Menu

ರಾಜ್ಯಕ್ಕೆ ವಾಪಸ್ ಆಗ್ತಾರಾ ಎಚ್‌ಡಿಕೆ

ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆ, ಜಿಲ್ಲೆ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳಿಗೆ ಗೆಲುವು ಸಾಧಿಸಿಕೊಡುವ ನಿಟ್ಟಿನಲ್ಲಿ ನೀಲ ನಕ್ಷೆಯನ್ನು ಸಿದ್ದಪಡಿಸಿ ಕ್ರಿಯಾ ಯೋಜನೆಯನ್ನೂ ತಯಾರಿಸಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಾಳೆಯದಲ್ಲಿ ಈ ದಿಶೆಯಲ್ಲಿ ನಿಶ್ಚಿತ ಹಾಗೂ ನಿಖರ ಬ್ಲೂಪ್ರಿಂಟ್ ತಯಾರಿಕೆಗೆ ಹಲವು ಹತ್ತು ತೊಡಕುಗಳು ಎದುರಾಗಿವೆ.

ಕೇಂದ್ರ ಮಂತ್ರಿಯೂ ಆದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಮರಳುವರೇ ಎಂಬ ಪ್ರಶ್ನೆ ಈಗ ನಾಡಿನ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಬೇಕೆಂಬ ಆಗ್ರಹ ಮತ್ತು ಒತ್ತಾಯವೀಗ ನಾಡಿನ ಪಕ್ಷದ ಬಹುತೇಕ ಕಾರ್ಯಕರ್ತರ ಅಭಿಲಾಷೆ.ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಮೂರು ವರ್ಷಗಳ ಹಿಂದೆ ರಾಷ್ಟ್ರ ರಾಜಕಾರಣದತ್ತ ಮುಖಮಾಡಿದ್ದು, ಈಗ ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಈಗಲೂ ಚಿಂತೆಗೀಡು ಮಾಡಿರುವ ಸಂಗತಿ.

ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಹೊಂದಿರುವುದು ವಾಸ್ತವ. ಈ ಹೊಂದಾಣಿಕೆಯಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಈ ಮೈತ್ರಿಯಿಂದ ಒಂದಷ್ಟು ರಾಜಕೀಯ ಲಾಭವಾಗಿದ್ದೂ ನಿಜ. ಈ ಕಾರಣದಿಂದಲೇ ಇಂದು ಕೇಂದ್ರದಲ್ಲಿ ಕುಮಾರಸ್ವಾಮಿ ಅವರು ಕ್ಯಾಬಿನೆಟ್ ಮಂತ್ರಿಯಾಗಲು  ಕಾರಣವಾಯಿತು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ದಳ- ಕಮಲ ಮೈತ್ರಿ ನಿಜಕ್ಕೂ ರಾಜ್ಯ ಮಟ್ಟದ ಬಿಜೆಪಿ ಮುಖಂಡರಿಗೆ ಮನಪೂರ್ವಕವಾಗಿ ಇಷ್ಟವಿದೆಯೇ ಎಂಬ ಪ್ರಶ್ನೆ ನಿಗೂಢ. ಎರಡೂ ಕಡೆಯ ಪ್ರಮುಖ ನಾಯಕರು ಮತ್ತು ಬಹುತೇಕ ಕಾರ್ಯಕರ್ತರಿಗೆ ಇದುವರೆಗಿನ ಮೈತ್ರಿಯಿಂದ ಯಾವ ಪ್ರಯೋಜನವೂ ಆಗಿಲ್ಲ. ಹಳೇ ಮೈಸೂರಿನ ಭಾಗದಲ್ಲಿ (ಬೆಂಗಳೂರು ನಗರ ಹೊರತುಪಡಿಸಿ) ಮೈಸೂರು , ತುಮಕೂರು ಮಂಡ್ಯ , ಹಾಸನ, ಕೋಲಾರ, ರಾಮನಗರ, ಚಿಕ್ಕಬಳ್ಳಾಪರ ಜಿಲ್ಲೆಗಳಲ್ಲಿ ಬಿಜೆಪಿಯ ರಾಜಕೀಯ ಶಕ್ತಿ ಎಷ್ಟರಮಟ್ಟಿಗೆ ವೃದ್ಧಿಯಾಗಿದೆ ಎಂಬುದು ದಿಲ್ಲಿ ಕಮಲದಳದ ವರಿಷ್ಠರ ಗಂಭೀರ ಪ್ರಶ್ನೆ. ಈ ಪ್ರಶ್ನೆಗೆ ದಿಲ್ಲಿ ಬಿಜೆಪಿ ಹೈಕಮಾಂಡಿಗೆ ನಾಡಿನ ಬಿಜೆಪಿ ನಾಯಕರು ಇದುವರೆಗೆ ನೀಡಿದ ಉತ್ತರಗಳಾವುದೂ ಸಂಪೂಣ ತೃಪ್ತಿ ನೀಡಿಲ್ಲ.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ವೈಖರಿಯನ್ನು ಪ್ರಶ್ನಿಸಿ ಮೈತ್ರಿ ಪಕ್ಷಗಳು ಇದುವರೆಗೆ ಒಂದೂ ಪರಿಣಾಮಕಾರಿಯಾದ ಜನಾಂದೋಲನವನ್ನು ಕೈಗೆತ್ತಿಕೊಳ್ಳಲು ಆಗಿಲ್ಲ ಎಂಬುದು ದಿಲ್ಲಿ ಹೈಕಮಾಂಡ್ ಕೊರಗು. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡೆತ್ತಿನ ಸರ್ಕಾರ ಕಳೆದ ಮೂರು ವರ್ಷಗಳಿಂದಲೂ ನಿರಾತಂಕವಾಗಿ ಆಡಳಿತವನ್ನು ಮುನ್ನಡೆಸಿದ್ದು ಈ ಜೋಡೆತ್ತುಗಳನ್ನು ಕಟ್ಟಿ ಹಾಕಲು ಮೈತ್ರಿ ಕೂಟಕ್ಕೆ ಇದುವರೆಗೆ ಯಾಕೆ ಸಾಧ್ಯವಾಗಿಲ್ಲ ಎಂಬುದು ಹೈಕಮಾಂಡ್ ಪ್ರಶ್ನೆ.

