Menu

ರಿಯಲ್ ಎಸ್ಟೇಟ್ ಕಚೇರಿಗಳಂತಾದ ಪೊಲೀಸ್ ಇಲಾಖೆ: ಅಶ್ವತ್ಥ ನಾರಾಯಣ್ ಟೀಕೆ

ashwath narayana

ಬೆಂಗಳೂರು: ರಾಜ್ಯದಲ್ಲಿ ಗೃಹ ಇಲಾಖೆ ಒಂದು ರೀತಿ ಸತ್ತಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಟೀಕಿಸಿದ್ದಾರೆ. ಇವತ್ತು ಪೊಲೀಸ್ ಇಲಾಖೆಯು ರಿಯಲ್ ಎಸ್ಟೇಟ್‍ನ ಕಚೇರಿಯಂತಾಗಿದೆ ಎಂದು ದೂರಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವರಿಗೆ ತಮ್ಮ ಜವಾಬ್ದಾರಿ ಏನೆಂದೇ ಅರ್ಥ ಆಗಿಲ್ಲ. ಕೇವಲ ಝೀರೊ ಟ್ರಾಫಿಕ್‍ನಲ್ಲಿ ಓಡಾಡುವುದೇ ಗೃಹ ಸಚಿವರ ಜವಾಬ್ದಾರಿ ಅಂದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ಉನ್ನತ ಅಧಿಕಾರಿ ಕಚೇರಿಯಲ್ಲಿ ಯೂನಿಫಾರ್ಮ್‍ನಲ್ಲಿ ಮಹಿಳೆ ಜೊತೆ ಚಕ್ಕಂದ ಆಡುವ ಮಟ್ಟಕ್ಕೆ ಪೊಲೀಸ್ ಇಲಾಖೆ ಬಂದು ನಿಂತಿದೆ ಎಂದರೆ, ಗೃಹ ಸಚಿವರು ತಮ್ಮ ಹಿಡಿತ ಇಟ್ಟುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಅಧಿಕಾರಿಗಳಿಗೆ ಜವಾಬ್ದಾರಿಯೇ ಇಲ್ಲವಾಗಿದೆ. ಈ ಸರಕಾರವೇ ಸಿ.ಡಿ. ಮಾಡುವ ಸರಕಾರವಾಗಿದೆ ಎಂದು ದೂರಿದರು.

ಒಬ್ಬರ ಮೇಲೆ ಇನ್ನೊಬ್ಬರು ಸಿ.ಡಿ. ಮಾಡುವುದು, ಸಿ.ಡಿ. ಬಿಡುಗಡೆ ಮಾಡುವುದು, ಸಿ.ಡಿ. ಇದೆ ಎಂದು ಹೆದರಿಸುವುದು, ಮಂತ್ರಿಗಳ ರಾಜೀನಾಮೆ ಪಡೆಯುವುದು, ಅಧಿಕಾರಿ ವಿರುದ್ಧ ಮಹಿಳೆ ಮೂಲಕ ಸಿ.ಡಿ. ಮಾಡಿಸಿ ರಿಲೀಸ್ ಮಾಡಿಸುವುದು ನಡೆದಿದೆ. ಈ ಸರಕಾರದ ಜವಾಬ್ದಾರಿ ಏನೆಂದೇ ಅರ್ಥ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸೇರಿ ಎಲ್ಲರೂ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಇದರಿಂದ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ವೈಫಲ್ಯಗಳು ಎದ್ದು ಕಾಣುತ್ತಿದೆ. ಸ್ವತಃ ಮುಖ್ಯಮಂತ್ರಿಗಳ ಮೇಲೆ ಮುಡಾ ಹಗರಣದ ಕಾರಣಕ್ಕೆ ತನಿಖೆ ನಡೆದಿದೆ. ಅಬಕಾರಿ ಇಲಾಖೆ ಮೂಲಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದರು. ರಾಜಣ್ಣನವರ ರಾಜೀನಾಮೆ ತೆಗೆದುಕೊಳ್ಳಲು ಸಿ.ಡಿ. ಭಯ ಹುಟ್ಟಿಸಿದ್ದರು ಎಂದು ಆರೋಪಿಸಿದರು.

ಕೇಂದ್ರದಿಂದ ಬರುವ ಕಾಂಗ್ರೆಸ್ ವರಿಷ್ಠರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಸಚಿವರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸಿದರು. ಗೃಹ ಸಚಿವರಿಗೆ ತಮ್ಮ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ ಎಂದ ಅವರು, ತಕ್ಷಣವೇ ಕೇಂದ್ರದ ವರಿಷ್ಠರು ಆ ಸ್ಥಾನದಿಂದ ಅವರನ್ನು ತೆಗೆಯಬೇಕೆಂದು ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *