Menu

ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ತನಿಖಾ ಸಂಸ್ಥೆಗಳಿಂದ ವಿರೋಧ ಪಕ್ಷಗಳ ನಾಯಕರ ಬೇಟೆ

ಕಾಂಗ್ರೆಸ್ ಮತ್ತು ಮಿತ್ರಕೂಟ ಮತ್ತು ಪ್ರಾದೇಶಿಕ ಪಕ್ಷಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸುವ ಅಜೆಂಡಾ ಬಿಜೆಪಿ ಹೊಂದಿರುವುದು ಹೊಸದೇನಲ್ಲ. ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳಿಂದಲೂ ದೇಶದಿಂದ ಕಾಂಗ್ರೆಸ್ ಅನ್ನು ಸಂಪೂರ್ಣ ವಾಗಿ ಹೊರದೂಡುತ್ತೇವೆ ಮತ್ತು ಈ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಬಹಿರಂಗವಾಗಿ ಹೇಳುತ್ತಿರುವುದು ಗಮನಾರ್ಹ. ಆದರೆ ಮೋದಿ ಅವರ ಆಶಯವು ನೆರವೇರುವುದು ಕಷ್ಟ.

ದೇಶದ ಕೆಲ ಪ್ರಮುಖ ರಾಜ್ಯಗಳ ಚುನಾವಣೆ ಸಮೀಪಿಸಿವೆ. ಅಗ್ರ ರಾಜಕೀಯ ಪಕ್ಷಗಳ ಚಟುವಟಿಕೆಗಳೂ ಶುರುವಾಗಿವೆ. ಅಸ್ಸಾಂ, ತಮಿಳುನಾಡು ಹಾಗೂ ಪ. ಬಂಗಾಳದಲ್ಲಿ ಚುನಾವಣೆಗಳಿಗೆ ಪೂರಕ ಎಂಬ ರೀತಿಯಲ್ಲಿ ಗಂಭೀರ ಪ್ರಕರಣಗಳೂ ಶುರುವಾಗಿವೆ. ಈ ನಡುವೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕೂಡಾ ಚುರುಕಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಷಾ ಅವರ ಬಿರುಸಿನ ಪ್ರಚಾರಗಳೂ ಈಗ ಅಸ್ಸಾಂ ಮತ್ತು ಪ. ಬಂಗಾಳದಲ್ಲಿ ವ್ಯಾಪಕವಾಗಿವೆ.

ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಚುನಾವಣೆಗಳ ಹೊಸ್ತಿಲಿನಲ್ಲಿ ಇಡಿ ಮತ್ತು ಐಟಿ ಇಲಾಖೆಗಳು ಪಾದರಸದಂತೆ ಕೆಲಸ ಮಾಡುವುದು ಗಮನಾರ್ಹ. ಐದು ವರ್ಷಗಳ ಹಿಂದೆ ದಿಲ್ಲಿ ರಾಜ್ಯದ ಹಿಂದಿನ ಸರ್ಕಾರದ ಪ್ರಮುಖರಾದ ಅರವಿಂದ್ ಕೇಜ್ರೀವಾಲ್, ಮನೀಷ್ ಸಿಸೋಡಿಯಾ ಅವರ ವಿಚಾರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಒಂದರ್ಥದಲ್ಲಿ ಕೇಂದ್ರ ಸರ್ಕಾರದ ಸೂತ್ರದ ಗೊಂಬೆಗಳಂತೆ ಕಾರ್ಯ ನಿರ್ವಹಿಸಿದ್ದನ್ನು ಅಲ್ಲಗೆಳೆಯಲಾಗದು. ಈ ದಿಶೆಯಲ್ಲಿ ಪ. ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣ ಮೂಲ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಈ ತನಿಖಾಸಂಸ್ಥೆಗಳು ರಣಹದ್ದುಗಳಂತೆ ಬೇಟೆಯಾಡುವುದನ್ನು ಕಂಡಾಗ, ಇದು ಮುಂದಿನ ಅಸೆಂಬ್ಲಿ ಚುನಾವಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲಾಗದು.

