ಅಧಿಕಾರ ಯಾರಿಗೂ ಸುಲಭವಾಗಿ ಬರುವುದಿಲ್ಲ. ನಮ್ಮ ಅಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗುತ್ತಾರೆ. ಯಾವುದೂ ಶಾಶ್ವತವಲ್ಲ. ಈ ಮೊದಲು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಎಂದು ಬಮೂಲ್ ಅಧ್ಯಕ್ಷರಾದ ಡಿಕೆ ಸುರೇಶ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಎಷ್ಟು ದಿನ ತಾಳ್ಮೆಯಿಂದ ಇರಬೇಕು ಎಂಬ ಪ್ರಶ್ನೆ ಶಿವಕುಮಾರ್ ಅವರ ಬೆಂಬಲಿಗ ಶಾಸಕರಲ್ಲಿದೆ ಎಂದು ಕೇಳಿದಾಗ ಅವರು, ರಾಜಕಾರಣದಲ್ಲಿ ಇದ್ದ ಮೇಲೆ, ಯಾವುದೂ ಶಾಶ್ವತವಲ್ಲ. ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ ಎಂದರು.
ಅಧಿಕಾರ ಹಂಚಿಕೆ ವಿಚಾರವಾಗಿ ನೀವು ಎರಡು ವರ್ಷದಿಂದ ಕಾಯುತ್ತಿದ್ದೀರಿ ಎಂದಾಗ, “ಭಗವಂತನ ಇಚ್ಛೆ, ಏನೇನು ತೀರ್ಮಾನವಾಗುತ್ತದೋ ಕಾದು ನೋಡೋಣ, ಎಲ್ಲದಕ್ಕೂ ಅಂತ್ಯ ಇದ್ದೇ ಇರುತ್ತದೆ” ಎಂದು ಉತ್ತರಿಸಿದರು. ಪಕ್ಷ ತಾಳ್ಮೆಯಿಂದ ಇರಲು ಹೇಳಿದೆ. ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಭೇಟಿ ಮಾಡಿದಾಗ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಶಿವಕುಮಾರ್ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಎಲ್ಲರನ್ನು ಒಟ್ಟಾಗಿ ತೆಗೆದು ಕೊಂಡು ಹೋಗಬೇಕು ಎಂಬ ಗುರಿಯೊಂದಿಗೆ ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದಾರೆ” ಎಂದು ಉತ್ತರಿಸಿದರು.
ನಮ್ಮ ಅಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗುತ್ತಾರೆ. ಈ ಮೊದಲು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವಂಥದ್ದಲ್ಲ. ನಮ್ಮ ಗುರಿ 2028 ರ ಚುನಾವಣೆ. ಈ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕು. ಈ ದೃಷ್ಟಿಯಿಂದ ಶಾಸಕರು, ಕಾರ್ಯಕರ್ತರ ಹಿತದೃಷ್ಟಿಯಿಂದ ತಾಳ್ಮೆಯಿಂದಲೇ ಇರಬೇಕಾಗುತ್ತದೆ, ಅವರು ಪಕ್ಷದ ಅಧ್ಯಕ್ಷರಾಗಿದ್ದು, ಮೊದಲು ಅವರಲ್ಲಿ ಶಿಸ್ತು ಕಾಣಬೇಕು. ಹಾಗಾಗಿ ಅವರು ಶಿಸ್ತು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
ನಾಯಕತ್ವ ಬದಲಾವಣೆಯಾದರೆ ಒಂದು ವರ್ಗದ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲ್ಲ ಎಂದು ಬಿಂಬಿಸುತ್ತಿರುವ ಬಗ್ಗೆ ಕೇಳಿದಾಗ, “ಆ ವರ್ಗ, ಈ ವರ್ಗ ಎಂಬುದಿಲ್ಲ. ಎಲ್ಲಾ ವರ್ಗದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೇಕು. ರಾಜಕಾರಣಿಗೆ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರ ಮತಗಳು ಬೇಕು. ಕೇವಲ ಒಬ್ಬರನ್ನು ಓಲೈಸಿಕೊಳ್ಳುವುದಲ್ಲ. ಎಲ್ಲರ ಮತಗಳು ಮುಖ್ಯವಾಗುತ್ತದೆ. ಜಾತಿ ಮೇಲೆ ನಡೆಯುವ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ಕುಂಠಿತ ಮಾಡಲಿದೆ. ಡಿಕೆ ಶಿವಕುಮಾರ್ ಅವರು ಮೊದಲಿನಿಂದ ಪಕ್ಷ ಅಧಿಕಾರದಲ್ಲಿ ಇದ್ದಾಗ, ಇಲ್ಲದಿದ್ದಾಗ ಎಲ್ಲಾ ತರಹದ ನೋವು, ಕಷ್ಟಗಳನ್ನು ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.
