ಕಾಂಗ್ರೆಸ್ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆ ಬದಲು ಡ್ರಗ್ ಮಾಫಿಯಾ, ಕೇರಳದಲ್ಲಿ ಕನ್ನಡಕ್ಕೆ ಅಪಮಾನ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಚರ್ಚಿಸಲು ಜನವರಿ 22 ರಿಂದ 31 ರವರೆಗೆ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಡ್ರಗ್ ಮಾಫಿಯಾ, ಕೋಗಿಲು ಕ್ರಾಸ್‌ನ ಅಕ್ರಮ ನಿವಾಸಿ ಗಳು, ಕಾಸರಗೋಡಿನಲ್ಲಿ ಕನ್ನಡಕ್ಕೆ ಅಪಮಾನ ಮೊದಲಾದವುಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು. ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ತಕರಾರಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗಿ ಚರ್ಚೆ ಮಾಡಬೇಕು. ದಾವೋಸ್‌ನಲ್ಲಿ ವಿಶ್ವ ಶೃಂಗಸಭೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹೋಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿಗೆ ಹೋಗದೆ ಸೋಮಾರಿತನ ತೋರಿದ್ದಾರೆ. ನೀತಿ ಆಯೋಗ, ಜಿಎಸ್‌ಟಿ ಸಭೆಗೆ ಚಕ್ಕರ್ ಹಾಕಿದ್ದಾರೆ. ಆರ್ಥಿಕತೆಯಲ್ಲಿ ಮೂರನೇ ಸ್ಥಾನದಲ್ಲಿರುವ ಜರ್ಮಿನಿಯ ಚಾನ್ಸಲರ್ ಬಂದಾಗ ಅವರನ್ನು ಬರಮಾಡಿಕೊಳ್ಳಲು ಹೋಗಿಲ್ಲ. ಈ ಮೂಲಕ ರಾಜ್ಯಕ್ಕೆ ಬರಬೇಕಾಗಿದ್ದ ಉದ್ಯಮಗಳು ತಪ್ಪಿಹೋಗಿದೆ. ಆದರೆ ಕುರ್ಚಿ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಬಳಿ ಹೋಗಿದ್ದಾರೆ ಎಂದರು.
ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದಾರೆ ಎಂಬ ಕಾರಣಕ್ಕೆ ವಿಶೇಷ ಅಧಿವೇಶನ ನಡೆಸಲಾಗುತ್ತಿದೆ. ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಗಾಂಧೀಜಿ ಕರೆ ಕೊಟ್ಟಿದ್ದರೂ ಅದನ್ನು ಯಾರೂ ಪಾಲಿಸಲಿಲ್ಲ. ಗೋವುಗಳ ಬಗ್ಗೆ ಅವರಿಗೆ ಭಕ್ತಿ ಭಾವನೆ ಇತ್ತು. ಗೋ ಹತ್ಯೆ ಕಾಯ್ದೆಯನ್ನು ನಾವು ತಂದಾಗ ಕಾಂಗ್ರೆಸ್ ವಿರೋಧ ಮಾಡಿತ್ತು. ಗಾಂಧೀಜಿ ಭಗವದ್ಗೀತೆ ಬಗ್ಗೆ ಹೇಳಿದ್ದರೆ, ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಲು ಕಾಂಗ್ರೆಸ್ ವಿರೋಧ ಮಾಡಿದೆ. ಗಾಂಧೀಜಿ ರಘುಪತಿ ರಾಘವ ರಾಜಾರಾಮ್ ಎಂದು ಹೇಳಿದ್ದರೆ, ಇವರು ಅಯೋಧ್ಯೆ ದೇವಾಲಯವನ್ನು ವಿರೋಧಿಸಿದ್ದಾರೆ. ಗಾಂಧೀಜಿ ಪಾನ ನಿಷೇಧಕ್ಕಾಗಿ ಹೋರಾಡಿದ್ದರೆ, ಕಾಂಗ್ರೆಸ್ ಸರ್ಕಾರ ರಸ್ತೆರಸ್ತೆಯಲ್ಲೂ ಮದ್ಯದಂಗಡಿಗಳನ್ನು ಆರಂಭಿಸಲು ಅವಕಾಶ ನೀಡಿದೆ. 2 ಕೋಟಿ ರೂ. ನೀಡಿದವ ರಿಗೆ ಬಾರ್ ಲೈಸೆನ್ಸ್ ನೀಡುತ್ತಾರೆ. ಗಾಂಧೀಜಿಯ ಯಾವುದೇ ಆಶಯ ಪಾಲಿಸದ ಇವರು ಈಗ ಗಾಂಧೀಜಿ ಬಗ್ಗೆ ಮಾತಾಡುತ್ತಾರೆ. ವಿಕಸಿತ ಭಾರತ ಎಂಬ ಹೆಸರಿನ ಬಗ್ಗೆ ಏಕೆ ಕೋಪ ಎಂದು ಪ್ರಶ್ನೆ ಮಾಡಿದರು.
