ದೇಶಗಳ ಸಾರ್ವಭೌಮತೆ ಮತ್ತು ಶಾಂತಿಯನ್ನು ಕಾಪಾಡುವುದೇ ವಿಶ್ವಸಂಸ್ಥೆಯ ಮೂಲಮಂತ್ರವಾಗಿರುವಾಗ ಭದ್ರತಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಇನ್ನೂ ಯಾಕೆ ಇರಾನ್ ಬಿಕ್ಕಟ್ಟು ವಿಚಾರದಲ್ಲಿ ಎಚ್ಚೆತ್ತುಕೊಳ್ಳುತ್ತಿಲ್ಲ? ಇರಾನ್ ದೂರು ಸಲ್ಲಿಸುವ ಮುನ್ನವೇ ಸ್ವಪ್ರೇರಣೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಉಭಯ ದೇಶಗಳ ನಡುವಣ ತಲೆದೋರಿರುವ ಉದ್ವಿಗ್ನತೆಯನ್ನು ವಿಶ್ವ ಸಂಸ್ಥೆ ಶಮನಗೊಳಿಸಬಹುದಿತ್ತು.
ಇರಾನ್ ಆಂತರಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಖೊಮೇನಿ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿದಿದೆ. ಇದೇ ವೇಳೆ ದೇಶದೊಳಗೆ ಅರಾಜಕತೆ ವಿಷಮಿಸಿದೆ ಮತ್ತು ಸಾವು-ನೋವಿನ ಸಂಖ್ಯೆ ಅಧಿಕಗೊಂಡಿದೆ. ಮಿಗಿಲಾಗಿ ಖೊಮೇನಿ ಸರ್ಕಾರದ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮುಂದುವರಿಸಿದ ಪ್ರತಿಭಟನೆಕಾರರ ಪರವಾಗಿ ಅಮೆರಿಕ ಅದ್ಯಕ್ಷ ಡೊನಾಲ್ಡ್ ಟಂಪ್ ಬಹಿರಂಗವಾಗಿ ಬೆಂಬಲ ನೀಡಿರುವುದು ಈಗ ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ. ಇದರ ಬೆನ್ನ ಹಿಂದೆಯೇ ಇರಾನ್ ದೇಶದ ಸಾರ್ವಭೌಮತೆಯ ವಿಚಾರದಲ್ಲಿ ಅಮೆರಿಕ ಅನಗತ್ಯ ಹಸ್ತ ಕ್ಷೇಪ ನಡೆಸಿದೆ ಎಂದು ಬೊಟ್ಟು ಮಾಡಿ ವಿಶ್ವ ಸಂಸ್ಥೆಗೆ ದೂರು ದಾಖಲಿಸಿದೆ. ಈ ನಡುವೆ ಇರಾನ್ ದೇಶದಲ್ಲಿ ನೆಲೆಸಿರುವ ಭಾರತೀಯರು ಕೂಡಲೇ ದೇಶವನ್ನು ತೊರೆಯಲು ಸಜ್ಜಾಗಿರಲು ಮತ್ತು ರಾಯಭಾರಿ ಕಚೇರಿ ಜೊತೆ ಸಂಪರ್ಕದಿರಲು ವಿದೇಶಾಂಗ ವ್ಯವಹಾರಗಳ ಖಾತೆ ಇಲ್ಲಿನ ಭಾರತೀಯ ನಿವಾಸಿಗಳಿಗೆ ಎಚ್ಚರಿಸಿದೆ.
ವೆನೆಜುವೆಲಾ ವಿದ್ಯಮಾನಗಳು ಸಂಭವಿಸಿದ ಬೆನ್ನಹಿಂದೆಯೇ ಕೆಲ ದಿನಗಳ ಕಾಲ ಶಮನ ಗೊಂಡಿದ್ದ ಇರಾನ್ ಹಾಗೂ ಅಮೆರಿಕದ ನಡುವಣದ ವಿರಸ ಮತ್ತೆ ಮರುಕಳಿಸಿದೆ. ಇದರಿಂದ ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧಗಳು ಸಂಪೂರ್ಣ ಹದಗೆಡುವಂತಾಗಿದೆ. ಇರಾನ್ ದೇಶದ ಸಾರ್ವಭೌಮತ್ವದಲ್ಲಿ ಅಮೆರಿಕ ವಿಪರೀತವಾಗಿ ಮೂಗು ತೂರಿಸಿ ಇಲ್ಲಿನ ಪ್ರತಿಭಟನಾ ಕಾರರನ್ನು ಖೊಮೇನಿ ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿರುವುದನ್ನು ಚೀನಾ, ರಷ್ಯಾ ಮೊದಲಾದ ಅಗ್ರ ದೇಶಗಳು ವಿರೋಧಿಸಿವೆ. ಅಮೆರಿಕ ದೇಶದ ಅಧಕ್ಷರ ಕೈಗೊಂಬೆಗಳಾಗಿ ವರ್ತಿಸಿ ದೇಶದ ಆಂತರಿಕ ಆಡಳಿತವನ್ನು ದುರ್ಬಲಗೊಳಿಸಲೆತ್ನಿಸುವ ಎಲ್ಲ ವ್ಯಕ್ತಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವುದಾಗಿ ಖೊಮೇನಿ ಸರ್ಕಾರ ಈಗ ಕಟು ಎಚ್ಚರಿಕೆ ನೀಡಿದೆ. ಆದರೂ ಟೆಹರಾನ್ ಮತ್ತು ಪ್ರಮುಖ ನಗರಗಳಲ್ಲಿ ಸರ್ಕಾರದ ವಿರುದ್ಧ್ದ ಪ್ರತಿಭಟನೆ ಮತ್ತು ಹಿಂಸಾಚಾರದ ಘಟನೆಗಳು ಮುಂದುವರಿದಿವೆ.
