ಬಾಹ್ಯಾಕಾಶ ಸಂಶೋಧನೆ ಎಂದರೆ ಅದು ತುಂಬಾ ಕಷ್ಟದ, ತಾಳ್ಮೆ ಬೇಕಾದ ಕ್ಷೇತ್ರ. ಒಂದು ಚಿಕ್ಕ ಲೆಕ್ಕಾಚಾರದ ತಪ್ಪು, ಒಂದು ಸಾಪ್ಟ್‌ವೇರ್ ಬಗ್, ಅಥವಾ ಒಂದು ಚಿಕ್ಕ ಯಾಂತ್ರಿಕ ದೋಷ- ಇವು ಇಡೀ ಯೋಜನೆಯನ್ನೇ ಬುಡಮೇಲು ಮಾಡಬಹುದು.
ಯಾರಾದರೂ ಒಂದು ದೇಶದ ನಿಜವಾದ ಬೆಳವಣಿಗೆ ಏನು ಎಂದು ಕೇಳಿದರೆ, ಬಹುತೇಕರು ಜಿಡಿಪಿ, ಆರ್ಥಿಕತೆ, ಉದ್ಯೋಗಗಳು ಎಂದು ಹೇಳುತ್ತಾರೆ. ಆದರೆ ಕೆಲವರಷ್ಟೇ ದೇಶದ ನಿಜವಾದ ಅಭ್ಯುದಯವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅದು ಎಷ್ಟರಮಟ್ಟಿಗೆ ಸ್ವಾವಲಂಬಿಯಾಗಿದೆ ಎಂಬುದರ ಮೇಲೆ ಅಳೆಯುತ್ತಾರೆ.
ಈ ಕ್ಷೇತ್ರದಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ ಇಸ್ರೋ ಒಂದು ದೊಡ್ಡ ಗರ್ವದ ಸಂಸ್ಥೆ. ಆಕಾಶದ ಅನಂತತೆಯನ್ನು ಅನ್ವೇಷಿಸುವ ಹಾದಿಯಲ್ಲಿ ಇಸ್ರೋ ಇಂದು ಜಗತ್ತೇ ಬೆರಗಾಗುವಂತಹ ಸಾಧನೆಗಳನ್ನು ಮಾಡಿದೆ. ಆದರೆ, ಈ ಯಶಸ್ಸಿನ ಶಿಖರವನ್ನು ಏರುವ ಮೊದಲು ಇಸ್ರೋ ಹತ್ತಾರು ಬಾರಿ ಎಡವಿದೆ, ಸೋತಿದೆ ಮತ್ತು ವಿಮರ್ಶೆಗಳಿಗೆ ಗುರಿಯಾಗಿದೆ. “ವೈಫಲ್ಯಗಳು ವಿಕಾಸದ ಭಾಗ” ಎಂಬ ಮಾತು ಇಸ್ರೋ ಪಾಲಿಗೆ ಕೇವಲ ಘೋಷಣೆಯಲ್ಲ, ಅದು ಅದರ ಅಸ್ತಿತ್ವದ ಸಾರವಾಗಿದೆ.
ಬಾಹ್ಯಾಕಾಶ ಸಂಶೋಧನೆ ಎಂದರೆ ಅದು ತುಂಬಾ ಕಷ್ಟದ, ತಾಳ್ಮೆ ಬೇಕಾದ ಕ್ಷೇತ್ರ. ಒಂದು ಚಿಕ್ಕ ಲೆಕ್ಕಾಚಾರದ ತಪ್ಪು, ಒಂದು ಸಣ್ಣ ಸಾಫ್ಟ್ವೇರ್ ಬಗ್, ಅಥವಾ ಒಂದು ಚಿಕ್ಕ ಯಾಂತ್ರಿಕ ದೋಷ- ಇವುಗಳಿಂದಲೇ ಇಡೀ ಯೋಜನೆ ಧೂಳೀಪಟ ಆಗಬಹುದು. ೧೯೭೯ ಆಗಸ್ಟ್ ೧೦ರಂದು ಮೊದಲ ಇಸ್ರೋ ಸ್ಯಾಟಲೈಟ್ ಲಾಂಚ್ ವೆಹಿಕಲ್ ಉಡಾಯಿಸಿದಾಗ ಕೇವಲ ಕೆಲವೇ ನಿಮಿಷಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಬಿದ್ದುಹೋಯಿತು.
ಆಗ ತಂಡದಲ್ಲಿ ಇದ್ದವರೆಲ್ಲರ ಮುಖದಲ್ಲಿ ನಿರಾಸೆಯ ಗೆರೆಗಳು ಕಾಣಿಸಿಕೊಂಡವು. ಆದರೆ ಆ ಸಮಯದಲ್ಲಿ ಇಸ್ರೋ ಅಧ್ಯಕ್ಷರಾಗಿದ್ದ ಸತೀಶ್ ಧವನ್ ಮುಖ ಭೂಮಿ ನೋಡಲಿಲ್ಲ. ಬದಲಿಗೆ ಅನಂತ ಆಗಸವನ್ನು, ಅದು ನೀಡುವ ಅವಕಾಶವನ್ನು ನೋಡಿತು.
“ನಾನು ವೈಫಲ್ಯದ ಹೊಣೆ ಹೊರಬಲ್ಲೆ, ಆದರೆ ಈ ವೈಫಲ್ಯವೇ ನಮಗೆ ಮುಂದಿನ ಗೆಲುವಿನ ಪಾಠವಾಗಲಿ” ಎಂದು ಧವನ್ ಹೇಳಿದ್ದರು. ಈ ಮಾತುಗಳು ಇಸ್ರೋದ ಕಾರ್ಯ ಸಂಸ್ಕೃತಿಯನ್ನು ರೂಪಿಸಿದವು. ಇದಾದ ಒಂದೇ ವರ್ಷದಲ್ಲಿ, ಅಂದರೆ ೧೯೮೦ರಲ್ಲಿ ಅದೇ ರೋಹಿಣಿ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿತು.
ಆ ಮೂಲಕ ಭಾರತ ತನ್ನದೇ ಆದ ಉಪಗ್ರಹ ಉಡಾಯಿಸುವ ಸಾಮರ್ಥ್ಯ ಹೊಂದಿರುವ ದೇಶಗಳ ಪಟ್ಟಿಗೆ ಸೇರಿಕೊಂಡಿತು. ಇದು ಒಂದು ಚಿಕ್ಕ ಉದಾಹರಣೆ ಮಾತ್ರ.
ಈ ವಾರದ ಆರಂಭದಲ್ಲಿ ಬಹು ರಾಕೆಟ್‌ಗಳನ್ನು ಹೊತ್ತ ಪಿಎಸ್‌ಎಲ್‌ವಿ ವಿಫಲವಾದ ಹಿನ್ನೆಲೆಯಲ್ಲಿ ಇಸ್ರೋದ ಸಾಮರ್ಥ್ಯಗಳ ಬಗ್ಗೆ ಕಲವರು ನಾಲಗೆ ಹರಿಬಿಟ್ಟಿದ್ದೂ ಇದೆ, ಜರೆದಿದ್ದೂ ಇದೆ.
ವಿಜ್ಞಾನದಲ್ಲಿ ಪ್ರತಿಯೊಂದು ವೈಫಲ್ಯವೂ ಹೊಸಬಗೆಯ ಡೇಟಾವನ್ನು ನೀಡುತ್ತದೆ. ಇಸ್ರೋ ಪ್ರತಿಬಾರಿ ಸೋತಾಗಲೂ ಅದನ್ನು ಕುಂದು ಅಥವಾ ಹಿನ್ನಡೆ ಎಂದು ಭಾವಿಸದೆ, ಕಲಿಕೆಯ ಅವಕಾಶವಾಗಿ ಬಳಸಿಕೊಂಡಿದೆ.
