ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವದ 2ನೇ ದಿನ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 135 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿವಿಧ ಮಠಾಧಿಪತಿಗಳ ದಿವ್ಯ ಸಾನ್ನಿಧ್ಯದಲ್ಲಿ ಶುಕ್ರವಾರ ಸಾಮೂಹಿಕ ವಿವಾಹ ನಡೆಯಿತು. 135 ಜೋಡಿಗಳ ಪೈಕಿ 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 21 ಹಿಂದುಳಿದ ವರ್ಗ, 11 ಅಂತರಜಾತಿ ಹಾಗೂ 4 ವೀರಶೈವ ಲಿಂಗಾಯತ ಜೋಡಿಗಳು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವಜೀವನಕ್ಕೆ ಕಾಲಿಟ್ಟಿದ್ದಾರೆ.
ತಮಿಳುನಾಡಿನ 5 ಜೋಡಿಗಳು, 3 ವಿಶೇಷಚೇತನ ಜೋಡಿಗಳು ಹಾಗು 3 ಜೋಡಿ ಮರುಮದುವೆ ವಿಶೇಷ ಗಮನ ಸೆಳೆಯಿತು.
2000ರಿಂದ 2025ರವರಗೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜರುಗಿರುವ ಸಾಮೂಹಿಕ ವಿವಾಹದಲ್ಲಿ 3,346 ಜೋಡಿಗಳು ಸತಿಪತಿಗಳಾಗಿದ್ದು, ಪ್ರತಿ ತಿಂಗಳು ನಡೆಯುವ ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 2009ರಿಂದ 2025ರವರೆಗೆ 540 ಜೋಡಿಗಳು ದಂಪತಿಗಳಾಗಿದ್ದಾರೆ. ಒಟ್ಟಾರೆ, ಶ್ರೀ ಸುತ್ತೂರು ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 3,886 ಜೋಡಿಗಳು ವಿವಾಹವಾಗಿದ್ದಾರೆ.
ನವಜೋಡಿಗಳ ಸಂಭ್ರಮ: ಕಪಿಲಾ ನದಿ ತೀರದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿ ದಿನದಂದು ಆರು ದಿನಗಳ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತದೆ. ಮರುದಿನ ತ್ರಯೋದಶಿಯಂದು ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯುವುದು ವಾಡಿಕೆ.
ವರನಿಗೆ ಪಂಚೆ, ಶರ್ಟ್, ವಲ್ಲಿ ಹಾಗೂ ವಧುವಿಗೆ ಸೀರೆ, ರವಿಕೆ, ಮಾಂಗಲ್ಯ, ಕಾಲುಂಗುರಗಳನ್ನು ನೀಡಲಾಯಿತು. ಶುಭ ಮುಹೂರ್ತ ಆರಂಭ ಆಗುತ್ತಿದ್ದಂತೆ ಪೂಜ್ಯರು ಮತ್ತು ಗಣ್ಯರು ಮಾಂಗಲ್ಯ ವಿತರಿಸಿದರು. ಮಂಗಳವಾದ್ಯ ಮೊಳಗುತ್ತಿದ್ದಂತೆ ವರ-ವಧುವಿಗೆ ತಾಳಿ ಕಟ್ಟಿದರು.
ಒಟ್ಟಾರೆ ಜಾತ್ರೆಯಲ್ಲಿ ನವ ಜೋಡಿ ಹೊಸ ಬದುಕು ಆರಂಭಿಸಿದ್ದು, ನೆರೆದ ಜನರು ಶುಭ ಹಾರೈಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳೊಂದಿಗೆ, ಸಚಿವ ರಾಮಲಿಂಗಾರೆಡ್ಡಿ, ಶಾಸಕ ಆರ್.ವಿ. ದೇಶಪಾಂಡೆ, ಸಚಿವ ಮಂಕಾಳ ಎಸ್.ವೈದ್ಯ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕ ನಂಜೇಗೌಡ, ಹಂಪನಗೌಡ, ಬಿಷಪ್ ರೆ.ಫಾ ಫ್ರಾನ್ಸಿಸ್ ಸೆರಾವ್ ಎಸ್.ಜೆ, ರೆ.ಫಾ ಡಾ.ಗೇಬ್ರಿಯಲ್ ಮಾರ್ ಗ್ರೆಗೋರಿಯಸ್ ಇದ್ದರು.