ಈ ನಡುವೆ ಇರಾನ್ ಜೊತೆಗೆ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಹೊಂದಿರುವ ಎಲ್ಲ ದೇಶಗಳೂ ಕೂಡಲೇ ತಮ್ಮ ಒಪ್ಪಂದಗಳನ್ನು ಮುರಿಯಬೇಕೆಂದೂ, ಇಲ್ಲವಾದರೆ ಶೇಕಡಾ ೨೫ ರಷ್ಟು ಅಧಿಕ ಸುಂಕವನ್ನು ವಿಧಿಸುವುದಾಗಿ ಅಮೆರಿಕ ಈಗ ಪ್ರಪಂಚದ ಇತರ ದೇಶಗಳಿಗೂ ಬೆದರಿಕೆ ಹಾಕಿದೆ. ಒಟ್ಟಿನಲ್ಲಿ ಈ ವರ್ಷದ ಆರಂಭದಲ್ಲಿಯೇ ಇರಾನ್ ಮತ್ತು ಅಮೆರಿಕದ ನಡುವಣದ ಸಂಬಂಧಗಳು ಹದಗೆಟ್ಟಿದ್ದು ಜಾಗತಿಕ ಮಟ್ಟದಲ್ಲಿ ಇದು ಗಂಭೀರ ಪರಿಣಾಮವನ್ನು ಬೀರುವುದು ನಿಶ್ಚಿತ. ವೆನೆಜುವೆಲಾ ಜೊತೆಗೆ ಈಗ ಇರಾನ್‌ನಲ್ಲಿ ತಲೆದೋರಿದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಮಿಗಿಲಾಗಿ ಭದ್ರತಾ ಮಂಡಳಿ ಈ ವಿಚಾರದಲ್ಲಿ ಗಂಭೀರ ನಿಲುವು ತಾಳುವುದು ಅನಿವಾರ್ಯವಾಗಿದೆ.
ದೇಶಗಳ ಸಾರ್ವಭೌಮತೆ ಮತ್ತು ಶಾಂತಿಯನ್ನು ಕಾಪಾಡುವುದೇ ವಿಶ್ವಸಂಸ್ಥೆಯ ಮೂಲ ಮಂತ್ರವಾಗಿರುವಾಗ ಭದ್ರತಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಇನ್ನೂ ಯಾಕೆ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳುತ್ತಿಲ್ಲ ? ಇರಾನ್ ದೂರು ಸಲ್ಲಿಸುವ ಮುನ್ನವೇ ಸ್ವಪ್ರೇರಣೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ವಿಶ್ವಸಂಸ್ಥೆ ಈ ದೇಶಗಳ ನಡುವಣ ತಲೆದೋರಿರುವ ಉದ್ವಿಗ್ನತೆಯನ್ನು ಶಮನಗೊಳಿಸಬಹುದಿತ್ತು . ರಷ್ಯಾ ಮತ್ತು ಉಕ್ರೇನ್ ವಿಚಾರದಲ್ಲಿಯೂ ಖಡಕ್ ನಿಲುವು ತಾಳಲು ಅಸಮರ್ಥವಾಗಿರುವ ಭದ್ರತಾ ಮಂಡಳಿ ಈಗ ಇರಾನ್ ಮತ್ತು ಅಮೆರಿಕ ನಡುವಣದ ಬಿಕ್ಕಟ್ಟು ಬಗೆಹರಿಸುವ ವಿಚಾರದಲ್ಲಿ ಕಾದು ನೋಡುವಂತಹದು ಏನೂ ಇಲ್ಲ. ಒಟ್ಟಿನಲ್ಲಿ ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ಶಾಂತಿ ಕಾಪಾಡುವ ದಿಶೆಯಲ್ಲಿ ದಿಟ್ಟ ನಿಲುವು ತಾಳುವುದು ಅತ್ಯನಿವಾರ್ಯವೂ ಹೌದು.