ಪಂಚಾಯಿತಿ ಚೇರ್ಮನ್ ಗಳೇ ತಮ್ಮ ಸ್ಥಾನ ಬಿಡಲು ಬಯಸುವುದಿಲ್ಲ. ಮದುವೆಯಾಗಲಿ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳುತ್ತೇನೆ, ಮಾರ್ಚ್ ಅಂತ್ಯ ಮುಗಿಯಲಿ – ಎಂದೆಲ್ಲಾ ನೆಪ ಹೇಳಿ ಮುಂದಕ್ಕೆ ಹಾಕುತ್ತಾರೆ. ಅಧ್ಯಕ್ಷ ಸ್ಥಾನ ಕೊಡುವಾಗ ನನಗೆ ಮೂರು ದಿನ ಅಧಿಕಾರ ಸಾಕು, ಮಾಜಿ ಎಂದು ಕರೆಸಿಕೊಳ್ಳುತ್ತೇನೆ ಸಾಕು ಎನ್ನುತ್ತಾರೆ. ಈ ರೀತಿ ಇದ್ದಾಗ ಏನು ಮಾಡಲು ಆಗುತ್ತೆ. ರಾಜಕಾರಣದಲ್ಲಿ ನಂಬಿಕೆ ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.
ಮಾರ್ಚ್ ಅಂತ್ಯಕ್ಕೆ ಆಗಬಹುದೇ ಎಂದು ಕೇಳಿದಾಗ, “ನಾನು ಸಿಎಂ ವಿಚಾರವಾಗಿ ಹೇಳಿಲ್ಲ, ಹಳ್ಳಿಗಳಲ್ಲಿ ಹೇಳುವ ನೆಪವನ್ನು ಹೇಳಿದ್ದೇನೆ. ನಾನು ಅಧಿಕಾರ ಹಂಚಿಕೆ ವಿಚಾರವಾಗಿ ಈ ಮಾತು ಹೇಳಿಲ್ಲ. ನೀವುಗಳೇ ಇದನ್ನು ಹೇಳುತ್ತಿದ್ದೀರಿ. ನಮ್ಮ ಊರಿನಲ್ಲಿ ನಡೆಯುವ ಪ್ರಕ್ರಿಯೆ ಬಗ್ಗೆ ಹೇಳಿದೆ ಅಷ್ಟೇ. ಮಾತು ಕೊಟ್ಟಿದ್ದೀರಿ ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ” ಎಂದು ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ಅವರ ಶಿಸ್ತು, ಅನಿವಾರ್ಯತೆ ರಾಹುಲ್ ಗಾಂಧಿ ಅವರಿಗೆ ಮನವರಿಕೆಯಾಗಿದೆಯೇ ಎಂದು ಕೇಳಿದಾಗ, “ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರು, ಎಲ್ಲಾ ದೃಷ್ಟಿಕೋನದಲ್ಲಿ ಅವರು ಚಿಂತನೆ ಮಾಡುತ್ತಾರೆ. ದೇಶದ ರಾಜಕೀಯ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಮಾಡುತ್ತಾರೆ. ನಾನು ಕೇವಲ ಶಿವಕುಮಾರ್ ಅವರ ದೃಷ್ಟಿಕೋನದಲ್ಲಿ ನೋಡಬಹುದು, ನೀವು (ವರದಿಗಾರರು) ನಿಮ್ಮ ವಾಹಿನಿ ದೃಷ್ಟಿಯಿಂದ ನೋಡುತ್ತೀರಿ, ಮತ್ತೊಬ್ಬರು ಅವರ ದೃಷ್ಟಿಯಲ್ಲಿ ನೋಡುತ್ತಾರೆ. ಆದರೆ ರಾಹುಲ್ ಗಾಂಧಿ ದೇಶದ ಎಲ್ಲಾ ಬೆಳವಣಿಗೆಗಳ ದೃಷ್ಟಿಯಿಂದ ನೋಡಬೇಕಾಗುತ್ತದೆ ಎಂದು ತಿಳಿಸಿದರು.