ಒಟ್ಟಿನಲ್ಲಿ ದೇಶದ ರಾಜಕೀಯ ಪಾಳೆಯದಲ್ಲಿ ಇಂತಹ ಹಲವಾರು ಹಾವು ಏಣಿಯಾಟಗಳು ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತವೆ. ಕಾಂಗ್ರೆಸ್ ಮತ್ತು ಮಿತ್ರಕೂಟ ಮತ್ತು ಪ್ರಾದೇಶಿಕ ಪಕ್ಷಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸುವ ಅಜೆಂಡಾ ಬಿಜೆಪಿ ಹೊಂದಿರುವುದು ಹೊಸದೇನಲ್ಲ. ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳಿಂದಲೂ ದೇಶದಿಂದ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಹೊರದೂಡುತ್ತೇವೆ ಮತ್ತು ಈ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಬಹಿರಂಗವಾಗಿ ಹೇಳುತ್ತಿರುವುದು ಗಮನಾರ್ಹ. ಆದರೆ ಮೋದಿ ಅವರ ಆಶಯವು ನೆರವೇರುವುದು ಕಷ್ಟ. ಇದೇ ವೇಳೆ ದೇಶದಲ್ಲಿ ಬಿಜೆಪಿ ಮಾತ್ರವೇ ಅಸ್ತಿತ್ವದಲ್ಲಿರಬೇಕೆಂಬ ಪರಮಾಶಯವು ಒಂದು ರೀತಿಯಲ್ಲಿ ವಿರೋಧ ಪಕ್ಷಗಳನ್ನು ಮೂಲೆಗುಂಪು ಮಾಡುತ್ತಿದೆ.

ವಿರೋಧ ಪಕ್ಷಗಳೇ ಇಲ್ಲದಿದ್ದಲ್ಲಿ ಆಡಳಿತ ಪಕ್ಷವು ಸರಿಯಾದ ದಿಕ್ಕಿನಲ್ಲಿ ಆಡಳಿತ ನಡೆಸಲಾಗದು. ಸರ್ಕಾರದ ತಪ್ಪುಗಳನ್ನು ಬೊಟ್ಟು ಮಾಡಿ ತೋರುವುದು ವಿಪಕ್ಷಗಳ ಕೆಲಸ. ಪ್ರಜಾತಂತ್ರಕ್ಕೆ ಮತ್ತು ಅದರ ಸುಗಮ ಕಾರ್ಯ ನಿರ್ವಹಣೆಗೆ ಆಡಳಿತ ಹಾಗೂ ವಿಪಕ್ಷಗಳೆರಡೂ ಅತಿ ಮುಖ್ಯ. ಒಟ್ಟಿನಲ್ಲಿ ದೇಶದ ರಾಜಕಾರಣದಲ್ಲಿ ಇಂದು ಹೇಗಾದರೂ ಸರಿ ಚುನಾವಣೆಗಳಲ್ಲಿ ತಾವು ಮತ್ತು ತಮ್ಮ ಪಕ್ಷ ಗೆದ್ದು ಬರೋದೆ ಮುಖ್ಯ. ಇದಕ್ಕಾಗಿ ಕೋಟಿಗಟ್ಟಳೆ ಹಣ ಚೆಲ್ಲುವ ಪ್ರವೃತ್ತಿ ಪಕ್ಷಗಳ ನಾಯಕರದ್ದು. ಜನಾಭಿಪ್ರಾಯ ಸಂಗ್ರಹಕ್ಕೂ ಈಗ ಕೆಲ ರಾಜಕೀಯ ಪಕ್ಷಗಳು ಕೋಟಿಗಟ್ಟಳೆ ಹಣ ಖರ್ಚು ಮಾಡಿರುವುದು ಒಂದು ದುರಂತ. ಅದು ಹೇಗಾದರೂ ಸರಿ. ಚುನಾವಣೆಯಲ್ಲಿ ಗೆಲ್ಲಬೇಕೆಂಬ ದಿಗ್ಗಜರ ಫರ್ಮಾನು, ಪಕ್ಷದ ಕಟ್ಟಾ ಮತ್ತು ನಿಷ್ಠಾವಂತರ ಪಾಲಿಗೆ ಉರುಳಾಗಿ ಪರಿಣಮಿಸಿದೆ.

Related Posts

Leave a Reply

Your email address will not be published. Required fields are marked *