ಪಿಎಸ್‌ಎಲ್ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಇಸ್ರೋದ ಅತ್ಯಂತ ನಂಬಿಕಸ್ತ ವಾಹಕ. ಆದರೆ, ಇದರ ಮೊದಲ ಉಡಾವಣೆಯೂ (ಪಿಎಸ್‌ಎಲ್ವಿ-ಡಿ೧) ವಿಫಲವಾಗಿತ್ತು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಸಾಫ್ಟ್ವೇರ್ ದೋಷದಿಂದಾಗಿ ಅಂದು ಉಪಗ್ರಹ ಕಕ್ಷೆ ತಲುಪಲಿಲ್ಲ.
ಆದರೆ ಇಸ್ರೋ ಆ ದೋಷವನ್ನು ಸರಿಪಡಿಸಿಕೊಂಡಿದ್ದರಿಂದಲೇ ಇಂದು ಪಿಎಸ್‌ಎಲ್ವಿ ನೂರಾರು ವಿದೇಶಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಮುಟ್ಟಿಸುವ ಗಾಣದೆತ್ತಾಗಿ ಹೊರಹೊಮ್ಮಿದೆ.
ಆದಾಗ್ಯೂ ಕಳೆದ ೬ ತಿಂಗಳಲ್ಲಿ ಎರಡು ಬಾರಿ ಪಿಎಸ್‌ಎಲ್‌ವಿ ಉಡಾವಣಾ ವೈಫಲ್ಯ ಮತ್ತು ಒಂದು ಜಿಎಸ್‌ಎಲ್ವಿ ಉಡಾವಣೆ ವೈಫಲ್ಯ ಓಡುವ ಕಾಲುಗಳನ್ನು ಕಟ್ಟಿಹಾಕುವಂತಿದೆ.
ಕಳೆದ ಮೇ ತಿಂಗಳಲ್ಲಿ ಪಿಎಸ್‌ಎಲ್‌ವಿ ಉಡಾವಣೆ ವಿಫಲವಾದ ನಂತರ ಅದರ ತನಿಖೆಗೆ ಒಂದು ತಾಂತ್ರಿಕ ಸಮಿತಿ ರಚನೆಯಾಗಿ ಅದು ತನ್ನಚರದಿಯನ್ನೂ ನೀಡಿದೆ. ಆದರೆ ಅದಿನ್ನೂ ಅಧಿಕೃತವಾಗಿ ಸಾರ್ವಜನಿಕವಾಗಿಲ್ಲ.
ಪಲ್ಸ್ ೩ ಎಂದು ಕರೆಯಲಾಗುವ ಘನ ಇಂಧನ ಬಳಸುವ ಇಂಜಿನ್ ಹೊಂದಿರುವ ಮೂರನೇ ಹಂತವು ಕಾರ್ಯನಿರ್ವಹಿಸುತ್ತಿದ್ದಾಗ ತಾಂತ್ರಿಕ ವ್ಯತ್ಯಯ ಸಂಭವಿಸಿ ಈ ವೈಫಲ್ಯ ಉಂಟಾಗಿದೆ ಎಂದು ವರದಿ ಉಲ್ಲೇಖಿಸಿದೆ ಎಂಬ ಮಾತುಗಳಿವೆ.
ಈ ನಿರ್ದಿಷ್ಟ ದೋಷವು ಮೂರನೇ ಹಂತದ ನೋಸಲ್ ಅಥವಾ ಕೇಸಿಂಗ್ ವ್ಯವಸ್ಥೆಯಲ್ಲಿನ ರಚನಾತ್ಮಕ ಅಥವಾ ವಸ್ತು ವೈಫಲ್ಯದಿಂದ ಉಂಟಾದಂತೆ ಕಂಡುಬರುತ್ತಿದ್ದು, ಇದು ಒತ್ತಡದ ನಷ್ಟಕ್ಕೆ ಕಾರಣವಾಗಿದೆ. ಈ ವೈಫಲ್ಯಕ್ಕೆ ಸಂಭವನೀಯ ಕಾರಣವೆಂದರೆ ಫ್ಲೆಕ್ಸ್ ನೋಸಲ್ ನಿಯಂತ್ರಣ ವ್ಯವಸ್ಥೆ ಅಥವಾ ಇನ್ಸುಲೇಷನ್ ಲೈನಿಂಗ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಇರಬಹುದು ಎಂದು ಶಂಕಿಸಲಾಗಿದೆ.
