ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಗೃಹ ಇಲಾಖೆ ಅನುಮತಿ ನೀಡಿದೆ. ಈ ಮೂಲಕ ತವರಿನ ಪಂದ್ಯಗಳು ಕೈ ತಪ್ಪುವ ಭೀತಿಯಲ್ಲಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಖುಷಿಯಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ ನಡೆಸುವಂತೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಈ ಹಿಂದೆ ಹೇಳಿದ್ದರು.
ರಾಜ್ಯದ ಪೊಲೀಸರು ನೀಡಿದ್ದ 16 ಬದಲಾವಣೆಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಡಿಕೊಂಡಿತ್ತು. ಅಲ್ಲದೇ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ 350ಕ್ಕೂ ಅಧಿಕ ಎಐ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ಇದರ 4.5 ಕೋಟಿ ರೂ. ವೆಚ್ಚವನ್ನು ಆರ್ ಸಿಬಿ ಭರಿಸಿತ್ತು. ರಾಜ್ಯ ಗೃಹ ಇಲಾಖೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಈ ವಿಷಯವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆ ಮಾಧ್ಯಮ ಹೇಳಿಕೆ ಮೂಲದ ಪ್ರಕಟಿಸಿದೆ.
ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿದ್ದರೂ ಪಂದ್ಯಗಳ ಸ್ಥಳ ಘೋಷಣೆ ಆಗಿಲ್ಲ. ಈ ಬಗ್ಗೆ ಘೋಷಣೆ ಮಾಡಲು ಐಪಿಎಲ್ ಆಡಳಿತ ಮಂಡಳಿಗೆ ಜನವರಿ 20ರೊಳಗೆ ಸರ್ಕಾರ ಅಂತಿಮ ನಿರ್ಧಾರ ತಿಳಿಸಬೇಕಿತ್ತು. ಇದೀಗ ರಾಜ್ಯ ಪೊಲೀಸ್ ಇಲಾಖೆ ವಿಧಿಸಿದ ಷರತ್ತುಗಳನ್ನು ಜಾರಿ ಮಾಡುವ ಭರವಸೆ ನೀಡಿರುವ ಕೆಎಸ್ ಸಿಎ ಪಂದ್ಯ ನಡೆಸಲು ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಕಳೆದ ವರ್ಷ 18 ವರ್ಷಗಳ ನಂತರ ಆರ್ ಸಿಬಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಇದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ ನಡೆಸುವಂತೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.
ಆರ್ ಸಿಬಿ ಪಂದ್ಯಗಳು ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಗೌರವದ ವಿಚಾರ. ಮುಂದಿನ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ. ನಾನು ಕ್ರಿಕೆಟ್ ಅಭಿಮಾನಿ. ಇತ್ತೀಚೆಗೆ ಆಗಿರುವ ಅನಾಹುತ ಮುಂದೆ ಮರುಕಳಿಸ ದಂತೆ ಎಚ್ಚರಿಕೆ ವಹಿಸಿ ಕ್ರೀಡಾಂಗಣದ ಗೌರವ ಉಳಿಯುವಂತೆ ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಜನದಟ್ಟಣೆ ನಿಭಾಯಿಸಿಕೊಂಡು ಕ್ರೀಡಾಂಗಣ ಬೆಳೆಸಲಾಗುವುದು ಎಂದು ತಿಳಿಸಿದ್ದರು.