ಶೇ.40 ರಷ್ಟು ಅನುದಾನ ನೀಡಬೇಕೆಂಬುದೇ ಇವರ ಸಮಸ್ಯೆ. ಸಿಎಂ ಸಿದ್ದರಾಮಯ್ಯ ಈಗ ಪಾಪರ್ ಸಿದ್ದರಾಮಯ್ಯ ಆಗಿದ್ದಾರೆ. ಎಲ್ಲ ಮುಖ್ಯಮಂತ್ರಿಗಳನ್ನು ಸೇರಿಸಿದರೆ ಅದಕ್ಕೂ ಹೆಚ್ಚು 4 ಲಕ್ಷ ಕೋಟಿ ರೂ.ಗೂ ಅಧಿಕ ಸಾಲ ಮಾಡಿದ್ದಾರೆ. ಇಷ್ಟೆಲ್ಲ ಸಮಸ್ಯೆ ಇರುವಾಗ ಅಧಿವೇಶನ ಮಾಡಿ ಜನರ ಹಣ ಪೋಲು ಮಾಡುತ್ತಿದ್ದಾರೆ. ಈ ಹಿಂದೆ ಸತ್ತವರ ಹೆಸರು ಉದ್ಯೋಗ ಖಾತ್ರಿಯಲ್ಲಿತ್ತು. ಜನರಿಗೆ ಕೆಲಸ ನೀಡದೆ ಹಿಟಾಚಿಯಿಂದ ಕೆಲಸ ಮಾಡಿಸಲಾಗುತ್ತಿತ್ತು. ನಕಲಿ ಜಾಬ್ ಕಾರ್ಡ್ ಸೃಷ್ಟಿಸಲಾಗುತ್ತಿತ್ತು. ಈಗ ಕಳ್ಳತನಕ್ಕೆ ಕಡಿವಾಣ ಹಾಕಿ ಬಯೋಮೆಟ್ರಿಕ್ ಹಾಜರಾತಿ ತರಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯಕ್ಕೆ ಜಾಲಿ ಮುಳ್ಳು ಇದ್ದಂತೆ. ಯೋಜನೆಯಲ್ಲಿ ಸುಧಾರಣೆ ಮಾಡಬೇಕೆಂದರೆ ಸಲಹೆ ನೀಡಲಿ. ಇಲ್ಲಿ ನರೇಂದ್ರ ಮೋದಿ ಅಥವಾ ವಾಜಪೇಯಿ ಎಂಬ ಹೆಸರು ನೀಡಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅವರ ಕುಟುಂಬದ ಹೆಸರಿನಲ್ಲಿ 240 ಸಂಸ್ಥೆ, ಯೋಜನೆಗಳಿವೆ. ಬಿಜೆಪಿ ಇಷ್ಟು ವರ್ಷ ಆಡಳಿತ ನಡೆಸಿದ್ದರೂ ಈ ರೀತಿ ಕುಟುಂಬದವರ ಹೆಸರು ನೀಡಿಲ್ಲ. ಕೇಂದ್ರ ಸರ್ಕಾರ 17,000 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರ 10,000 ಕೋಟಿ ರೂ. ನೀಡಬೇಕಿದೆ. ಕೇಂದ್ರದ ಪಾಲಿನಲ್ಲಿ ಕಡಿತವಾಗಿಲ್ಲ. ಆದರೆ ಇನ್ನಷ್ಟು ಹೆಚ್ಚು ಅನುದಾನ ನೀಡುವಂತೆ ಬದಲಾವಣೆ ತರಲಾಗಿದೆ. 125 ದಿನಗಳಿಗೆ ಏರಿಕೆ, ಬಯೋಮೆಟ್ರಿಕ್, ಕೃಷಿ ಕಾರ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಯೋಜನೆಯ ವೆಚ್ಚವನ್ನು ಶೇ.6 ರಿಂದ ಶೇ.9 ಕ್ಕೆ ಹೆಚ್ಚಿ ಸಲಾಗಿದೆ ಎಂದರು.
ಸರ್ಕಾರದ ಒತ್ತಡದಿಂದಾಗಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಫ್ಲೆಕ್ಸ್ ತೆಗೆದುಹಾಕಿದ್ದಕ್ಕೆ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕರೆ ಮಾಡಿ ಬೆಂಕಿ ಹಾಕುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ದ್ದಾನೆ. ಆತ ಅಶ್ಲೀಲವಾಗಿ ನಿಂದಿಸಿದ್ದಾನೆ. ಹೆಣ್ಣುಮಗಳ ಬಗ್ಗೆ ನೀಚವಾಗಿ ಮಾತನಾಡಿದ್ದಕ್ಕೆ ಆತನನ್ನು ಯಾರೂ ಖಂಡಿಸಿಲ್ಲ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶೀಯರು ಇದ್ದಾರೆ ಎಂದು ಪತ್ತೆಯಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಕಣ್ಣು ಕಾಣುತ್ತಿಲ್ಲ. ಅವರನ್ನು ಗಡೀಪಾರು ಮಾಡುವ ಬದಲು ಕರುಣೆ ತೋರುತ್ತಿದ್ದಾರೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಿ ಅವರನ್ನು ಗಡೀಪಾರು ಮಾಡಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.


