Thursday, January 15, 2026
Menu

ಪೌರಾಯುಕ್ತೆ ನಿಂದಿಸಿ ಬೆದರಿಕೆ: ರಾಜೀವ್‌ ಗೌಡಗೆ ಕೆಪಿಸಿಸಿ ನೋಟಿಸ್‌

rajeev gowda

ಬೆಂಗಳೂರು: ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಯನ್ನು ನಿಂದಿಸಿ ಬೆದರಿಕೆ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡಗೆ ಕೆಪಿಸಿಸಿ ನೋಟಿಸ್‌ ಜಾರಿ ಮಾಡಿದೆ.

ಘಟನೆಯ ಬಗ್ಗೆ ಕಾರಣ ಕೇಳಿ‌ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ನೋಟಿಸ್‌ ನೀಡಿದ್ದಾರೆ. 7 ದಿನಗಳ ಒಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ:

ತಾವು ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮದ ಸಭೆಯೊಂದಕ್ಕೆ ಸಂಬಂಧಪಟ್ಟಂತೆ ಬ್ಯಾನರ್‌ಗಳನ್ನು ಹಾಕಿರುವ ಬಗ್ಗೆ ಪೌರಾಯುಕ್ತರೊಂದಿಗೆ ದೂರವಾಣಿ ಸಂಭಾಷಣೆ ನಡೆಸುವಾಗ ವ್ಯಕ್ತಿಗತ ನಿಂದನೆ ಮಾಡಿ, ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿರುವ ವಿಷಯಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ.

ತಮ್ಮ ಈ ವರ್ತನೆ ಹಾಗೂ ತಾವು ಸದರಿ ನಗರಸಭೆ ಪೌರಾಯುಕ್ತರೊಂದಿಗೆ ಆಡಿರುವ ಮಾತುಗಳಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತದೆ. ತಾವು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ್ದೀರೆಂದು ತಿಳಿದು ನೋಟಿಸ್‌ ನೀಡಲಾಗಿದೆ. ಈ ನೋಟಿಸ್‌ ನೀಡಿದ ಒಂದು ವಾರದ ಒಳಗಾಗಿ ಸೂಕ್ತ ಸಮಜಾಯಿಷಿ ನೀಡಬೇಕು. ಇಲ್ಲವಾದರೆ, ಈ ಬಗ್ಗೆ ಶಿಸ್ತು ಸಮಿತಿಯು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಜಿ.ಸಿ.ಚಂದ್ರಶೇಖರ್‌ ಎಚ್ಚರಿಸಿದ್ದಾರೆ.

ರಾಜೀವ್ ಗೌಡ ಪರಾರಿ:

ಪೌರಾಯುಕ್ತೆ ಅಮೃತ ಗೌಡಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡ ಪರಾರಿಯಾಗಿದ್ದಾರೆ. ಅಮೃತಗೌಡ ಮತ್ತು ಶಿಡ್ಲಘಟ್ಟ ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ ದೂರಿನ ಮೇರೆಗೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್‌ ಗೌಡ ಎರಡು ಮೊಬೈಲ್‌ ಗಳನ್ನು ಸ್ವಿಚ್‌ ಆಫ್‌ ಮಾಡಿ ನಾಪತ್ತೆಯಾಗಿದ್ದಾರೆ.

ಬಂಧನಕ್ಕೆ ಶೋಧ:

ಈಗ ರಾಜೀವ್ ಗೌಡ ಬಂಧನಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಎರಡು ತಂಡಗಳನ್ನು ನೇಮಿಸಿದ್ದು ಸೆನ್‌ ಪೊಲೀಸರು ಈಗ ಶೋಧ ನಡೆಸುತ್ತಿದ್ದಾರೆ.

ಪೌರಾಯುಕ್ತೆ ಅಮೃತ ಗೌಡ ನೀಡಿದ ದೂರಿನ ಅನ್ವಯ ಸೆಕ್ಷನ್ 132 – ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಬೆದರಿಕೆ,351(3) – ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ, ಮಹಿಳೆಯ ಚಾರಿತ್ರ್ಯವಧೆ ಅಪರಾಧಕ್ಕೆ ಪ್ರಚೋದನೆ ಅಥವಾ ಪ್ರೇರಣೆ ಸೆಕ್ಷನ್ 224 ಸರ್ಕಾರಿ ನೌಕರನಿಗೆ ದೈಹಿಕ ಅಥವಾ ಮಾನಸಿಕವಾಗಿ ಗಾಯ ಮಾಡುವ ಬೆದರಿಕೆ,ಸೆಕ್ಷನ್ 352 ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಅವಮಾನದಡಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *