ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಸರ್ಕಾರದ ವತಿಯಿಂದಲೇ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಕೋಲಾರ ತಾಲೂಕಿನ ನರಸಾಪುರದ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕೋಲಾರದ ಜಿಲ್ಲಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಮತ್ತು ಡಯಾಲಿಸಿಸ್ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಈ ಹಿಂದೆ ಕೋಲಾರ ನಗರದಲ್ಲಿ ವೈದ್ಯಕೀಯ ಕಾಲೇಜನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ಯಾವುದೇ ಖಾಸಗಿ ಸಂಸ್ಥೆಗಳು ಮುಂದೆ ಬಾರದ ಹಿನ್ನೆಲೆಯಲ್ಲಿ ಸರ್ಕಾರವೇ ಕಾಲೇಜು ನಿರ್ಮಾಣ ಮಾಡಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೂ ಚರ್ಚಿಸಲಾಗಿದ್ದು, ಮುಂಬರುವ ಬಜೆಟ್ ನಲ್ಲಿ ಸರ್ಕಾರದಿಂದಲೇ ಕಾಲೇಜು ನಿರ್ಮಾಣದ ಭರವಸೆ ನೀಡಲಿದ್ದಾರೆ ಎಂದು ಸುರೇಶ್ ತಿಳಿಸಿದರು.
23 ಎಕರೆ ಪ್ರದೇಶದಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮಾದರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದ್ದು, ಆದಷ್ಟೂ ಶೀಘ್ರದಲ್ಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕೋಲಾರಕ್ಕೆ 10 ಸಾವಿರ ಕೋಟಿ ರೂಪಾಯಿ
ಪ್ರತಿಪಕ್ಷಗಳು ಸರ್ಕಾರದಲ್ಲಿ ಹಣ ಇಲ್ಲ, ಬೊಕ್ಕಸ ಖಾಲಿ ಆಗಿದೆ ಎಂದೆಲ್ಲಾ ಸುಳ್ಳು ಹೇಳಿಕೊಂಡು ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಆದರೆ, ಕೋಲಾರ ಜಿಲ್ಲೆಯೊಂದಕ್ಕೇ ಕಳೆದ ಎರಡು ವರ್ಷಗಳಲ್ಲಿ 10 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಜಿಲ್ಲೆಗಳಿಗೆ ಹತ್ತು ಸಾವಿರ ಕೋಟಿ ರೂಪಾಯಿವರೆಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುತ್ತಿತ್ತೇ? ಎಂದು ಸುರೇಶ್ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಗೆ ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಬದ್ಧವಾಗಿದ್ದು, ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಸದ್ಯದಲ್ಲೇ ಆರಂಭಿಸಲಾಗುತ್ತದೆ. ಅಂತರಗಂಗೆಯಿಂದ ಕೋಲಾರಮ್ಮನ ಕೆರೆವರೆಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಬಡವರು, ದೀನದಲಿತರು, ಮಧ್ಯಮವರ್ಗದವರು, ಹಿಂದುಳಿದವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವಾರ್ಷಿಕ 55 ಸಾವಿರ ಕೋಟಿ ರೂಪಾಯಿಯನ್ನು ವೆಚ್ಚ ಮಾಡುತ್ತಿದೆ. ಇದರಿಂದ ಎಲ್ಲಾ ವರ್ಗದವರೂ ನೆಮ್ಮದಿಯ ಜೀವನ ಸಾಗಿಸುವಂತಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಇದನ್ನು ಬಳಸಿಕೊಂಡು ಕೋಲಾರವನ್ನು ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಂಕಲ್ಪ ಮಾಡೋಣ ಎಂದು ಅವರು ಕರೆ ನೀಡಿದರು.


