Thursday, January 15, 2026
Menu

ಮಲ ಹೊರುವ ಪದ್ಧತಿ ನಿಷೇಧ ಪರಿಷ್ಕೃತ ವರದಿ ಸಲ್ಲಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದಲ್ಲಿ ಮಲ ಹೊರುವ ಪದ್ಧತಿ ನಿಷೇಧ ಕಾಯಿದೆ, ಅನುಷ್ಠಾನ ಮತ್ತು ಪುನರ್ವಸತಿ ಕಲ್ಪಿಸಿರುವುದಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತ ಪರಿಷ್ಕೃತ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್  ಸೂಚನೆ ನೀಡಿದೆ.

ಮಲ ಹೊರುವ ಪದ್ದತಿ ನಿಷೇಧವಿದ್ದರೂ ಮನುಷ್ಯದಿಂದ ಮಲ ಗುಂಡಿಗಳ ಸ್ವಚ್ಛಗೊಳಿಸಲು ಬಳಕೆ ಮಾಡುತ್ತಿರುವ ಕ್ರಮ ಪ್ರಶ್ನಿಸಿ, ಎಐಸಿಸಿಟಿಯು ಕರ್ನಾಟಕ ಘಟಕ ಹಾಗೂ ಇದೇ ವಿಚಾರವಾಗಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಜೊತೆಗೆ, ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಜೀವಂತವಾಗಿರುವ ಕುರಿತು ಮಾಧ್ಯಮ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ, ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ, ವಿಚಾರಣೆ ವೇಳೆ, ಎಐಸಿಸಿಟಿಯು ಕರ್ನಾಟಕ ಘಟಕ ಪರ ವಕೀಲರು, ದೇಶದಲ್ಲಿ ಮಲ ಹೊರುವ ಪದ್ದತಿ ನಿಷೇಧಕ್ಕೆ ಸಂಬಂಧಿಸಿದಂತೆ ಬಲರಾಂಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹಲವು ಮಾರ್ಗಸೂಚಿಗಳನ್ನು ರಚನೆ ಮಾಡಿದೆ. ಪ್ರಮುಖವಾಗಿ ಮಲಗುಂಡಿ ಸ್ವಚ್ಛಗೊಳಿಸುವುದಕ್ಕಾಗಿ ಸ್ಥಳೀಯ ಸಂಸ್ಥೆಗಳು ತಂತ್ರಜ್ಞಾನ ಅಳವಡಿಸಿಕೊಂಡು ಯಂತ್ರಗಳ ಬಳಕೆ ಮಾಡಬೇಕು ಎಂಬುದಾಗಿ ಸೂಚನೆ ನೀಡಿದೆ.

ಆದರೆ, ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿ ಮಾಡಿಲ್ಲ. ಜತೆಗೆ, ಪ್ರತಿ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಟ ಒಂದು ಯಂತ್ರವಾದರೂ ಇರಬೇಕು ಎಂದು ತಿಳಿಸಲಾಗಿದೆ. ಈ ಸಂಬಂಧ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನೀಡಿದ್ದ ವರದಿಯ ಪ್ರಕಾರ ಕೇವಲ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಈ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ. ತಂತ್ರಜ್ಞಾನ ಅಳವಸಿಡಿಕೊಳ್ಳದ ಪರಿಣಾಮ ಮಲ ಗುಂಡಿಗಳ ಸ್ವಚ್ಚತೆಗೆ ಮನುಷ್ಯರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಮಲ ಹೊರುವ ವೃತ್ತಿಯಲ್ಲಿರುವ ವರನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು. ಅವರ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗಲು ವಿದ್ಯಾರ್ಥಿ ವೇತನ ನೀಡಬೇಕು ಎಂದು ಹೇಳಲಾಗಿದೆ. ಅಲ್ಲದೆ, ರಾಷ್ಟ್ರೀಯ ಸಫಾಯಿ ಕರ್ಮಚಾರಿ, ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ ದಿಂದ ಸಮೀಕ್ಷೆ ನಡೆಸಬೇಕು. ಈ ವೃತ್ತಿಯಲ್ಲಿ ತೊಡಗಿರುವವರ ಮನೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅರ್ಥಿಕ ನೆರವು ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದ್ದರಿಂದ ಸಮೀಕ್ಷೆ ನಡೆಸಬೇಕು ಎಂದು ಕೋರಿದರು. ಪ್ರಸ್ತುತ ದಿನ ಗಳಲ್ಲಿ ಪೌರ ಕಾರ್ಮಿಕರಿಂದ ಕಾಲುವೆಗಳನ್ನು ಶುದ್ಧಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಆದರೆ, ಕೆಲ ಭಾಗಗಳಲ್ಲಿ ಶೌಚಾಲಯದ ತ್ಯಾಜ್ಯವನ್ನು ಕಾಲುವೆಗಳಿಗೆ ಬಿಡುತ್ತಿದ್ದು, ಈ ವೃತ್ತಿಯಲ್ಲಿ ತೊಡಗಿರುವವರನ್ನು ಸಮೀಕ್ಷೆಯಲ್ಲಿ ಪರಿಗಣಿಸಬೇಕು ಎಂದು ಕೋರಿದರು.

ಮತ್ತೊಂದು ಅರ್ಜಿದಾರರ ಪರ ವಕೀಲರು, ಕೇಂದ್ರ, ರಾಜ್ಯ ಸರ್ಕಾರಗಳು ಸೇರಿ ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಮಲ ಗುಂಡಿಗಳನ್ನು ಸ್ವಚ್ಛಗೊಳಿಸುವುದಕ್ಕೆ ಮನುಷ್ಯರನ್ನು ನಿಯೋಜಿಸಬಾರದು ಎಂದು ತಿಳಿಸಲಾಗಿದೆ. ಆದರೆ, ಸರ್ಕಾರಗಳು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿವೆ. ಮಲ ಹೊರುವ ವೃತ್ತಿಯಲ್ಲಿರುವವರು ಅಂಗವೈಕಲ್ಯಕ್ಕೆ ತುತ್ತಾದಲ್ಲಿ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ತಿಳಿಸಲಾಗಿದೆ. ಈ ಸಂಬಂಧ ಸರ್ಕಾರ ಮಾಹಿತಿ ಒದಗಿಸಬೇಕು ಎಂದು ಕೋರಿ ದರು. ವಾದ ಆಲಿಸಿದ ನ್ಯಾಯಪೀಠ, ಮಲ ಹೊರುವ ಪದ್ದತಿ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದು ಕೊಂಡಿರುವ ಕ್ರಮಗಳ ಕುರಿತ ಪರಿಷ್ಕೃತ ವರದಿ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆ ಮುಂದೂಡಿತು.

Related Posts

Leave a Reply

Your email address will not be published. Required fields are marked *