1962ರಲ್ಲಿ ಭಾರತ- ಚೀನಾ ಯುದ್ಧ ನಡೆಯುವ ವೇಳೆ ದೇಶದ ರಕ್ಷಣೆಗಾಗಿ 600 ಕೆಜಿ ಚಿನ್ನ ಹಾಗೂ ಮೂರು ಖಾಸಗಿ ವಿಮಾನವನ್ನು ದಾನವಾಗಿ ನೀಡಿದ್ದ ದರ್ಭಾಂಗ ರಾಜಮನೆತನದ ಕೊನೆಯ ರಾಣಿ ಕಾಮಸುಂದರಿ ದೇವಿ( 96) ನಿಧನರಾಗಿದ್ದಾರೆ.
ಮಹಾರಾಜ ದಿ. ಕಾಮೇಶ್ವರ ಸಿಂಗ್ ಅವರ ಮೂರನೇ ಪತ್ನಿಯಾಗಿದ್ದ ರಾಣಿ ಕಾಮಸುಂದರಿ ಅವರಿಗೆ ಮಕ್ಕಳಿರಲಿಲ್ಲ. 1932ರಲ್ಲಿ ಜನಿಸಿದ್ದ ರಾಣಿಗೆ ಎಂಟನೇ ವಯಸ್ಸಿನಲ್ಲಿ ಮದುವೆಯಾಗಿತ್ತು. 1962ರಲ್ಲಿ ಪತಿ ತೀರಿಕೊಂಡ ನಂತರ 64 ವರ್ಷ ಒಂಟಿಯಾಗಿ ಜೀವನ ನಡೆಸಿದ್ದರು. ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಕಾಮಸುಂದರಿ ದೇವಿ ಕೊಡುಗೈ ದಾನಿಯಾಗಿ ಹೆಸರಾಗಿದ್ದರು. 1962ರಲ್ಲಿ ಭಾರತ- ಚೀನಾ ನಡುವೆ ಯುದ್ಧ ಸಂದರ್ಭದಲ್ಲಿ ನೆರವು ಕೇಳಿದಾಗ ಮುಂದೆ ಬಂದಿದ್ದ ರಾಣಿ 600 ಕೆಜಿ ಚಿನ್ನ ಮತ್ತು ಮೂರು ವಿಮಾನವಲ್ಲದೆ 90 ಎಕರೆ ಭೂಮಿಯನ್ನೂ ನೀಡಿದ್ದರು.
ಶಿಕ್ಷಣ ಮತ್ತು ಕೈಗಾರಿಕೆಗಳಿಗೂ ಅಪಾರ ಕೊಡುಗೆ ನೀಡಿದ್ದಾರೆ. ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾನಿಲಯವು ಇದೇ ರಾಜಮನೆತನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಕಲ್ಕತಾ ವಿವಿ, ಆಲಿಗಢ ಮುಸ್ಲಿಂ ವಿವಿ, ಪಟನಾ ವಿಶ್ವವಿದ್ಯಾನಿಲಯಗಳಿಗೂ ಈ ಕುಟುಂಬ ದೊಡ್ಡ ಆರ್ಥಿಕ ನೆರವು ನೀಡಿದೆ.


