Menu

ತುಮಕೂರಿನಲ್ಲಿ ಫಾಯಿಲ್ ಫೆನ್ಸಿಂಗ್‌: ಬೆಂಗಳೂರು ಹುಡುಗ-ಹುಡುಗಿಯರದ್ದೇ ದರ್ಬಾರ್

ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಮಹಿಳೆಯರ ಫಾಯಿಲ್ ಫೆನ್ಸಿಂಗ್‌ನಲ್ಲಿ ಬೆಂಗಳೂರು ಗ್ರಾಮಂತರದ ಸಯೆದಾ ಇಫ್ತಾಖರ್ ಬಾನು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದ ಶ್ರೀರಕ್ಷಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಬೆಂಗಳೂರು ನಗರದ ಧೃತಿಕಾ ಎನ್. ಅಂದನ್ ಮತ್ತು ಪಿಸಿ ನಿಶಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮಹಿಳೆಯರ ಎಪೆ ಫೆನ್ಸಿಂಗ್‌ನಲ್ಲಿ ಬೆಂಗಳೂರು ನಗರದ ಸೆಜಲ್ ಗುಲಿಯಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಬೆಂಗಳೂರು ನಗರದ ಎನ್.ಬಿ. ದಿವ್ಯಾ ಬೆಳ್ಳಿ ಪದಕ ಗೆದ್ದರೆ, ಎಚ್.ವಿ. ಲಾಹಿರಿ ಹಾಗೂ ಬಿ. ನೈದಿಲೆ ಕಂಚಿನ ಪದಕ ಗೆದ್ದರು.  ಮಹಿಳೆಯರ ಸೇಬರ್ ಫೆನ್ಸಿಂಗ್‌ನಲ್ಲಿ ಬೆಂಗಳೂರು ನಗರದ ದೀಕ್ಷಾ ಎಲ್ ಗೌಡ ಬಂಗಾರದ ಪದಕ ಗೆದ್ದರು. ಎಸ್. ತಾನ್ವಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಕೆ. ಲಕ್ಷಣ್ಯ ಮತ್ತು ಎಚ್. ವಂದನಾ ಕಂಚಿನ ಪದಕ ಗೆದ್ದರು.

ಪುರುಷರ ಫಾಯಿಲ್ ಫೆನ್ಸಿಂಗ್‌ನಲ್ಲಿ ಬೆಂಗಳೂರು ಗ್ರಾಮಾಂತರದ ಸಯ್ಯದ್ ಬಹುದ್ದೀನ್ ಮತ್ತು ಗಾಬ್ರಿಲ್ ಎಲಿಶ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರೆ, ಮನು ನಾಯಕ ಹಾಗೂ ಸಚಿನ್ ಕ್ರಮವಾಗಿ ಕಂಚು ಗೆದ್ದರು.

ನವ್ಯಾ, ದೇವಮ್ಮ ಆರ್ಚರಿ ಸ್ಪರ್ಧೆಯಲ್ಲಿ ಡಬಲ್ ಪದಕ ಗೆಲ್ಲುವ ಮೂಲಕ ಎರಡನೇ ದಿನದ ಆಕರ್ಷಣೆಯಾದರು.  ಆತಿಥೇಯ ಕ್ರೀಡಾಪಟುಗಳು ಪದಕ ಬೇಟೆಯಾಡಿದ್ದಾರೆ. ವೈಯಕ್ತಿಕ ಹಾಗೂ ತಂಡ ವಿಭಾಗಗಳಲ್ಲೂ ತುಮಕೂರು ಕ್ರೀಡಾಪಟುಗಳು ಪ್ರಭುತ್ವ ಸಾಧಿಸಿದ್ದಾರೆ. ಕ್ರೀಡಾಕೂಟದ ಎರಡನೇ ದಿನವಾದ ಶನಿವಾರ ಆರ್ಚರಿ, ಟೇಕ್ವಾಂಡೊ, ಬ್ಯಾಡ್ಮಿಂಟನ್, ಕಯಾಕಿಂಗ್ ಮತ್ತು ಫೆನ್ಸಿಂಗ್ ಕ್ರೀಡೆಗಳಲ್ಲಿ ಪದಕ ಸುತ್ತುಗಳು ನಡೆದವು.