ಇಸ್ರೋ ಇದೇ ಪಿಎಸ್‌ಎಲ್‌ವಿಗಳನ್ನು ೬೦ಕ್ಕೂ ಹೆಚ್ಚು ಬಾರಿ ಯಶಸ್ವಿಯಾಗಿ ಕಕ್ಷೆ ಸೇರಿಸಿದೆ ಎಂಬುದನ್ನು ಮರೆಯುವಂತಿಲ್ಲ. ಇದರಲ್ಲಿ ೯೯% ಯಶಸ್ಸಿನ ಗತಿ ಇಸ್ರೋಗೆ ಪ್ರಾಪ್ತವಾಗಿದೆ ಎಂಬುದೂ ಅದರ ಶ್ರೇಯ ಹೆಚ್ಚಿಸುತ್ತದೆ.
ಚಂದ್ರಯಾನದ ವೃಫಲ್ಯ ಮತ್ತು ಪಾಠ
೨೦೧೯ರ ಚಂದ್ರಯಾನ-೨ ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಅಪ್ಪಳಿಸಿದಾಗ ಇಡೀ ಭಾರತದ ನಿರೀಕ್ಷೆಗಳು ಕ್ಷಣಕಾಲ ಸುಳ್ಳಾದಂತೆ ಭಾಸವಾಯಿತು. ಕೇವಲ ೨.೧ ಕಿಲೋಮೀಟರ್ ದೂರವಿರುವಾಗ ಸಂಪರ್ಕ ಕಡಿತಗೊಂಡಿದ್ದು ಇಸ್ರೋ ವಿಜ್ಞಾನಿಗಳಿಗೆ ದೊಡ್ಡ ಆಘಾತವಾಗಿತ್ತು. ಆದರೆ, ಆ ವೈಫಲ್ಯದಿಂದ ಕಲಿತ ಪಾಠಗಳೇ ಚಂದ್ರಯಾನ-೩ರ ಭವ್ಯ ಯಶಸ್ಸಿಗೆ ಬುನಾದಿಯಾದವು.
ಲ್ಯಾಂಡರ್‌ನ ಕಾಲುಗಳನ್ನು ಬಲಪಡಿಸುವುದು, ಸೆನ್ಸರ್‌ಗಳನ್ನು ಸುಧಾರಿಸುವುದು ಮತ್ತು ಹತ್ತಾರು ಪರ್ಯಾಯ ಮಾರ್ಗಗಳನ್ನು ಅಳವಡಿಸಿದ್ದರಿಂದಲೇ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರವಾಯಿತು.
ಅದೇ ರೀತಿ ಜಿಎಸ್‌ಎಲ್ವಿ ಮಾರ್ಕ್-೩ ಅಭಿವೃದ್ಧಿಪಡಿಸುವಾಗಲೂ ಕ್ರಯೋಜೆನಿಕ್ ಇಂಜಿನ್ ತಂತ್ರಜ್ಞಾನ ದೊಡ್ಡ ಸವಾಲಾಗಿತ್ತು. ವಿದೇಶಗಳು ತಂತ್ರಜ್ಞಾನ ನೀಡಲು ನಿರಾಕರಿಸಿದಾಗ ಮತ್ತು ಆರಂಭಿಕ ಪರೀಕ್ಷೆಗಳು ವಿಫಲವಾದಾಗಲೂ ಇಸ್ರೋ ಸೋಲೊಪ್ಪಲಿಲ್ಲ.
ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನದ ಅಭಿವೃದ್ಧಿಯು ಇಸ್ರೋದ ಹಠ ಮತ್ತು ವಿಕಾಸಕ್ಕೆ ಸಾಕ್ಷಿಯಾಗಿದೆ. ಇದು ಇದು ಕೇವಲ ತಂತ್ರಜ್ಞಾನದ ಗೆಲುವಲ್ಲ, ಬದಲಿಗೆ ಆತ್ಮಬಲದ ಗೆಲುವಾಗಿತ್ತು.
ಸಾಗಬೇಕಾದ ದಾರಿ ದೂರ
ವರ್ಷದಲ್ಲಿ ಮೂರು ವೈಫಲ್ಯ ಸಹಜವಾಗಿಯೇ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಆದರೆ, ತಪ್ಪುಗಳನ್ನು ತಿದ್ದಿಕೊಳ್ಳಬಲ್ಲೆ ಎಂಬ ಭರವಸೆಯೊಂದಿಗೆ ಇಸ್ರೊ ಈ ಅನುಮಾನಗಳನ್ನು ಪರಿಹರಿಸಬೇಕಿದೆ.
ಇಸ್ರೋದ ಒಟ್ಟು ೧೦೫ ಉಡಾವಣಾ ಕಾರ್ಯಾಚರಣೆಗಳ ಪೈಕಿ ೬೪ ಪಿಎಸ್‌ಎಲ್‌ವಿ ಮೂಲಕ ನಡೆದಿದ್ದು, ಅವುಗಳಲ್ಲಿ ಕೇವಲ ಐದು ಮಾತ್ರ ವಿಫಲವಾಗಿವೆ. ಯಶಸ್ಸನ್ನು ಸಾಮಾನ್ಯವಾಗಿ ಸುಲಭವಾಗಿ ಪರಿಗಣಿಸಲಾಗುತ್ತದೆ, ಆದರೆ ವೈಫಲ್ಯಗಳು ಬಂದಾಗ ಅತ್ಯಂತ ತೀವ್ರವಾದ ಮತ್ತು ವಿಮರ್ಶಾತ್ಮಕ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ ಎಂಬ ಕಠಿಣ ವಾಸ್ತವದೊಂದಿಗೆ ಬಾಹ್ಯಾಕಾಶ ಸಂಸ್ಥೆಯು ತನ್ನನ್ನು ತಾನು ಮರು ರೂಪಿಸಿಕೊಳ್ಳುವ ಅಗತ್ಯವಿದೆ.
ಇಸ್ರೊ ಮುಂದೆ ಸಾಗಬೇಕಾದ ದಾರಿ ಬಹಳಷ್ಟಿದೆ. ಅದು ಇನ್ನೂ ಹೆಚ್ಚಿನ ಮೈಲಿಗಲ್ಲುಗಳನ್ನು ಕ್ರಮಿಸಬೇಕಿದೆ. ಇಂದಿನ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ ಶೇಕಡಾ ೨ ರಿಂದ ೩ ರಷ್ಟಿದೆ. ಇದನ್ನು ಕನಿಷ್ಟ ಶೇಕಡಾ ೧೦ ಕ್ಕಿಂತ ಹೆಚ್ಚಿಸುವ ಗುರಿಯೂ ಅದರ ಮುಂದಿದೆ.
ಮಾನವಸಹಿತ ಗಗನಯಾನ ಯೋಜನೆಯು ಇಸ್ರೋದ ಮುಂದಿನ ದೊಡ್ಡ ಸವಾಲು. ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಸುರಕ್ಷಿತವಾಗಿ ಮರಳಿ ತರುವುದು ಸುಲಭದ ಮಾತಲ್ಲ. ಇದಕ್ಕೆ ಅತ್ಯಂತ ಸುರಕ್ಷಿತವಾದ ಜೀವ ರಕ್ಷಕ ವ್ಯವಸ್ಥೆಗಳು ಮತ್ತು ಉಡಾವಣಾ ಸುರಕ್ಷತಾ ಕ್ರಮಗಳ ಅಗತ್ಯವಿದೆ.
