ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪುಗೊಂಡಿರುವ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಗಳಲ್ಲಿ ಕೂಡಾ ಬಿಜೆಪಿ -ದಳ ಮೈತ್ರಿ ಯಶಸ್ವಿಯಾಗಬೇಕೆಂಬ ಲೆಕ್ಕಾಚಾರ ಈಗ ಶುರುವಾಗಿದೆ. ಒಟ್ಟಿನಲ್ಲಿ ಈಗ ಮುಂಬಯಿ ಪಾಲಿಕೆ ಫಲಿತಾಂಶದ ಬಳಿಕ ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಯಲ್ಲಿಯೂ ತನ್ನ ಜೈತ್ರಯಾತ್ರೆಗೆ ದೋಸ್ತಿ ಬಣ ಹವಣಿಸಿದೆ.
ಮುಂಬಯಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಬಣ ಭರ್ಜರಿ ಜಯ ಸಾಧಿಸಿದೆ. ಕಳೆದ ೨೭ ವರ್ಷಗಳಿಂದ ಮುಂಬಯಿ ಪಾಲಿಕೆಯಲ್ಲಿ ಅನಭಿಷಕ್ತ ದೊರೆಯಾಗಿ ಮೆರೆದ ಠಾಕ್ರೆ ಬಣದ ಶಿವಸೇನೆಗೆ ಭಾರಿ ಮುಖಭಂಗವಾಗಿದೆ. ಈ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಕಾಂಗ್ರೆಸ್ ಶಕ್ತಿಯೂ ಗಣನೀಯ ಪ್ರಮಾಣದಲ್ಲಿ ಕುಸಿದಿರುವುದು ಗಮನಾರ್ಹ.
ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರಕ್ಕೆ ಮತ್ತು ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸಡ್ಡು ಹೊಡೆಯುವ ದಿಶೆಯಲ್ಲಿ ಚುನಾವಣೆಗೂ ಮುನ್ನ ದೂರ ಉಳಿದಿದ್ದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ರಾಜಕೀಯವಾಗಿ ಒಂದಾದರು. ಆದರೆ ಚುನಾವಣೆಗಳಲ್ಲಿ ಠಾಕ್ರೆ ಕುಟುಂಬ ಒಂದಾದರೂ ಮುಂಬಯಿ ಜನತೆ ಇದಕ್ಕೆ ಸಹಮತ ನೀಡದಿರುವುದು ಗಮನಸೆಳೆಯುವಂಹದು. ಮಿಗಿಲಾಗಿ ಬಿಜೆಪಿ ಮತ್ತು ಶಿಂಧೆ ನಾಯಕತ್ವಕ್ಕೆ ಮುಂಬಯಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸಿರುವ ಮತ ದಾರರು ಜೈಕಾರ ಹಾಕಿರುವುದು ಅತಿ ಮುಖ್ಯ. ಪ್ರಾಯಶಃ ಮುಂಬಯಿ ಮತದಾರರು ಖಂಡಿತವಾಗಿಯೂ ತಮ್ಮ ಕಡೆ ಇರುವರೆಂಬ ಠಾಕ್ರೆ ಕುಟುಂಬದ ಅತಿ ಆತ್ಮ ವಿಶ್ವಾಸವೀಗ ಸಂಪೂರ್ಣವಾಗಿ ಕೈ ಕೊಟ್ಟಿದೆ. ಒಟ್ಟಿನಲ್ಲಿ ಈ ಚುನಾವಣೆ ಫಲಿತಾಂಶ ದಿಂದ, ಬಿಜೆಪಿ ಮತು ಶಿಂಧೆ ನಡುವಣ ಮೈತ್ರಿ ಸಂಬಂಧವನ್ನು ಮತ್ತಷ್ಟು ಬಲಗೊಳಿಸಿದರೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ನೇತಾರ ಶರತ್ ಪವಾರ್ ಪಕ್ಷಗಳ ಪ್ರಮುಖರು ತಮ್ಮ ಮುಂದಿನ ರಾಜಕೀಯ ಅಸ್ತಿತ್ವದ ಬಗ್ಗೆ ಗಂಭೀರ ವಾಗಿ ಆಲೋಚಿಸುವಂತಾಗಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹವಾ ಮಾಯವಾಗಿ ಬಹಳ ವರ್ಷಗಳೇ ಆಗಿವೆ. ಇನ್ನು ಶಿವಸೇನೆ ಇಬ್ಭಾಗದಿಂದ ಸಂಪೂರ್ಣ ಲಾಭವನ್ನು ಹೊಂದಿದ್ದು ಬಿಜೆಪಿ. ಬಾಳ್ ಠಾಕ್ರೆ ವರ್ಚಸ್ಸು ಮತ್ತು ಶಕ್ತಿಯ ಮೇಲೆ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಮತ್ತು ಮುಂಬಯಿ ಮಹಾನಗರಪಾಲಿಕೆ ವ್ಯಾಪ್ತಿಯ ರಾಜಕೀಯ ಅಖಾಡದಲ್ಲಿ ಮುಕುಟವಿಲ್ಲದ ಮಹಾರಾಜನಂತೆ ಮಿಂಚಿದ್ದು ವಾಸ್ತವ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂಬಯಿ ಜನತೆ ಮೇಲೆ ಡಬಲ್ ಎಂಜಿನ್ ಸರ್ಕಾರದ ದಟ್ಟ ಪರಿಣಾಮ ಬೀರಿರುವುದನ್ನು ತಳ್ಳಿಹಾಕಲಾಗದು.
ದೇಶದ ನಾಲ್ಕು ಮಹಾನಗರಪಾಲಿಕೆಗಳಾದ ದಿಲ್ಲಿ, ಮುಂಬಯಿ ಮದ್ರಾಸ್, ಕೋಲ್ಕತ್ತ ಅಲ್ಲದೆ ಹೈದರಾಬಾದ್ ಮತ್ತು ಬೆಂಗಳೂರನ್ನೂ ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂಬ ಪರಮಾಶಯ ಬಿಜೆಪಿಯದ್ದು. ಎರಡು ವಾರಗಳ ಹಿಂದೆಯಷ್ಟೇ ತಿರುವನಂತ ಪುರದ ಪಾಲಿಕೆ ಬಿಜೆಪಿ ಕೈವಶವಾಗಿದ್ದು ನಗರ ಪ್ರದೇಶದ ಜನತೆ ಮತ್ತು ಮತದಾರರ ಒಲವು ಬಿಜೆಪಿಯತ್ತ ಇದೆ ಎಂಬುದು ಈ ಫಲಿತಾಂಶದಿಂದ ವ್ಯಕ್ತವಾಗುವ ಸಂಗತಿ. ಅತ್ತ ಮುಂಬಯಿ ಫಲಿತಾಂಶ ಹೊರಬೀಳುತಿದ್ದಂತೆ ಕೇಂದ್ರ ಮಂತ್ರಿ ಹಾಗೂ ಜೆಡಿಎಸ್ ರೂವಾರಿ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಗಮನ ಸೆಳೆಯುವಂತಹದು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪುಗೊಂಡಿರುವ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಗಳಲ್ಲಿ ಕೂಡಾ ಬಿಜೆಪಿ -ದಳ ಮೈತ್ರಿ ಯಶಸ್ವಿಯಾಗಬೇಕೆಂಬ ಲೆಕ್ಕಾಚಾರ ಈಗ ಶುರುವಾಗಿದೆ. ಒಟ್ಟಿನಲ್ಲಿ ಈಗ ಮುಂಬಯಿ ಪಾಲಿಕೆ ಫಲಿತಾಂಶದ ಬಳಿಕ ಗ್ರೇಟರ್ ಬೆಂಗಳೂರಿನಲ್ಲಿಯೂ ಜೈತ್ರಯಾತ್ರೆಗೆ ದೋಸ್ತಿ ಬಣ ಹವಣಿಸಿದೆ.