ತುಮಕೂರು ಯೂನಿವರ್ಸಿಟಿ ಗ್ರೌಂಡ್ ನಲ್ಲಿ ನಡೆದ ಆರ್ಚರಿ ಸ್ಪರ್ಧೆಗಳಲ್ಲಿ ಮೂವರಿಗೆ ಪದಕ ಡಬಲ್ ಒಲಿಯಿತು. ಮಹಿಳೆಯರ 50 ಮೀಟರ್ ವೈಯಕ್ತಿಕ ವಿಭಾಗದಲ್ಲಿ 272 ಪಾಯಿಂಟ್ ಪಡೆದು ನವ್ಯಾ ವಿನ್ಸೆಂಟ್ ಬಂಗಾರದ ಬೇಟೆಯಾಡಿದರು. ದೇವಮ್ಮ ಹಾಗೂ ಅಶ್ವಿಕಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಪುರುಷರ 30 ಮೀಟರ್ ಆರ್ಚರಿಯಲ್ಲಿ ಅಮಿತ್ ಜಯಂತ್ ಗೌಡ ಸ್ವರ್ಣ ಗೆದ್ದರೆ, ಮೌನಿಶ್ ಕುಮಾರ್ ಮತ್ತು ವೀರಭದ್ರ ಬೆಳ್ಳಿ ಹಾಗೂ ಕಂಚು ಗೆದ್ದರು. ಮಹಿಳೆಯರ 30 ಮೀಟರ್ ಆರ್ಚರಿಯಲ್ಲಿ ನವ್ಯಾ ವಿನ್ಸೆಂಟ್ ಬಂಗಾರದ ಪದಕ ಗೆದ್ದರೆ, ಅನ್ನಪೂರ್ಣ ಮತ್ತು ದೇವಮ್ಮ ಬೆಳ್ಳಿ ಹಾಗೂ ಕಂಚು ವಶಪಡಿಸಿಕೊಂಡರು.

ಪುರುಷರ ಆರ್ಚರಿಯ 50 ಮೀಟರ್ ವೈಯಕ್ತಿಕ ವಿಭಾಗದಲ್ಲಿ ದೇವರಾಜ್ ಸ್ವರ್ಣ ಪದಕ ಗೆದ್ದರು. 287 ಪಾಯಿಂಟ್‌ಗಳೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅಮಿತ್ ಜಯಂತ್ ಗೌಡ 281 ಅಂಕಗಳಿಸಿ ಬೆಳ್ಳಿ ಗೆದ್ದರೆ, 269 ಪಾಯಿಂಟ್ ಪಡೆದ ಎಸ್. ವಿನಯ್ ಕುಮಾರ್ ಕಂಚಿಗೆ ತೃಪ್ತಿಪಟ್ಟುಕೊಂಡರು.

ಅಮನಿಕೆರೆಯಲ್ಲಿ  ನಡೆದ ಮಹಿಳೆಯರ ಕಯಾಕಿಂಗ್ 500 ಮೀಟರ್ ಕೆ-1 ವಿಭಾಗದಲ್ಲಿ 2.42 ನಿಮಿಷದಲ್ಲಿ ಕ್ರಮಿಸಿದ ಸಮರ ಸ್ವರ್ಣ ಪದಕ ಗೆದ್ದಿದ್ದಾರೆ. ಅದ್ವಿತಾ ಹಾಗೂ ತುಮಕೂರಿನ ಲಾಸ್ಯ ಸೃಷ್ಟಿ ವಿ. ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಮಹಿಳೆಯರ ಕಯಾಕಿಂಗ್ 500 ಮೀಟರ್ ಎಸ್‌ಯುಪಿ ವಿಭಾಗದಲ್ಲಿ ಧನ್ಯಾ ಟಿ. ಕುಂದರ್ 4.36 ನಿಮಿಷದಲ್ಲಿ ಕ್ರಮಿಸಿ, ಚಿನ್ನದ ಪದಕ ಗೆದ್ದರು. ಸೌಮ್ಯಾ ಕೆ. ಮತ್ತು ತುಮಕೂರಿನ ಕಾವ್ಯ ಎನ್. ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.

ಪುರುಷರ ಕಯಾಕಿಂಗ್ 500 ಮೀಟರ್ ಕೆ-1 ವಿಭಾಗದಲ್ಲಿ ಲಲಿತ್ ಶ್ರೀ ಪ್ರಣವ್ ವಿ. 2.30 ನಿಮಿಷದಲ್ಲಿ ಗುರಿ ತಲುಪಿ ಬಂಗಾರದ ಬೇಟೆಯಾಡಿದರು. ಆದ್ಯಾಂತ್ ಕುಮಾರ್ ಬೆಳ್ಳಿ ಮತ್ತು ತುಮಕೂರಿನ ನಿತಿನ್ ಎ. ಕಂಚಿನ ಪದಕ ಗೆದ್ದರು.
ಮಹಿಳೆಯರ ಕಯಾಕಿಂಗ್ 500 ಮೀಟರ್ ಎಸ್‌ಯುಪಿ ವಿಭಾಗದಲ್ಲಿ 3.55 ನಿಮಿಷದಲ್ಲಿ ಕ್ರಮಿಸಿದ ಮಂಜುನಾಥ್ ನಾಯಕ್ ಸ್ವರ್ಣಕ್ಕೆ ಕೊರಳೊಡ್ಡಿದರು. ರೋಹನ್ ಆರ್. ಸುವರ್ಣ ಮತ್ತು ಪವನ್ ಬೆಳ್ಳಿ-ಕಂಚು ವಶಪಡಿಸಿಕೊಂಡರು.

