ರಾಜ್ಯ ಸರ್ಕಾರ ಒಂದು ಸಾವಿರ ದಿನಗಳನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ. 13ರಂದು ಬೃಹತ್ ಸಾಧನಾ ಸಮಾವೇಶ ಆಯೋಜನೆ ಮಾಡಲು ನಿರ್ಧರಿಸಿದ್ದು, ಲಕ್ಷಕೂ ಅಧಿಕ ಜನರಿಗೆ ಹಕ್ಕು ಪತ್ರ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
ಹಾವೇರಿಯಲ್ಲಿ ಸಮಾವೇಶ ಆಯೋಜನೆಯಾಗಲಿರುವ ಅಜ್ಜನ ಗುಡಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯೂ ಸೇರಿದಂತೆ ಹಲವು ಜಿಲ್ಲೆಗಳ ಫಲಾನುಭವಿಗಳಿಗೆ ಒಂದು ಲಕ್ಷಕ್ಕೂ ಅಧಿಕ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಮಾಡಲಾಗುವುದು. ಪೋಡಿ ಮುಕ್ತ ಅಭಿಯಾನ ಕೂಡಾ ನಡೆದಿದ್ದು, ಇತರ ಹಲವು ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದೆ. ಹಕ್ಕು ಪತ್ರ ವಿತರಣೆ ಮಾಡುವುದಾಗಿ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ವಿಜಯನಗರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮೊದಲ ಹಂತದಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಹಾವೇರಿ ಸಮಾವೇಶದಲ್ಲಿ ಸುಮಾರು ಲಕ್ಷಕ್ಕೂ ಅಧಿಕ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಸುಸಜ್ಜಿತ ಮೆಡಿಕಲ್ ಕಾಲೇಜು ಆಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರ ಉದ್ದೇಶದ ಯೋಜನೆಗಳು ಅನುಷ್ಠಾನ ಹಂತಕ್ಕೆ ಬಂದಿವೆ. ಹಾವೇರಿಯನ್ನು ಮಾದರಿ ಜಿಲ್ಲೆ ಮಾಡುವ ಕನಸು ಹೊಂದಿದ್ದು, ಈ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಕೆಲಸ ಮಾಡುತ್ತಿದ್ದೇವೆ. ಹಾವೇರಿ ಸಮಾವೇಶವನ್ನೂ ಐತಿಹಾಸಿಕವಾಗಿ ಮಾಡಲಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು, ಸಚಿವ ಸಂಪುಟದ ಸಹೋದ್ಯೋಗಿಗಳು ಸಮಾವೇಶದಲ್ಲಿಲ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ವೇದಿಕೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿದ ಮಾದರಿಯಲ್ಲೇ ಸಾಧನಾ ಸಮಾವೇಶದ ಸಿದ್ದತೆ ಮಾಡಲಾಗುವುದು. ವಾಹನಗಳ ನಿಲುಗಡೆಗೆ ವೇದಿಕೆ ಸಮೀಪದಲ್ಲೇ ವ್ಯವಸ್ಥೆ ಮಾಡಲಾಗುವುದು. ವೈದ್ಯಕೀಯ ಕಾಲೇಜು ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಿಸಿದರೆ ಸೂಕ್ತವಾಗಲಿದೆ. ವಿಜಯನಗರದಲ್ಲಿ ಆಯೋಜಿಸಿದ್ದ ಸಮಾವೇಶದ ಮಾದರಿಯಲ್ಲೇ ವೇದಿಕೆಯನ್ನು ನಿರ್ಮಿಸಬೇಕು. ಗಣ್ಯರಿಗೆ ಸೂಕ್ತ ಭದ್ರತೆ ವ್ಯವಸ್ಥೆ ಮಾಡಬೇಕು. ಸಮಾವೇಶದಲ್ಲಿ ಭಾಗವಹಿಸುವ ಜನರಿಗೂ ಯಾವುದೇ ಸಮಸ್ಯೆಯಾಗಬಾರದು ಎಂದು ಸಚಿವರು ನಿರ್ದೇಶನ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣವರ್, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ಆನಂದ ಗಡ್ಡದ್ದೇವರ ಮಠ ಮತ್ತಿತರ ಮುಖಂಡರು ಇದ್ದರು.


