ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಎರಡನೇ ದಿನದ ಉತ್ಖನನ ಕಾರ್ಯ ಅಂತ್ಯಗೊಂಡಿದ್ದು, ಪ್ರಾಚೀನ ಕಾಲದ ಶಿಲೆ ಹಾಗೂ ಅಪರೂಪದ ವಸ್ತುಗಳು ಪತ್ತೆಯಾಗಿವೆ.
ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉತ್ಖನನ ನಡೆದಿದ್ದು, ಅಧಿಕಾರಿಗಳು ಸೇರಿದಂತೆ 33 ಮಂದಿ ಭಾಗಿಯಾಗಿದ್ದರು. ಉತ್ಖನನ ಜಾಗವನ್ನು ನಿರ್ಬಂಧಿತ ಪ್ರದೆಶ ಎಂದು ಘೋಷಿಸಲಾಗಿದ್ದು, ಒಂದು ವೇಳೆ ಭಾರೀ ಪ್ರಮಾಣದಲ್ಲಿ ಅಪರೂಪದ ವಸ್ತುಗಳು ಸಿಕ್ಕಿದರೆ ಇಡೀ ಗ್ರಾಮವನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದುವರೆಗೆ ಪತ್ತೆಯಾದ ವಸ್ತುಗಳು ದೇವಸ್ಥಾನಕ್ಕೆ ಸಂಬಂಧಿಸಿದ ಕುರುಹು ಆಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಶಿಲೆ ಪತ್ತೆಯಿಂದ ಸ್ಥಳೀಯರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ವಿರೋಧ ಮತ್ತು ನಿರ್ಬಂಧಗಳು: ಉತ್ಖನನಕ್ಕೆ ವೀರಭದ್ರೇಶ್ವರ ದೇವಸ್ಥಾನ ಜಾತ್ರಾ ಕಮಿಟಿ ಹಾಗೂ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ಮುಂದಿನ ತಿಂಗಳು ನಡೆಯಲಿರುವ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯ ಹಿನ್ನೆಲೆಯಲ್ಲಿ, ಉತ್ಖನನ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಿರುವುದರಿಂದ ಜಾತ್ರೆ ನಡೆಸುವುದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಗದಗ ಜಿಲ್ಲಾಧಿಕಾರಿ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಸಿ.ಎನ್. ಶ್ರೀಧರ್ ಅವರು, ಪುರಾತತ್ವ ಇಲಾಖೆಯ ಶಿಫಾರಸಿನ ಮೇರೆಗೆ ಈ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಸಾರ್ವಜನಿಕರ ಪ್ರವೇಶ, ಛಾಯಾಚಿತ್ರ/ವಿಡಿಯೋ ಚಿತ್ರೀಕರಣಕ್ಕೆ ಸಂಪೂರ್ಣ ನಿಷೇಧ ಹೇರಿದ್ದಾರೆ.


