇ ಹೆಚ್ಚಾಗಿ ಇರುತ್ತಾರೆ. ಅವರೆಲ್ಲರ ಹಾಟ್‌ ಫೇವರೇಟ್‌ ಹೊಟೇಲ್‌ ಎಂದರೆ ಇದು.

“ದಿನಕ್ಕೆ 5 ಕೆಜಿ ಉಪ್ಪಿಟ್ಟು, ಒಂದು ದೊಡ್ಡ ಚೀಲ ಚುರುಮುರಿ, 10 ಕೆಜಿ ಅವಲಕ್ಕಿ ಖರ್ಚಾಗುತ್ತದೆ. ಸಹಾಯಕ್ಕೆ ಒಬ್ಬ ಹುಡುಗನನ್ನು ಕೆಲಸಕ್ಕೆ ಹಚ್ಚಿಕೊಂಡಿದ್ದೇನೆ. ಮೂರರಿಂದ ನಾಲ್ಕು ಸಾವಿರ ರೂಪಾಯಿ ವ್ಯಾಪಾರ ಆಗುತ್ತದೆ. ಇಲ್ಲಿಗೆ ಬರುವವರು ಬಡವರೇ. ಎಷ್ಟೊ ಜನ ಹಸಿವು ಅಂತ ಬಂದು ಕೇಳುತ್ತಾರೆ. ಹಣ ಇಲ್ಲ ಎಂದರೆ ಅವರನ್ನು ಪೀಡಿಸುವುದಿಲ್ಲ. ಭಗವಂತ ಕೊಟ್ಟಷ್ಟು ಸಹಾಯ ಮಾಡುತ್ತೇನೆ.” ಎನ್ನುತ್ತಾರೆ.  ಹೊಟೇಲ್‌ ಮಾಲಕ ರವಿ ಕನಕಗಿರಿ.

“ಇಂದಿರಾ ಕ್ಯಾಂಟೀನ್‌ ಈಗ ಬಂದಿವೆ. ಅದು ಕೊಪ್ಪಳದಲ್ಲಿ ಇರುವುದು ಒಂದೇ. ಅಲ್ಲಿನ ರುಚಿಗೂ, ರವಿ ಹೊಟೇಲ್‌ನ ಉಪಹಾರದ ರುಚಿಗೂ, ಪ್ಲೇಟ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಉಪ್ಪಿಟ್ಟು, ಮಂಡಾಳ ವಗ್ಗರಣೆ-ಮಿರ್ಚಿ ರವಿ ಹೊಟೇಲ್‌ನ ಸ್ಪೇಷಲ್.‌ ಸುಮಾರು ವರ್ಷಗಳಿಂದಲೂ ಈ ಹೊಟೇಲ್‌ಗೆ ಬರುತ್ತಿದ್ದೇನೆ. ರವಿ ಉತ್ತಮ ಮನುಷ್ಯ.” ಎಂಬುದಾಗಿ ಭಾಗ್ಯನಗರದ ನಿವಾಸಿಯಾಗಿರುವ ಗ್ರಾಹಕ ಗಂಗಾಧರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

 

Related Posts

Leave a Reply

Your email address will not be published. Required fields are marked *