ಬ್ಯಾಡ್ಮಿಂಟನ್‌ನಲ್ಲಿ ನಿಶ್ಚಲ್-ಅಖಿಲಾಗೆ ಸ್ವರ್ಣ

ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಬೆಂಗಳೂರಿನ ನಿಶ್ಚಲ್ ಎಸ್. ಗೌಡ ಬಂಗಾರದ ಪದಕ ಗೆದ್ದಿದ್ದಾರೆ. ಶ್ರೇಯಸ್ ಚಂದ್ರಶೇಖರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಸೆಮಿಫೈನಲ್‌ನಲ್ಲಿ ಸೋತ ಬೆಂಗಳೂರಿನ ರೇಹಾನ್ ಆರಿಜ್ ಮತ್ತು ಮಯುಖ್ ಡಿ.ಬಿ. ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಬೆಂಗಳೂರಿನ ಅಖಿಲಾ ಆನಂದ್ ಸ್ವರ್ಣ ಪದಕ ಗೆದ್ದುಕೊಂಡರು. ಹಂಸ ಮುರಳೀಧರ್ ಬೆಳ್ಳಿ ಪಡೆದರು. ಕೆ.ಎಚ್. ದೀಕ್ಷಾ ಮತ್ತು ಅಕ್ಷತಾಂಜಲಿ ವಿಜಯ್ ರಾವ್ ಕಂಚಿನ ಪದಕ ಗಳಿಸಿದರು.

ಪುರುಷರ ಫುಟ್ಬಾಲ್‌ನಲ್ಲಿ ಕೊಡಗು ಮತ್ತು ಉತ್ತರ ಕನ್ನಡ ತಂಡಗಳು ಎ ಗ್ರೂಪ್‌ನಿಂದ ಸೆಮಿಫೈನಲ್ ಪ್ರವೇಶಿಸಿವೆ. ಮಹಿಳೆಯ ಕಬ್ಬಡಿ ಲೀಗ್‌ನಲ್ಲಿ ತುಮಕೂರು ತಂಡ 43-29 ಅಂಕಗಳಿಂದ ಹಾವೇರಿ ತಂಡವನ್ನ ಪರಾಭವಗೊಳಿಸಿ ಕೂಟದಲ್ಲಿ ಶುಭಾರಂಭ ಮಾಡಿತು.

ಮಹಿಳಾ ಟೆಕ್ವಾಂಡೋ 67 ಕೆಜಿ ವಿಭಾಗದಲ್ಲಿ ದೀಕ್ಷಾ ರಾಜ್ ಗೋಪಾಲ್ ಸ್ವರ್ಣ ಪದಕ ಗೆದ್ದಿದ್ದಾರೆ. ಶೃತಿ ಅರ್ಜುನ್ ಗೋಂಡೆ ಮತ್ತು ಲೋಹಿತಾ ಹಾಗೂ ಸೃಷ್ಟಿ ಕಂಚಿನ ಪದಕಕ್ಕೆ ಪಾತ್ರರಾದರು. ಮಹಿಳೆಯರ ಟೆಕ್ವಾಂಡೋ 73 ಕೆ.ಜಿ ವಿಭಾಗದಲ್ಲಿ ಲೇಕಾ ನೀಲಕಂಠ ಚಿನ್ನದ ಪದಕ ಗೆದ್ದ,. ಸಂಸ್ಖೃತಿ ಬೆಳ್ಳಿ ,ಪ್ರಜ್ಞಾ ಹಾಗೂ ದಿಯಾ ಪ್ರದೀಪ್ ಕಂಚು ಗೆದ್ದರು.

ಪುರುಷರ 68 ಕೆ.ಜಿ ವಿಭಾಗದಲ್ಲಿ ಕೌಗರ ವಂಶಿ ಚಿನ್ನ, ಸುವನೆಶ್ ಡಿ. ಮಹೀಂದ್ರ ಬೆಳ್ಳಿ ಪದಕ ಗೆದ್ದಿದ್ದಾರೆ. ತುಮಕೂರಿನ ರಚಿತ್ ರೆಗನ್ ರೋಸ್ ಮತ್ತು ಮೊಹಮ್ಮದ್ ಒವೈಸ್ ಕಂಚಿನ ಪದಕ ಪಡೆದರು. 78 ಕೆ.ಜಿ ಪುರುಷರ ವಿಭಾಗದಲ್ಲಿ ಪುಷ್ಪಕ್ ದಮಾನಿ ಸ್ವರ್ಣ, ಅಂಕಿತ್ ಸುನಿಲ್ ಬೆಳ್ಳಿ ಗೆದ್ದರು. ಸಂಜಯ್ ಕುಮಾರ್ ಮತ್ತು ತುಮಕೂರಿನ ಕೆಬಿ ಜಗನ್ನಾಥ್ ಕಂಚು ಗೆದ್ದರು.

Related Posts

Leave a Reply

Your email address will not be published. Required fields are marked *