ವಿಜಯನಗರದ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಜ.20 ರಿಂದ ಜ. 30ರವರೆಗೆ ಪ್ರತಿ ದಿನ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 500 ಕ್ಯೂಸೆಕ್ ನಂತೆ ಒಟ್ಟು 0.50 ಟಿ.ಎಂ.ಸಿ ನೀರನ್ನು ಹರಿಸಲಾಗುವುದು.
ಈ ಅವಧಿಯಲ್ಲಿ ಸಾರ್ವಜನಿಕರು ಮತ್ತು ರೈತರು ನದಿಯಲ್ಲಿ ತಿರುಗಾಡುವುದು, ದನ ಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ, ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವಕ್ಕೆ ಬರುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ನೀರಿನ ವ್ಯವಸ್ಥೆಯನ್ನು ವಿಜಯನಗರ ಜಿಲ್ಲಾಡಳಿತ ಮಾಡುತ್ತದೆ. ತುಂಗಭದ್ರಾ ನದಿಯಿಂದ ನೀರು ಹರಿಸಿ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ಜಾತ್ರೆ ಸಂದರ್ಭದಲ್ಲಿ ತುಂಗಭದ್ರಾ ನದಿಗೆ ನೀರು ಹರಿಸಲು ಜಲಸಂಪನ್ಮೂಲ ಇಲಾಖೆಗೆ ಮನವಿ ಸಲ್ಲಿಸಲಾಗುತ್ತದೆ, ಜಿಲ್ಲಾಡಳಿತವು ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳು ಮತ್ತು ನೈರ್ಮಲ್ಯಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ವ್ಯವಸ್ಥೆ ಮಾಡುತ್ತದೆ. 20 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿರುವ ಕಾರಣ, ಪ್ರತಿ ವರ್ಷವೂ ಹೆಚ್ಚಿನ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ.