ಈಗ ರಾಜ್ಯದಲ್ಲಿ ಎರಡು ಪ್ರಮುಖ ಚುನಾವಣೆಗಳು ಎದುರಾಗಲಿವೆ. ಒಂದು ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆ. ಎರಡು ಜಿಲ್ಲೆ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು. ಇವೆರೆಡೂ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷವು ತನ್ನ ಅಭ್ಯರ್ಥಿಗಳಿಗೆ ಗೆಲುವು ಸಾಧಿಸಿಕೊಡುವ ನಿಟ್ಟಿನಲ್ಲಿ ನೀಲ ನಕ್ಷೆಯನ್ನು ಸಿದ್ದಪಡಿಸಿ ಕ್ರಿಯಾ ಯೋಜನೆಯನ್ನೂ ತಯಾರಿಸಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಾಳೆಯದಲ್ಲಿ ನಿಶ್ಚಿತ ಮತ್ತು ನಿಖರ ಬ್ಲೂಪ್ರಿಂಟ್ ಇನ್ನೂ ಸಿದ್ದವಾಗಿಲ್ಲ.  ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕತರ ನಡುವೆ ಹೊಂದಾಣಿಕೆಯೇ ಇಲ್ಲದಿರುವಾಗ ಮುಂದಿನ ಈ ಎರಡೂ ಚುನಾವಣೆಗಳಲ್ಲಿ ದೋಸ್ತಿ ಪಕ್ಷ ಮೇಲುಗೈ ಸಾಧಿಸುವುದಾದರೂ ಹೇಗೆ ? ದಿಲ್ಲಿಯಲ್ಲಿ ಕುಳಿತಿರುವ ಕುಮಾರಸ್ವಾಮಿ ಇಲ್ಲಿಗೆ ಬಂದು ಇವೆಲ್ಲವನ್ನೂ ನೋಡದೆ ಬಗೆಹರಿಸುವುದು ಅನಿವಾರ್ಯ ಎಂಬುದು ದಳಾಂತರಂಗದ ಮಾತು.

Related Posts

Leave a Reply

Your email address will not be published. Required fields are marked *