Wednesday, January 14, 2026
Menu

ಶಾಸಕ ಬಿ.ನಾಗೇಂದ್ರಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

nagendra

ಬೆಂಗಳೂರು:ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಸಂಬಂಧ ಆರೋಪಿ ಮಾಜಿ ಸಚಿವ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಸಿಬಿಐ ನೋಟೀಸ್ ಹಿನ್ನೆಲೆಯಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ​ವು, ಕೆಲ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 2 ಲಕ್ಷ ಮೊತ್ತದ ಬಾಂಡ್, ಇಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಿದೆ. ಅಲ್ಲದೇ ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ನಾಗೇಂದ್ರಗೆ ಕೋರ್ಟ್​ ಷರತ್ತು ಹಾಕಿದೆ.

ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ವಿಚಾರಣೆ ನಡೆಸಿದ್ದ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಬುಧವಾರಕ್ಕೆ ಆದೇಶ ಕಾಯ್ದಿರಿಸಿತ್ತು. ಅದರಂತೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಸಿಬಿಐ ಕುಣಿಕೆಯಿಂದ ನಾಗೇಂದ್ರ ಬಚಾವ್ ಆಗಿದ್ದಾರೆ.

ವಾದ-ಪ್ರತಿವಾದ ಹೇಗಿತ್ತು:

ಮಂಗಳವಾರ ವಿಚಾರಣೆ ವೇಳೆ ಪ್ರಕರಣದ ತನಿಖಾಧಿಕಾರಿಯೇ ಕೋರ್ಟ್‌ನಲ್ಲಿ ವಾದಮಂಡನೆ ಮಾಡಿದ್ದರು. ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರನ್ನು ಸಿಐಡಿ, ಇಡಿ ತನಿಖೆ ಮಾಡಿದೆ. ಅದಕ್ಕಿಂತ ಮುಂದುವರೆದು ಇದರಿಂದ ಫಲಾನುಭವಿಗಳು ಯಾರು ಎನ್ನುವುದನ್ನು ಪತ್ತೆ ಹಚ್ಚಬೇಕಿದೆ. ಇಲ್ಲಿಯವರೆಗೂ ನಡೆದ ತನಿಖೆಯ ಕೆಲ ಮಾಹಿತಿಗಳನ್ನು ತೆರೆದ ನ್ಯಾಯಾಲಯದಲ್ಲಿ ಹೇಳಲು ಸಾಧ್ಯವಿಲ್ಲ. ಮುಂಬೈನಲ್ಲಿ ಕೂಡ ದಾಳಿ ಮಾಡಿ ಮಾಹಿತಿ ಕಲೆಹಾಕಲಾಗಿದೆ.

ಹಗರಣದ ಹಣ ಚಿನ್ನ, ಬುಲಿಯನ್ ಆಗಿ ಕನ್ವರ್ಟ್ ಆಗಿದೆ. ಇದರ ಹಿಂದೆ ನಾಗೇಂದ್ರ, ಅವರ ಸಹಚರರು ಭಾಗಿಯಾಗಿದ್ದಾರೆ. ಇದರ ಹಿಂದೆ ಕೆಲ ಬೋಗಸ್ ಕಂಪನಿಗಳು ಭಾಗಿಯಾಗಿವೆ. ಈ ಪ್ರಕರಣದ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನ ಕಲೆ ಹಾಕಲಾಗಿದೆ ಎಂದು ಹೇಳಿ ಕೋರ್ಟ್‌ಗೆ ತಂದಿದ್ದ ಎರಡು ಸೂಟ್‌ಕೇಸ್ ದಾಖಲೆಗಳನ್ನು ತನಿಖಾಧಿಕಾರಿ ತೋರಿಸಿದ್ದರು.

ವಯಕ್ತಿಕ ವ್ಯವಹಾರ:

ಇದಕ್ಕೆ ಪ್ರತಿಯಾಗಿ ನಾಗೇಂದ್ರ ಪರ ವಕೀಲರು ಪ್ರತಿವಾದ ಮಂಡಿಸಿದ್ದು, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ವ್ಯವಹಾರ ಅವರ ವೈಯಕ್ತಿಕವಾಗಿದೆ. ಸಿಬಿಐ ಹೇಳುತ್ತಿರುವ ಟೆಂಡರ್‌ಗೂ ಈ ವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದರು. ಈ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಅಂತಿಮವಾಗಿ ನಾಗೇಂದ್ರಗೆ ಜಮೀನು ಮಂಜೂರು ಮಾಡಿದೆ.

8.07 ಕೋಟಿ ಮುಟ್ಟುಗೋಲು:

ಇದೇ ವಾಲ್ಮೀಕಿ ಅಭಿೃದ್ಧಿ ನಿಗಮ ಹಗರಣದಲ್ಲಿ ಈ ಹಿಂದೆ ಜೈಲು ಪಾಲಾಗಿದ್ದ ಬಿ ನಾಗೇಂದ್ರ ನಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಇನ್ನು ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸೇರಿದ 8.07 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಏನಿದು ಪ್ರಕರಣ:

ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂಗಳನ್ನು ಅಕ್ರಮವಾಗಿ ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ನಂತರ ಈ ಹಣವನ್ನು ಶೆಲ್ ಕಂಪನಿಗಳ ಮೂಲಕ ಲೂಟಿ ಮಾಡಲಾಗಿತ್ತು ಎಂಬ ಆರೋಪದ ಮೇಲೆ ಕರ್ನಾಟಕ ಪೊಲೀಸರು ಮತ್ತು ಸಿಬಿಐ ಎಫ್‌ಐಆರ್ ದಾಖಲಿಸಿದ್ದವು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಈ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಿ. ನಾಗೇಂದ್ರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು.

Related Posts

Leave a Reply

Your email address will not be published. Required fields are marked *