ಸತತ ಐದು ದಿನಗಳಿಂದ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿರುವ ಚಿನ್ನ- ಬೆಳ್ಳಿ ದರ ಶುಕ್ರವಾರ ದಿಢೀರ್ ಕುಸಿತ ದಾಖಲಿಸಿದೆ. ಇದರಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 4,027 ರೂ. ಇಳಿಕೆ ಕಂಡಿದೆ. ಇದರಿಂದ ಕೆಜಿಗೆ ಬೆಳ್ಳಿ ದರ 2,87,550 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದ್ದು, 1,42,601 ರೂ. ಇಳಿಕೆಯಾಗಿದೆ.
ಎಂಸಿಎಕ್ಸ್ ಪ್ರಕಾರ, ಮಾರ್ಚ್ ವಿತರಣೆಯ ಬೆಳ್ಳಿ ಬೆಲೆಯಲ್ಲಿ 4,027 ರೂ ಅಂದರೆ ಶೇ.1.38ರಷ್ಟು ಇಳಿಕೆ ಮೂಲಕ ಕೆಜಿಗೆ 2,87,550 ರೂ ದಾಖಲಾಗಿದ್ದು, 9,890 ಲಾಟ್ಗಳ ವಹಿವಾಟು ನಡೆಸಿದೆ. ಹಿಂದಿನ ದಿನವಾದ ಗುರುವಾರ ಬೆಳ್ಳಿ ಭಾರಿ ಏರಿಕೆ ಕಾಣುವ ಮೂಲಕ ಕೆಜಿಗೆ 2,92,960 ಸರ್ವಕಾಲಿಕ ದಾಖಲೆ ಬರೆದಿತ್ತು. 3 ಲಕ್ಷ ತಲುಪುವ ಮುನ್ಸೂಚನೆ ನೀಡಿತ್ತು.
ಗುರುವಾರ ಮಹಾರಾಷ್ಟ್ರದಲ್ಲಿ ನಾಗರಿಕ ಚುನಾವಣೆಗಳ ಕಾರಣ ಬೆಳಗಿನ ಅವಧಿಯಲ್ಲಿ ಎಂಸಿಎಕ್ಸ್‌ನಲ್ಲಿ ವ್ಯಾಪಾರ ಸ್ಥಗಿತಗೊಂಡು ಸಂಜೆಯ ಅವಧಿಯಲ್ಲಿ ವಹಿವಾಟು ಪುನಾರಂಭವಾಗಿತ್ತು. ಶುಕ್ರವಾರ ಚಿನ್ನದ ಬೆಲೆಯಲ್ಲಿ ಶೇ. 0.36 ರಷ್ಟು ಇಳಿಕೆ ಕಾಣುವ ಮೂಲಕ 1,42,601 ರೂ.ಗೆ ತಲುಪಿದೆ.
ಇರಾನ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಟ್ ಮೃದು ನಿಲುವು ತಾಳಿದ್ದರಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಗೆ ಕಾರಣ ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಸರಕುಗಳ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಏಷ್ಯಾದ ವಹಿವಾಟಿನ ಸಮಯದಲ್ಲಿ ಬೆಳ್ಳಿ ಮತ್ತು ಚಿನ್ನ ಎರಡೂ ಸುಧಾರಿಸಿದವು. ಕಾಮೆಕ್ಸ್‌ನಲ್ಲಿ, ಮಾರ್ಚ್ ಒಪ್ಪಂದದ ಬೆಳ್ಳಿ ಪ್ರತಿ ಔನ್ಸ್‌ಗೆ 1.93 ಡಾಲರ್ ಅಥವಾ ಶೇಕಡಾ 2.10 ರಷ್ಟು ಇಳಿಕೆ ಕಾಣುವ ಮೂಲಕ 90.41 ಡಾಲರ್‌ಗೆ ತಲುಪಿತು. ಬುಧವಾರ ಬೆಳ್ಳ ಔನ್ಸ್‌ಗೆ 93.56 ಡಾಲರ್‌ಗೆ ಏರಿಕೆ ಕಂಡಿತ್ತು.
ಫೆಬ್ರವರಿ ವಿತರಣೆಯ ಚಿನ್ನದ ಫ್ಯೂಚರ್‌ಗಳು ಸಹ ಪ್ರತಿ ಔನ್ಸ್‌ಗೆ 21.9 ಡಾಲರ್ ಅಥವಾ ಶೇಕಡಾ 0.47 ರಷ್ಟು ಕುಸಿತ ಕಂಡು 4,601.8 ಡಾಲರ್‌ಗೆ ತಲುಪಿದೆ. ಜನವರಿ 14ರಂದು ಚಿನ್ನ ಸಾರ್ವಕಾಲಿಕ ದಾಖಲೆ ಕಂಡಿದ್ದು ಔನ್ಸ್‌ಗೆ 4,650.50 ಡಾಲರ್‌ಗೆ ಮುಟ್ಟಿತ್ತು.
ಅಮೆರಿಕದ ಇತ್ತೀಚಿನ ಸ್ಥೂಲ ಆರ್ಥಿಕ ದತ್ತಾಂಶವು ವರ್ಷದ ಮೊದಲಾರ್ಧದಲ್ಲಿ ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಗಳನ್ನು ತಡೆಹಿಡಿದಿದೆ. ಇದು ಡಾಲರ್ ಸೂಚ್ಯಂಕವನ್ನು ಗರಿಷ್ಠ ಮಟ್ಟಕ್ಕೆ ತಳ್ಳಿದೆ.


