Menu

ಅಬಕಾರಿ ಇಲಾಖೆಯಲ್ಲಿ ಎರಡೂವರೆ ಸಾವಿರ ಕೋಟಿ ಅಕ್ರಮ, ಸಚಿವರು ಮತ್ತು ಮಗನಿಗೆ ಹಣ ಸಂದಾಯ: ಆರ್‌ ಅಶೋಕ 

ಅಬಕಾರಿ ಇಲಾಖೆಯಲ್ಲಿ ಎರಡೂವರೆ ಸಾವಿರ ಕೋಟಿ ರೂ. ಲಂಚ ವಹಿವಾಟು ನಡೆದಿದ್ದು, ಈ ಹಣವನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಸಚಿವ ಆರ್‌ಬಿ ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದಿಂದ ಇಲಾಖೆಗಳಿಗೆ ಆದಾಯ ಸಂಗ್ರಹದ ಗುರಿ ನೀಡಲಾಗುತ್ತದೆ. ಆದರೆ ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್‌ಗಳನ್ನು ಹರಾಜು ಹಾಕಲಾಗುತ್ತಿದೆ. ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್‌ ನಾಯಕ್‌ 25 ಲಕ್ಷ ರೂ. ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯನವರೇ ನೇರ ಹೊಣೆ. ವಿಬಿ ಜಿ ರಾಮ್‌ ಜಿ ಯೋಜನೆ ವಿರೋಧಿಸಲು ಮಹಾತ್ಮ ಗಾಂಧೀಜಿಯನ್ನು ಕಾಂಗ್ರೆಸ್‌ ನಾಯಕರು ಬಳಸಿ ಕೊಂಡು ಅಧಿವೇಶನ ನಡೆಸುತ್ತಿದ್ದಾರೆ. ಇದೇ ಸರ್ಕಾರ ಇಡೀ ರಾಜ್ಯವನ್ನು ನಶೆಯಲ್ಲಿ ಮುಳುಗಿಸಿ ಗಾಂಧೀಜಿಯ ಆಶಯವನ್ನು ನಾಶ ಮಾಡಿದ್ದಾರೆ. ಅಬಕಾರಿ ಇಲಾಖೆಯ ಹಗರಣದ ಹಿನ್ನೆಲೆಯಲ್ಲಿ ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆ ನೀಡದೇ ಇದ್ದರೆ ಮುಖ್ಯಮಂತ್ರಿಯೇ ಕಾರಣ ಎಂದು ಭಾವಿಸಬೇಕಾಗುತ್ತದೆ ಎಂದರು.

ಸಿಎಲ್‌ 7 ಗೆ 1.25 ಕೋಟಿ ರೂ. ಲಂಚ ನಿಗದಿಯಾಗಿದೆ. ಅಂದರೆ 750 ಲೈಸೆನ್ಸ್‌ ನೀಡಲು 1,225 ಕೋಟಿ ರೂ. ಲಂಚ ಪಡೆಯಲಾಗುತ್ತದೆ. ಸಿಎಲ್‌ 2 ಗೆ ಒಂದೂವರೆ ಕೋಟಿ ನಿಗದಿಯಾಗಿದ್ದು, 650 ಲೈಸೆನ್ಸ್‌ಗೆ 925 ಕೋಟಿ ರೂ. ಲಂಚ ಪಡೆಯಲಾ ಗುತ್ತದೆ. ಸಿಎಲ್‌ 9 ಗೆ ಒಟ್ಟು 92 ಕೋಟಿ ರೂ. ಲಂಚ ಪಡೆಯಲಾಗುತ್ತದೆ. ಮಿನಿ ಬ್ರಿವರಿ ಲೈಸೆನ್ಸ್‌ಗೆ ಎರಡೂವರೆ ಕೋಟಿ ರೂ. ಆಗುತ್ತದೆ. ಎಲ್ಲ ಸೇರಿ ಎರಡೂವರೆ ಸಾವಿರ ಕೋಟಿ ರೂ. ಲಂಚವಾಗುತ್ತದೆ. ಇದನ್ನು ಅಸ್ಸಾಂ ಚುನಾವಣೆಗೆ ಕಳುಹಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ಕೂಡ ಬಂದಿದ್ದು, ಇದರಲ್ಲಿ ಸಚಿವರು ಅಥವಾ ಅವರ ಮಗನಿಗೆ ಹಣ ಕೊಡಬೇಕೆಂದು ತಿಳಿಸಲಾಗಿದೆ. ಇದೇ ಇವರಿಗೆ ಗಾಂಧೀಜಿ ಮೇಲಿರುವ ಪ್ರೀತಿ. ಅಬಕಾರಿ ಇಲಾಖೆಯ ಹಣ ಮಹಾರಾಷ್ಟ್ರ ಚುನಾವಣೆಗೆ ಬಳಕೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ 5,000 ಕೋಟಿ ರೂ., ವಾಲ್ಮೀಕಿ ನಿಗಮದ ಹಣ, ಕೋಗಿಲು ಕ್ರಾಸ್‌ನ 600 ಕೋಟಿ ರೂ. ಮೌಲ್ಯದ ಜಮೀನು ಹೀಗೆ ಎಲ್ಲ ಅಕ್ರಮಗಳನ್ನು ಬಿಜೆಪಿ ಬಯಲಿಗೆಳೆದು ಹಣವನ್ನು ಉಳಿಸಿದೆ. ಈಗ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಹೋರಾಟವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದರು.

