ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಸಚಿವರಾಗಿರುವ ಜೆ.ಪಿ ನಡ್ಡಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಅವಧಿ ಪೂರ್ಣಗೊಳಿಸಿದ ಬಳಿಕ ನಡೆದ ಚುನಾವಣೆಯಲ್ಲಿ ನಿತಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖ ನಬಿನ್ ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. 1980ರಲ್ಲಿ ಸ್ಥಾಪನೆಯಾದ ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ 45 ನಬಿನ್ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿಜೆಪಿ ಸಾಂಸ್ಥಿಕ ಚುನಾವಣೆಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ನಬಿನ್ ಅವರ ಆಯ್ಕೆ ಘೋಷಿಸಿ, ಪ್ರಮಾಣಪತ್ರ ನೀಡಿದರು. ಈ ಮೊದಲು ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿದ್ದರು. ಬಿಹಾರ ಸರ್ಕಾರದಲ್ಲಿ ಕಾನೂನು ಮತ್ತು ನ್ಯಾಯ, ವಸತಿ ಖಾತೆ ಸಚಿವರೂ ಆಗಿ ಕಾರ್ಯ ನಿರ್ವಹಿಸಿದ್ದರು. ಬಿಹಾರ ಬಿಜೆಪಿಯ ಹಿರಿಯ ನಾಯಕ ಪಾಟ್ನಾದಿಂದ 4 ಬಾರಿ ಎಂಎಲ್‌ಎ ಆಗಿದ್ದ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿಂಹ ಅವರ ಮಗನಾಗಿರುವ ನಿತಿನ್, ಪಕ್ಷದ ಸಂಘಟನಾ ಚತುರ ಎಂದೇ ಗುರುತಿಸಲಾಗಿದೆ.
ನಿತಿನ್ ನಬಿನ್ ಬಿಹಾರದ ಕಾಯಸ್ಥ ಸಮುದಾಯದಿಂದ ಬಂದಿದ್ದಾರೆ. ಬಿಹಾರದಲ್ಲಿ ಕಾಯಸ್ಥ ಮೇಲ್ವರ್ಗದ ಜಾತಿ ಎಂದು ಪರಿಗಣಿಸಿದರೂ ಇತರ ಜಾತಿಗಳ ಜೊತೆ ಸಂಘರ್ಷದಲ್ಲಿ ಇಲ್ಲ. ಛತ್ತೀಸ್‌ಗಢದ ಉಸ್ತುವಾರಿಯಾಗಿದ್ದ ನಬಿನ್ ಅಲ್ಲಿ ಪಕ್ಷವನ್ನು ಆಡಳಿತಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರ ಕೆಲಸವನ್ನು ಗುರುತಿಸಿದ ಬಳಿಕ ಇವರಿಗೆ ದೆಹಲಿ ಚುನಾವಣೆಯ ಪ್ರಚಾರದಲ್ಲಿ ಪ್ರಮುಖ ಪಾತ್ರ ನೀಡಲಾಗಿತ್ತು.


