ಬಾಗಲಕೋಟೆ: ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಸ್ಥಳವಾಗಿ ಘೋಷಿಸುವ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿಗಳು ಲಕ್ಕುಂಡಿ ಉತ್ಖನನಕ್ಕೆ ಚಾಲನೆ ನೀಡಿದ್ದು, ಕಳೆದ ನಾಲ್ಕು ದಿನಗಳಲ್ಲಿ ದೊರೆತಿರುವ ವಸ್ತುಗಳು ಭೂಮಿಯ ಮೇಲ್ಮೈ ಭಾಗದಲ್ಲೇ ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಭೂಮಿಯ ಆಳದಲ್ಲಿ ಇನ್ನೂ ಅಪಾರ ಪ್ರಮಾಣದ ಪಾರಂಪರಿಕ, ಐತಿಹಾಸಿಕ ಹಾಗೂ ಕಲಾ ಸ್ಮಾರಕಗಳು ಪತ್ತೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಲಕ್ಕುಂಡಿ ರಾಜ್ಯ ಮಾತ್ರವಲ್ಲದೆ ದೇಶವೇ ಕಂಡ ಅಪರೂಪದ ಗ್ರಾಮಗಳಲ್ಲೊಂದು. ಈಗ ನಡೆಯುತ್ತಿರುವ ಉತ್ಖನನ ನಮ್ಮ ಇತಿಹಾಸವನ್ನು ನಾವು ಅರಿಯುವ ಮಹತ್ವದ ಪ್ರಕ್ರಿಯೆಯಾಗಿದ್ದು, ಇದರಿಂದ ತೃಪ್ತಿ ಲಭಿಸಿದೆ ಎಂದರು.
ಈಗಾಗಲೇ ಲಕ್ಕುಂಡಿಯಲ್ಲಿನ ಏಳು ದೇವಾಲಯಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (Archaeological Survey of India) ರಕ್ಷಿತ ಸ್ಮಾರಕಗಳಾಗಿ ಘೋಷಿಸಿ ನಿರ್ವಹಣೆ ಮಾಡುತ್ತಿದೆ. ರಾಜ್ಯ ಸರ್ಕಾರದ ವತಿಯಿಂದ ಇನ್ನೂ 16 ದೇವಾಲಯಗಳಲ್ಲಿ 13 ದೇವಾಲಯಗಳು ಹಾಗೂ ಮೂರು ಭಾವಿಗಳನ್ನು ರಾಜ್ಯ ರಕ್ಷಿತ ಸ್ಮಾರಕಗಳಾಗಿ ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ತಾವು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಲಕ್ಕುಂಡಿಯ 20 ಸ್ಮಾರಕಗಳನ್ನು ರಕ್ಷಿತ ಸ್ಮಾರಕಗಳಾಗಿ ಘೋಷಿಸಲು ಸೂಚನೆ ನೀಡಿರುವುದಾಗಿ ಹೇಳಿದರು.
ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ತಿಂಗಳೊಳಗೆ ಲಕ್ಕುಂಡಿಯ 44 ದೇವಾಲಯಗಳು, ಭಾವಿಗಳು ಮತ್ತು ಇತರೆ ಸ್ಮಾರಕಗಳು ರಕ್ಷಿತ ಸ್ಮಾರಕಗಳಾಗಿ ಘೋಷಣೆಯಾಗಲಿವೆ. ಒಂದೇ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ರಕ್ಷಿತ ಸ್ಮಾರಕಗಳು ಇರುವುದೆಂದರೆ ಅದು ಐತಿಹಾಸಿಕ ಲಕ್ಕುಂಡಿಗೆ ಮಾತ್ರ ಸಲ್ಲುವ ಗೌರವ ಎಂದು ಸಚಿವ ಪಾಟೀಲ ಅಭಿಪ್ರಾಯಪಟ್ಟರು.