ಇದರೊಂದಿಗೆ ಶುಕ್ರಯಾನ (ವೀನಸ್ ಮಿಷನ್), ಆದಿತ್ಯ ಎಲ್-೧ ರಂತಹ ಸೂರ್ಯನ ಅಧ್ಯಯನದ ಯೋಜನೆಗಳು ಇಸ್ರೋವನ್ನು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯಲಿವೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಈಗ ಸ್ಪೇಸ್ ಎಕ್ಸ್ ನಂತಹ ಖಾಸಗಿ ಸಂಸ್ಥೆಗಳು ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡುತ್ತಿವೆ. ಇಸ್ರೊ ಕೂಡ ಈ ನಿಟ್ಟಿನಲ್ಲಿ ಆರ್‌ಎಲ್ವಿ-ಟಿಡಿ ಪರೀಕ್ಷೆಗಳನ್ನು ನಡೆಸುತ್ತಿದೆ.
ಕೊನೆಯದಾಗಿ, ವಿಜ್ಞಾನ ಎನ್ನುವುದು ಕೇವಲ ಯಶಸ್ಸಿನ ಕಥೆಯಲ್ಲ; ಅದು ಹತ್ತಾರು ವೈಫಲ್ಯಗಳನ್ನು ಅರಗಿಸಿಕೊಂಡು ಬೆಳೆಯುವ ಪ್ರಕ್ರಿಯೆ. ಇಸ್ರೋದ ಪ್ರತಿ ಸೋಲೂ ಭಾರತೀಯ ಯುವ ವಿಜ್ಞಾನಿಗಳಿಗೆ ಹೊಸ ಸ್ಫೂರ್ತಿ ನೀಡುತ್ತಿದೆ.
ಒಂದು ವರ್ಷ, ಆರು ಉಡಾವಣೆಗಳು, ಮೂರು ವೈಫಲ್ಯಗಳು. ಇದು ನಿಜಕ್ಕೂ ಹೆಮ್ಮೆ ತರುವ ಅಂಕಿಅಂವಲ್ಲ. ಆದರೆ, ಇದು ಅಂತರ್ಗತ ಅನ್ವೇಷಣೆಗೆ ಸಿಕ್ಕಿರುವ ಒಂದು ಸುಸಂದರ್ಭ ಕೂಡ
ಹೌದು. ಇಸ್ರೋದ ವಿಶ್ವಾಸಾರ್ಹತೆಯು ದಶಕಗಳ ಕಾಲ ತೋರಿದ ನಿರಂತರತೆಯಿಂದಾಗಿ ನಿರ್ಮಾಣವಾಗಿದೆ. ಈ ಹಿನ್ನಡೆಯಿಂದ ಬಲವಾಗಿ ಪುಟಿದೇಳಲು ಅದೇ ಗುಣಗಳನ್ನು ಮತ್ತೆ ಅಳವಡಿಸಿಕೊಳ್ಳಬೇಕಿದೆ.
ಇಸ್ರೋದ ಪಾಲಿಗೆ ನಕ್ಷತ್ರಗಳೇ ಮಿತಿ ಅಲ್ಲ, ಅದನ್ನೂ ಮೀರಿ ಸಾಗುವ ಹಂಬಲವಿದೆ. ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸುವಲ್ಲಿ ಭಾರತದ ಈ ಹೆಮ್ಮೆಯ ಸಂಸ್ಥೆ ಇನ್ನು ನೂರಾರು ಸವಾಲುಗಳನ್ನು ಎದುರಿಸಿ ಗೆಲ್ಲಬೇಕಿದೆ.
-ಕೆಎಸ್ ಜಗನ್ನಾಥ್, ಹಿರಿಯ ಪತ್ರಕರ್ತ