ಜಿಬಿಎ ಪಾಲಿಕೆ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ತೀರ್ಮಾನಿಸಿರುವ ಬಗ್ಗೆ ಕೇಳಿದಾಗ, “ಅದು ಅವಶ್ಯಕತೆ ಇಲ್ಲ ಎಂದು ಅನಿಸುತ್ತದೆ. ರಾಜ್ಯ ಚುನಾವಣಾ ಆಯೋಗ ಈ ಚುನಾವಣೆ ನಡೆಸುತ್ತಿರುವುದರಿಂದ ಇದನ್ನು ತಿರುಚಲು ಆಗುವುದಿಲ್ಲ. ಇವಿಎಂ ಬಳಕೆ ಬೇರೆ ವಿಚಾರ. ನಾವು ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ” ಎಂದು ಉತ್ತರಿಸಿದರು.
ಡಿಜಿಪಿ ರಾಮಚಂದ್ರ ರಾವ್ ಅವರ ಪ್ರಕರಣದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಸಿಎಂ ಹಾಗೂ ಗೃಹ ಸಚಿವರನ್ನು ಕೇಳಿ. ಅವರು ಈಗಾಗಲೇ ತೀರ್ಮಾನ ಕೈಗೊಂಡಿರಬೇಕು. ಇದು ಶಿಸ್ತಿನ ವಿಚಾರ. ಶಿಸ್ತು ಹಾಗೂ ಕರ್ನಾಟಕ ಪೊಲೀಸ್ ಘನತೆ ಬಹಳ ಮುಖ್ಯ. ಇದನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ” ಎಂದರು.
ಬಜೆಟ್ ಮುಗಿದ ಬಳಿಕ ಅಧಿಕಾರ ಹಂಚಿಕೆ ಆಗುತ್ತದೆಯೇ ಎಂದು ಕೇಳಿದಾಗ, “ಅದಕ್ಕೆ ಇನ್ನು ಸಮಯವಿದೆಯಲ್ಲಾ ಮಾತಡೋಣ ಬಿಡಿ. ಕ್ಷಣ ಕ್ಷಣದ ಮಾಹಿತಿಗೆ ಕಾಯಿರಿ” ಎಂದು ಚಟಾಕಿ ಹಾರಿಸಿದರು.
ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ ಎಂದಾಗ, “ನಾನು ಸ್ವಾಗತ ಮಾಡುತ್ತೇನೆ. ಅವರು ಸರ್ವ ಸ್ವತಂತ್ರರು. ಅವರ ಪಕ್ಷಕ್ಕೆ ಅವರೇ ಅಧಿಪತಿ ಎಂದು ಹೇಳಿದರು. ಇದು ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, “ಕಾಂಗ್ರೆಸ್ ಗೂ ಜೆಡಿಎಸ್ ಗೂ ಸಂಬಂಧವಿಲ್ಲ. ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಎರಡೂಕಾಲು ವರ್ಷವಿದೆ” ಎಂದರು.
ಸಿಎಂ ಬಜೆಟ್ ತಯಾರಿ ನಡೆಸುತ್ತಿದ್ದಾರೆ ಎಂದು ಕೇಳಿದಾಗ, “ರಾಜ್ಯಕ್ಕೆ ಬಜೆಟ್ ಕೊಡಲೇಬೇಕಲ್ಲವೇ? ಈಗ ಅವರಿಗೆ ಅತಿ ಹೆಚ್ಚು ಬಜೆಟ್ ನೀಡಿರುವ ಕೀರ್ತಿ ಇದೆ. ಈಗ ಅದಕ್ಕೆ ಮತ್ತೊಂದು ಗರಿ” ಎಂದು ಉತ್ತರಿಸಿದರು.


