Saturday, January 17, 2026
Menu

ಭೀಮಣ್ಣ ಖಂಡ್ರೆ ಅಂತಿಮ ದರ್ಶನ ಪಡೆಯಲಿರುವ ಸಿಎಂ, ಸಂಜೆ ಅಂತ್ಯಕ್ರಿಯೆ

bhimanna khandre

ಬೆಂಗಳೂರು/ಬೀದರ್: ಭಾಲ್ಕಿ ಕ್ಷೇತ್ರದ ಹಿರಿಯ ಜೀವಿ, ಶತಾಯಿಷಿ ಡಾ.ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಇಂದು ಸಂಜೆ ಭಾಲ್ಕಿಗೆ ಆಗಮಿಸಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ಹೊರಡಲಿರುವ ಅವರು ಮಧ್ಯಾಹ್ನ 3.30ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಸಂಜೆ 4.30ಕ್ಕೆ ಭಾಲ್ಕಿ ಹೊರವಲಯದ ಚಿಕ್ಕಲಚಂದಾ ಸಮೀಪದ ಶಾಂತಿ ಧಾಮದಲ್ಲಿ ನಡೆಯಲಿರುವ ಭೀಮಣ್ಣ ಖಂಡ್ರೆಯವರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.

ಇಂದು ಸಂಜೆ ಅಂತ್ಯಕ್ರಿಯೆ:

ಶನಿವಾರ ಬೆಳಗ್ಗೆ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಭಾಲ್ಕಿಯ ಗಾಂಧಿ ಗಂಜ್ ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು, ಸಂಜೆ ಭಾಲ್ಕಿಯ ಚಿಕಲ್ ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಪತ್ನಿ ಲಿಂಗೈಕ್ಯ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನರವೇರಲಿವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಭೀಮಣ್ಣ ಖಂಡ್ರೆ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿದೆ. ತಮ್ಮ ಕ್ಷೇತ್ರ ಭಾಲ್ಕಿ ಮತ್ತು ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ರೈತರ ಕಲ್ಯಾಣಕ್ಕಾಗಿ, ಬಡವರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರ್ಮಯೋಗಿ ಭೀಮಣ್ಣ ಖಂಡ್ರೆ ಅವರ ದರ್ಶನಕ್ಕೆ ಸಹಸ್ರಾರು ಜನರು ತಂಡೋಪ ತಂಡವಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿ, ಅಶ್ರುತರ್ಪಣ ನೀಡುತ್ತಿದ್ದಾರೆ.

ಭಾಲ್ಕಿಯ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮಳಿಗೆಗಳನ್ನು ಮುಚ್ಚಿ ತಮ್ಮ ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ದುಡಿದ ಮೇರು ನಾಯಕನಿಗೆ ಗೌರವ ಸಲ್ಲಿಸಿದರು.

ಭೀಮಣ್ಣ ಪಾರ್ಥಿವ ಶರೀರಕ್ಕೆ ಮಹಾರತಿ: ಇಂದು ಬೆಳಗ್ಗೆ ಗಾಂಧಿಗಂಜ್​ನ ಖಂಡ್ರೆ ನಿವಾಸದಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಮಹಾರತಿ ಬೆಳಗಿದರು. ಪವಿತ್ರ ಆತ್ಮವಿದ್ದ ದೇಹ ಶುದ್ಧಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ಮಾಡಿ, ಭಸ್ಮಧಾರಣೆ, ರುದ್ರಾಕ್ಷಿ ಮಾಲೆ ತೊಡಿಸಿ, ಧೂಪ, ದೀಪಾರತಿ, ಪಾದಪೂಜೆ ಮಾಡಿಸಿದರು. ಪುತ್ರರಾದ ಈಶ್ವರ ಬಿ ಖಂಡ್ರೆ, ಅಮರ ಕುಮಾರ್ ಖಂಡ್ರೆ, ಪುತ್ರಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

Related Posts

Leave a Reply

Your email address will not be published. Required fields are marked *