ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನನ್ನ ಹೊಸ ಬಾಸ್ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಮಂಗಳವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ ಪ್ರಧಾನಿ, ಮಿಲೆನಿಯಲ್ ಜನರೇಷನ್ ಗೆ ಸೇರಿದ ನಿತಿನ್ ಪಕ್ಷದ ಪರಂಪರೆಯನ್ನು ಮುಂದುವರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಹೊಸಬರಿಗೆ ವೇದಿಕೆ ಒದಗಿಸುತ್ತದೆ. ಬಿಜೆಪಿ ಅಧ್ಯಕ್ಷರ ಜವಾಬ್ದಾರಿ ಕೇವಲ ಪಕ್ಷಕ್ಕೆ ಸೀಮಿತವಾಗಿಲ್ಲ. ಎನ್ಡಿಎ ಒಕ್ಕೂಟದಲ್ಲಿ ಸಮನ್ವಯ ಸಾಧಿಸುವುದೂ ಅವರ ಕರ್ತವ್ಯ. ಪಕ್ಷದ ವಿಚಾರ ಬಂದರೆ ನಿತಿನ್ ನವೀನ್ ಅವರೇ ಬಾಸ್. ನಾನು ಪಕ್ಷದ ಕಾರ್ಯಕರ್ತ. ನವೀನ್ ಅವರಿಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೊಗಳಿದರು.
ಮಿಲೆನಿಯಲ್ ಜನರೇಷನ್ ನ ನಿತಿನ್
ಇಂದಿನ ಯುವಕರ ಭಾಷೆಯಲ್ಲಿ ಹೇಳುವುದಾದರೆ ನಿತಿನ್ ಜಿ ಮಿಲೆನಿಯಲ್ ಜನರೇಷನ್ನವರು. ಅವರು ಭಾರತದಲ್ಲಿನ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆಗಳನ್ನ ಕಂಡ ಪೀಳಿಗೆಯವರು. ಬಾಲ್ಯದಲ್ಲಿ ರೇಡಿಯೊದಲ್ಲಿ ಮಾಹಿತಿ ಕೇಳಿ, ಈಗ ಎಐ ಬಳಸುವ ತಂತ್ರಜ್ಞಾನಕ್ಕೆ ಒಗ್ಗಿಕೊಂಡವರು. ನಿತಿನ್ ಜಿ ಅವರಲ್ಲಿ ಯುವಕರ ಉತ್ಸಾಹ ಮತ್ತು ಸಂಘಟನಾತ್ಮಕ ಕೆಲಸದ ಅನುಭವ ಎರಡೂ ಇದೆ. ಇದು ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಬಹಳ ಪ್ರಯೋಜನಕಾರಿ ಎಂದು ಮೋದಿ ಬಣ್ಣಿಸಿದರು.
`ಮೆಂಬರ್ಶಿಪ್’ಗಿಂತ `ರಿಲೇಷನ್ಶಿಪ್’ ಮುಖ್ಯ
ಬಿಜೆಪಿ ಒಂದು ಸಂಸ್ಕೃತಿ, ಒಂದೇ ಕುಟುಂಬ. ಇಲ್ಲಿ, ನಾವು `ಮೆಂಬರ್ಶಿಪ್’ಗಿಂತ `ರಿಲೇಷನ್ಶಿಪ್’ ಮಹತ್ವ ಹೊಂದಿದ್ದೇವೆ. ಬಿಜೆಪಿ ಒಂದು ಸಂಪ್ರದಾಯವಾಗಿದ್ದು, ಇದು ಸ್ಥಾನದಿಂದಲ್ಲ, ಪ್ರಕ್ರಿಯೆಯಿಂದ ನಡೆಯುತ್ತದೆ. ನಮ್ಮ ಅಧ್ಯಕ್ಷರು ಬದಲಾಗುತ್ತಾರೆ, ಆದರೆ ನಮ್ಮ ಆದರ್ಶಗಳು ಬದಲಾಗುವುದಿಲ್ಲ. ನಾಯಕತ್ವ ಬದಲಾಗುತ್ತದೆ, ಆದರೆ ದಿಕ್ಕು ಒಂದೇ ಇರುತ್ತದೆ. ಬಿಜೆಪಿಯ ಆತ್ಮ ರಾಷ್ಟ್ರೀಯವಾದುದು, ಏಕೆಂದರೆ ನಮ್ಮ ಸಂಪರ್ಕ ಸ್ಥಳೀಯವಾಗಿದೆ. ನಮ್ಮ ಬೇರುಗಳು ಮಣ್ಣಿನಲ್ಲಿ ಆಳವಾಗಿವೆ ಎಂದು ಮೋದಿ ಹೇಳಿದರು.