ಡ್ರಗ್‌ ಮಾಫಿಯಾ ಬಗ್ಗೆ ನಾನು ಅಧಿವೇಶನದಲ್ಲಿ ಮಾತಾಡಿದಾಗ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಉತ್ತರ ಕೊಟ್ಟಿದ್ದರು. ನಿನ್ನೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದಾಗ, ಪೊಲೀಸ್‌ ಇಲಾಖೆಯ ವೈಫಲ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಮಹಾರಾಷ್ಟ್ರದ ಪೊಲೀಸರು ಇಲ್ಲಿಗೆ ಬಂದಿರುವುದರಿಂದ ನೀವೇನು ಮಾಡುತ್ತಿದ್ದೀರಿ ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಡ್ರಗ್‌ ಮಾಫಿಯಾದಲ್ಲಿ 180 ಜನರಿದ್ದಾರೆ. ಜೈಲುಗಳಲ್ಲೂ ಡ್ರಗ್‌ ಮಾಫಿಯಾ ನಡೆಯುತ್ತಿದ್ದು, ಪೊಲೀಸರು ಕೂಡ ಭಾಗಿಯಾಗಿದ್ದಾರೆ. ಏಕೆಂದರೆ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ನ ಕಚೇರಿಗಳಾಗಿವೆ. ಹಣ ಕೊಟ್ಟರೆ ಮಾತ್ರ ಆಯಕಟ್ಟಿನ ಜಾಗ ನೀಡಲಾಗುತ್ತದೆ ಎಂದದು ತಿಳಿಸಿದರು.

ಶಿಡ್ಲಘಟ್ಟದ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡನನ್ನು ಇನ್ನೂ ಬಂಧಿಸಿಲ್ಲ. ನಾನು ಈ ಬಗ್ಗೆ ಸರ್ಕಾರಕ್ಕೆ ಆಗ್ರಹ ಮಾಡಿದರೂ ಪೊಲೀಸರು ಕ್ರಮ ವಹಿಸಿಲ್ಲ. ಈಗ ಮುಖ್ಯಮಂತ್ರಿಗಳ ಕ್ಷೇತ್ರ ವರುಣಾದಲ್ಲಿ ಗ್ರಾಮದ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದೇ ರೀತಿ ಎಲ್ಲ ಜಿಲ್ಲೆಗಳಲ್ಲೂ ಸಮಸ್ಯೆ ಇದೆ. ಕಾಂಗ್ರೆಸ್‌ ಶಾಸಕರು ಹಾಗೂ ಪುಂಡರು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾರೆ. ಸರ್ಕಾರ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕಿದೆ. ಮುಖ್ಯಮಂತ್ರಿಗೆ ಆಡಳಿತದ ಹಿಡಿತ ತಪ್ಪಿಹೋಗಿದೆ. ಈ ಸರ್ಕಾರದ ಪಾರ್ಶ್ವವಾಯು ಪೀಡಿತ ಸ್ಥಿತಿಯಲ್ಲಿದೆ ಎಂದರು.

ಬೀದಿ ದಾಸಯ್ಯನನ್ನು ಸಿಎಂ ಮಾಡಿದರೂ ಒಪ್ಪುತ್ತೇವೆಂದು ಸಚಿವ ಜಮೀರ್‌ ಹೇಳಿದ್ದಾರೆ. ಕೆಂಗಲ್‌ ಹನುಮಂತಯ್ಯನವರಂತಹ ಧೀಮಂತರು ಕುಳಿತಿದ್ದ ಹುದ್ದೆಯ ಬಗ್ಗೆ ಸಚಿವರೇ ಕೀಳಾಗಿ ಮಾತಾಡುತ್ತಾರೆ. ಅಂದರೆ ಜನರಿಂದ ಆಯ್ಕೆಯಾದ ಶಾಸಕರಿಗೆ ಯಾವುದೇ ಬೆಲೆ ಇಲ್ಲ ಎಂದು ಟೀಕಿಸಿದರು.

Related Posts

Leave a Reply

Your email address will not be published. Required fields are marked *